Fuel Demand: ಕೊರೊನಾ ಎರಡನೇ ಅಲೆ ಹೊಡೆತಕ್ಕೆ 9 ತಿಂಗಳ ಕನಿಷ್ಠ ಮಟ್ಟ ತಲುಪಿದ್ದ ಇಂಧನ ಬೇಡಿಕೆ ಜೂನ್‌ನಲ್ಲಿ ಮತ್ತೆ ಚೇತರಿಕೆ
ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರಿಂದ ಭಾರತದ ಇಂಧನ ಬೇಡಿಕೆಯು ಜೂನ್‌ನಲ್ಲಿ ಮತ್ತೆ ಚೇತರಿಕೆ ಕಂಡಿದೆ. 2021ರ ಮೇ ತಿಂಗಳಿನಲ್ಲಿ ಒಂಬತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ನಂತರ ಈ ಬೆಳವಣಿಗೆ ಆಗಿದೆ.
2021ರ ಮೇ ತಿಂಗಳಿನಲ್ಲಿ ಒಂಬತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ನಂತರ, ಕೊರೊನಾ ನಿರ್ಬಂಧಗಳನ್ನು (Covid-19 Lockdown) ಸಡಿಲಗೊಳಿಸಿದ್ದರಿಂದ ಭಾರತದ ಇಂಧನ ಬೇಡಿಕೆಯು (Fuel Demand) ಜೂನ್‌ನಲ್ಲಿ ಮತ್ತೆ ಚೇತರಿಕೆ ಕಂಡಿದೆ. ಕೊರೊನಾ ನಿರ್ಬಂಧ ಸಡಿಲ ಆಗಿದ್ದರಿಂದ ಆರ್ಥಿಕ ಚಟುವಟಿಕೆ ಮತ್ತು ಸಂಚಾರ ಹೆಚ್ಚಿಸಲು ಸಹಾಯ ಆಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ವಿಭಾಗದ (ಪಿಪಿಎಸಿ) ದತ್ತಾಂಶದಲ್ಲಿನ ಮಾಹಿತಿಯ ಪ್ರಕಾರ, ಇಂಧನ ಬಳಕೆಯು ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಈ ಬಾರಿ ಜೂನ್‌ನಲ್ಲಿ ಶೇಕಡಾ 1.5ರಷ್ಟು ಏರಿಕೆಯಾಗಿ, 16.33 ದಶಲಕ್ಷ ಟನ್‌ಗಳಿಗೆ ತಲುಪಿದೆ. ಪೆಟ್ರೋಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 5.6 ರಷ್ಟು ಏರಿಕೆ ಕಂಡು, ಜೂನ್‌ನಲ್ಲಿ 2.4 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಮೇ ತಿಂಗಳಲ್ಲಿ ಆದ 1.99 ದಶಲಕ್ಷ ಟನ್‌ಗಳ ಮಾರಾಟಕ್ಕೆ ಹೋಲಿಸಿದಲ್ಲಿ ಜೂನ್‌ನಲ್ಲಿ ಶೇಕಡಾ 21ರಷ್ಟು ಏರಿಕೆಯಾಗಿದೆ.
ದೇಶದಲ್ಲಿ ಹೆಚ್ಚು ಬಳಕೆ ಆಗುವ ಇಂಧನವಾದ ಡೀಸೆಲ್ ಮೇ ತಿಂಗಳಿಗಿಂತ ಶೇ 12ರಷ್ಟು ಏರಿಕೆಯಾಗಿ, ಜೂನ್‌ನಲ್ಲಿ 6.2 ದಶಲಕ್ಷ ಟನ್‌ಗಳಿಗೆ ತಲುಪಿದೆ. ಆದರೆ 2020ರ ಜೂನ್ಗೆ ಹೋಲಿಸಿದಲ್ಲಿ ಶೇಕಡಾ 1.5ರಷ್ಟು ಮತ್ತು 2019ರ ಜೂನ್‌ಗಿಂತ ಶೇಕಡಾ 18.8ರಷ್ಟು ಕಡಿಮೆಯಾಗಿದೆ. ಮಾರ್ಚ್ ನಂತರದಲ್ಲಿ ಮೊದಲ ಬಾರಿಗೆ ತಿಂಗಳ ಬಳಕೆ ಲೆಕ್ಕಾಚಾರದಲ್ಲಿ ಹೆಚ್ಚಳವಾಗಿದೆ. ಕೊವಿಡ್-19 ಎರಡನೇ ಅಲೆ ಪ್ರಾರಂಭವಾಗುವ ಮೊದಲು ಮಾರ್ಚ್‌ನಲ್ಲಿ ಇಂಧನ ಬೇಡಿಕೆ ಸಾಮಾನ್ಯ ಮಟ್ಟಕ್ಕೆ ಚೇತರಿಸಿಕೊಂಡಿತ್ತು, ಆದರೆ ಕೊರೊನಾ ಎರಡನೇ ಅಲೆಯ ಕಾರಣಕ್ಕೆ ವಿವಿಧ ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್ ಹೇರಲು ಕಾರಣವಾಗಿ, ಸಂಚಾರ ಮತ್ತು ಆರ್ಥಿಕ ಚಟುವಟಿಕೆಯನ್ನು ಸ್ಥಗಿತಗೊಳಿಸಿತು.
ಹಲವಾರು ರಾಜ್ಯಗಳಲ್ಲಿನ ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳ ಮಧ್ಯೆ 2020ರ ಆಗಸ್ಟ್‌ನ ನಂತರ ಬಳಕೆ ಪ್ರಮಾಣವು 2021ರ ಮೇ ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿಯಿತು. ನಿರ್ಬಂಧಗಳು ಸಡಿಲಗೊಳ್ಳಲು ಪ್ರಾರಂಭಿಸಿದ ನಂತರ ಮತ್ತು ಆರ್ಥಿಕತೆಯು ವೇಗವನ್ನು ಪಡೆದ ಮೇಲೆ ನಂತರ ಜೂನ್‌ನಲ್ಲಿ ಇಂಧನ ಬೇಡಿಕೆಯು ಪುನಶ್ಚೇತನದ ಲಕ್ಷಣಗಳನ್ನು ತೋರಿಸಿದೆ. ಕೊವಿಡ್ ಪ್ರಕರಣ ಸೇರ್ಪಡೆ ಕ್ಷೀಣಿಸುತ್ತಿರುವುದರಿಂದ ಮತ್ತು ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸುತ್ತಿರುವುದರಿಂದ, ರಾಜ್ಯ ಸರ್ಕಾರಗಳು ಎಲ್ಲ ಚಟುವಟಿಕೆಗಳನ್ನು ಮತ್ತೆ ಆರಂಭ ಮಾಡುವುದನ್ನು ಮುಂದುವರೆಸಿವೆ. ಆದರೂ ಮಹಾರಾಷ್ಟ್ರದಂತಹ ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಈಗಲೂ ಹಾಗೇ ಇದೆ.
ಈ ಹಿಂದಿನ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ತಿಂಗಳು ಭಾರತದ ಇಂಧನ ಬೇಡಿಕೆಯು ಕೊರೊನಾ ಹಿಂದಿನ ಮಟ್ಟಕ್ಕೆ 2021ರ ಅಂತ್ಯದ ವೇಳೆಗೆ ಚೇತರಿಸಿಕೊಳ್ಳಲಿದೆ ಎಂದು ಹೇಳಿದ್ದರು. “ಈ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಪೂರ್ವ-ಕೊವಿಡ್ ಬಳಕೆಯ ಮಟ್ಟವನ್ನು ತಲುಪಿರುತ್ತೇವೆ” ಎಂದಿದ್ದರು. ಸರ್ಕಾರವು ಬಡವರಿಗೆ ಉಚಿತವಾಗಿ ಪೂರೈಕೆ ಮಾಡಿದ್ದರಿಂದಾಗಿ ಮೊದಲ ಲಾಕ್‌ಡೌನ್ ಸಮಯದಲ್ಲೂ ಬೆಳವಣಿಗೆಯನ್ನು ತೋರಿಸಿದ ಏಕೈಕ ಇಂಧನವಾದ ಎಲ್‌ಪಿಜಿಯ ಬಳಕೆ ವರ್ಷಕ್ಕೆ ಶೇ 9.7 ರಷ್ಟು ಏರಿಕೆಯಾಗಿ, 2.26 ದಶಲಕ್ಷ ಟನ್‌ಗಳಿಗೆ ತಲುಪಿದೆ. ಇದು ಜೂನ್ 2019ಕ್ಕೆ ಹೋಲಿಸಿದರೆ ಶೇ 26.3ರಷ್ಟು ಏರಿಕೆಯಾಗಿದೆ.
ನಾಫ್ತಾ ಮಾರಾಟವು ಶೇಕಡಾ 3.1 ರಷ್ಟು ಇಳಿದು 1.19 ದಶಲಕ್ಷ ಟನ್‌ಗಳಿಗೆ ತಲುಪಿದ್ದರೆ, ರಸ್ತೆಗಳಿಗಾಗಿ ಬಳಸುವ ಬಿಟುಮೆನ್ ಮಾರಾಟವು ಶೇಕಡಾ 32ರಷ್ಟು ಇಳಿದು, 5,09,000 ಟನ್‌ಗಳಿಗೆ ತಲುಪಿದೆ. ಇಂಧನ ತೈಲ ಬಳಕೆ ಶೇಕಡಾ 1.9 ರಷ್ಟು ಏರಿಕೆ ಕಂಡು, 5,33,000 ಟನ್‌ಗಳಿಗೆ ತಲುಪಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಸೈಕಲ್ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಮ ಆಗುತ್ತೆ ಎಂದ ಬಿಜೆಪಿ ಸಂಸದ!
ಇದನ್ನೂ ಓದಿ: Sunny leone: ಪೆಟ್ರೋಲ್ ಬೆಲೆಯಿಂದ ತತ್ತರಿಸಿರುವ ಜನರಿಗೆ ಆರೋಗ್ಯದ ಪಾಠ ಹೇಳಿದ ಸನ್ನಿ ಲಿಯೋನ್
( India fuel demand rebound in June after slump to 9 month low in May)
Published On - 11:41 pm, Sat, 10 July 21