
ನವದೆಹಲಿ, ಮೇ 19: ಐದು ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತವು ಹಿಂದೆಂದೂ ಕಾಣದ ದೊಡ್ಡ “ಆರ್ಥಿಕ ಚಂಡಮಾರುತ” (Economic Storm) ಎದುರಿಸುವ ಹಂತದಲ್ಲಿದೆ ಎಂದು ಎಚ್ಚರಿಸಿದ್ದಾರೆ. ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ರಾಯ್‌ಬರೇಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಆರ್ಥಿಕ ನೀತಿಗಳು ಸಂಪೂರ್ಣವಾಗಿ ಕುಸಿಯಲಿದ್ದು, ಅದರ ಭೀಕರ ಪರಿಣಾಮವನ್ನು ಸಾಮಾನ್ಯ ನಾಗರಿಕರು ಅನುಭವಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಸುದ್ದಿಯ ಮುಖ್ಯಾಂಶಗಳು
ಕೇಂದ್ರದ ಆರ್ಥಿಕ ನೀತಿಗಳು ಕೇವಲ ಅದಾನಿ ಮತ್ತು ಅಂಬಾನಿಯಂತಹ ಆಯ್ದ ಕೆಲವು ಕೋಟ್ಯಧಿಪತಿ ಉದ್ಯಮಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುವಂತೆ ವ್ಯವಸ್ಥಿತವಾಗಿ ರೂಪಿಸಲ್ಪಟ್ಟಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್ಗಳು; ಯಾಕಿದು ಪ್ರತಿಭಟನೆ?
“ಮೋದಿ ಜಿ ಬದಲಾಯಿಸಿರುವ ಈ ಆರ್ಥಿಕ ರಚನೆಯು ಹೆಚ್ಚು ದಿನ ಉಳಿಯುವುದಿಲ್ಲ; ಇದು ಸಂಪೂರ್ಣವಾಗಿ ಕುಸಿಯುವುದು ನಿಶ್ಚಿತ. ಆದರೆ, ಈ ಕುಸಿತದ ಹೊರೆ ಸಾಮಾನ್ಯ ಜನರಿಗೆ ಆಗುತ್ತದೆಯೇ ಹೊರತು ಅಂಬಾನಿಯಂಥವರಿಗಲ್ಲ” ಎಂದು ಅವರು ಹೇಳಿದ್ದಾರೆ.
ಮುಂಬರುವ ಆರ್ಥಿಕ ಆಘಾತವು ಕಾರ್ಪೊರೇಟ್ ದಿಗ್ಗಜರನ್ನಾಗಲಿ ಅಥವಾ ರಾಜಕೀಯ ನಾಯಕರನ್ನಾಗಲಿ ಮುಟ್ಟುವುದಿಲ್ಲ. ಅವರು ತಮ್ಮ ಅರಮನೆಗಳಲ್ಲಿ ಸುರಕ್ಷಿತವಾಗಿ ಇರುತ್ತಾರೆ. ಆದರೆ ಇದರ ನೇರ ಹೊಡೆತ ಬೀಳುವುದು ದೇಶದ ಯುವಕರು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಮೇಲೆ. ವಿಶೇಷವಾಗಿ ಉತ್ತರ ಪ್ರದೇಶದ ಜನತೆ ಮತ್ತು ಯುವಸಮುದಾಯ ಇದರ ಸಂಪೂರ್ಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್ಗಳು
ದೇಶದ ಆಂತರಿಕ ರಚನಾತ್ಮಕ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. “ಮೋದಿ ಅವರು ದೇಶದ ಜನರಿಗೆ ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡಲು ಬುದ್ಧಿವಾದ ಹೇಳುತ್ತಾರೆ, ಆದರೆ ಸ್ವತಃ ತಾವೇ ಜಗತ್ತಿನಾದ್ಯಂತ ಸದಾ ಸುತ್ತುತ್ತಿರುತ್ತಾರೆ” ಎಂದು ಟೀಕಿಸಿದ ರಾಹುಲ್, ಮುಂಬರುವ ದಿನಗಳಲ್ಲಿ ದೇಶವು ಕಠಿಣ ಪರಿಸ್ಥಿತಿಯನ್ನು ಎದುರಿಸಲಿದ್ದು, ಕಳೆದ ಹಲವು ವರ್ಷಗಳಲ್ಲೇ ಕಾಣದಷ್ಟು ತೀವ್ರ ಸ್ವರೂಪದ ಆರ್ಥಿಕ ಆಘಾತ ಎದುರಾಗಲಿದೆ ಎಂದಿದ್ದಾರೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ (West Asian crisis) ಕಾರಣದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರುಪೇರಾಗಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಕಮರ್ಷಿಯಲ್ ಎಲ್ಪಿಜಿ ದರಗಳು ಬಹಳಷ್ಟು ಏರಿಕೆ ಆಗಿದೆ. ಗೃಹಬಳಕೆ ಎಲ್ಪಿಜಿ ದರವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಇದೇ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ, ಇದು “ಮೋದಿ ಸರ್ಕಾರವೇ ಸೃಷ್ಟಿಸಿದ ಬಿಕ್ಕಟ್ಟು” ಎಂದು ಕಿಡಿಕಾರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ