Poverty Index: 15 ವರ್ಷದಲ್ಲಿ 41 ಕೋಟಿ ಭಾರತೀಯರು ಬಡತನದಿಂದ ಹೊರಗೆ: ವಿಶ್ವಸಂಸ್ಥೆ
415 Million Indians Out of Poverty: ಭಾರತದಲ್ಲಿ 15 ವರ್ಷದಲ್ಲಿ ಬಡವರ ಸಂಖ್ಯೆ 41.5 ಕೋಟಿಯಷ್ಟು ಕಡಿಮೆ ಆಗಿದೆ ಎಂದು ವಿಶ್ವಸಂಸ್ಥೆ ಮತ್ತು ಆಕ್ಸ್ಫರ್ಡ್ನ ಅಂಗಸಂಸ್ಥೆಗಳು ನಡೆಸಿದ ಜಂಟಿ ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.
ನವದೆಹಲಿ: 2005ರಿಂದ 15 ವರ್ಷದ ಅವಧಿಯಲ್ಲಿ ಭಾರತದಲ್ಲಿ ಸಾಕಷ್ಟು ಜನರು ಬಡತನದ ಬಂಧ (Poverty) ಕಳಚಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತಿದೆ. ಜುಲೈ 11ಎಂದು ಪ್ರಕಟವಾದ ಈ ವರದಿ ಪ್ರಕಾರ, 2005ರ ಏಪ್ರಿಲ್ನಿಂದ 2020ರ ಮಾರ್ಚ್ವರೆಗಿನ ಅವಧಿಯಲ್ಲಿ 41.5 ಕೋಟಿ ಭಾರತೀಯರು ಬಡತನ ರೇಖೆಯಿಂದ ಮೇಲೇರಿರುವುದು ತಿಳಿದುಬಂದಿದೆ. 2005/06ರಲ್ಲಿ ಭಾರತದಲ್ಲಿ ಬಡತನ ಶೇ. 55.1ರಷ್ಟಿತ್ತು. 2019/2021ರ ಅವಧಿಯಲ್ಲಿ ಇದರ ಪ್ರಮಾಣ ಶೇ. 16.4ಕ್ಕೆ ಇಳಿಮುಖವಾಗಿದೆ.
2005/06ರಲ್ಲಿ ಭಾರತದಲ್ಲಿ 64.5 ಕೋಟಿ ಜನರು ಬಹು ಆಯಾಮಗಳ ಬಡತನಕ್ಕೆ ಸಿಲುಕಿದ್ದರು. 2015/16ರಲ್ಲಿ ಇದು 37 ಕೋಟಿಗೆ ಇಳಿಯಿತು. 2019/21ರಲ್ಲಿ ಈ ಸಂಖ್ಯೆ 23 ಕೋಟಿಗೆ ಬಂದಿದೆ.
ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ (UNDP- United Nations Development Programme), ಆಕ್ಸ್ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಯೋಜನೆ (OPHI- Oxford Poverty and Human Development Initiative) ಸಂಸ್ಥೆಗಳು ಸೇರಿ ಬಿಡುಗಡೆ ಮಾಡಿದ ಮಲ್ಟಿ ಡೈಮನ್ಷನಲ್ ಪಾವರ್ಟಿ ಇಂಡೆಕ್ಸ್ (MPI- Multidimensional Poverty Index) ವರದಿಯಲ್ಲಿ ಈ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 21ನೇ ಶತಮಾನದಲ್ಲಿ ಬಡತನದ ನಿರ್ಮೂಲನೆ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ಅವಲೋಕಿಸಲಾಗಿದೆ. ಅಂದರೆ 2000ರಿಂದ 2022ರವರೆಗೆ ಜಾಗತಿವಾಗಿ 81 ದೇಶಗಳಲ್ಲಿನ ಬಡತನದ ಬಗ್ಗೆ ಅಧ್ಯಯನ ಮಾಡಲಾಗಿದೆ. ಭಾರತವೂ ಸೇರಿದಂತೆ 25 ದೇಶಗಳು ಬಡತನ ನಿಯಂತ್ರಿಸಲು ಯಶಸ್ವಿಯಾಗಿವೆ.
ಇದನ್ನೂ ಓದಿ: Cess: ಎಸ್ಯುವಿ ಕಾರುಗಳಿಗೆ 28ಪರ್ಸೆಂಟ್ ಜಿಎಸ್ಟಿ ಜೊತೆಗೆ ಶೇ. 22 ಕಾಂಪೆನ್ಸೇಶನ್ ಸೆಸ್; ಯಾವ್ಯಾವುವು ಎಸ್ಯುವಿ ಕಾರುಗಳು?
ಭಾರತ, ಚೀನಾ, ಕಾಂಗೋ, ಹೊಂಡುರಸ್, ಇಂಡೋನೇಷ್ಯಾ, ಮೊರಾಕೋ, ಸರ್ಬಿಯಾ, ವಿಯೆಟ್ನಾಂ ಮೊದಲಾದ 25 ದೇಶಗಳು 15 ವರ್ಷದಲ್ಲಿ ಎಂಪಿಐ ಅನ್ನು ಅರ್ಧದಷ್ಟು ಇಳಿಸಲು ಯಶಸ್ವಿಯಾಗಿವೆ.
ಜಾಗತಿಕವಾಗಿ ಶೇ. 18ರಷ್ಟು ಕಡುಬಡವರು
ವಿಶ್ವಸಂಸ್ಥೆ ಸಿದ್ಧಪಡಿಸಿದ ಈ ಅಧ್ಯಯನ ವರದಿಯಲ್ಲಿ ಜಗತ್ತಿನ 110 ದೇಶಗಳಲ್ಲಿನ 610 ಕೋಟಿ ಜನರ ಪೈಕಿ 101 ಕೋಟಿ ಜನರು ಈಗಲೂ ಬಹುಸ್ತರದ ಕಡುಬಡತನದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಶೇ. 18ರಷ್ಟು ಜನರು ಕಡುಬಡವರಾಗಿದ್ದಾರೆ. ಪ್ರತೀ 6 ಮಂದಿ ಬಡವರಲ್ಲಿ ಐವರು ಆಫ್ರಿಕಾದ ಸಹಾರ ಮತ್ತು ದಕ್ಷಿಣ ಏಷ್ಯಾದ ದೇಶವಾಸಿಗಳಾಗಿರುವುದು ಗಮನಾರ್ಹ.
ಕೋವಿಡ್ ರೋಗದಿಂದ ವೇಗಕ್ಕೆ ತಡೆ
2020ರಲ್ಲಿ ಉದ್ಭವಿಸಿದ ಕೋವಿಡ್ ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನು ಅಲುಗಾಡಿಸಿದ ಸಂಗತಿ ಎಲ್ಲರಿಗೂ ಗೊತ್ತಿರಬಹುದು. ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆ ಅಧಃಪತನಗೊಂಡಿತ್ತು. ಅಲ್ಲಿಯವರೆಗೂ ಬಡತನದ ನಿರ್ಮೂಲನೆಯ ವೇಗ ಬಹಳ ಹೆಚ್ಚಿತ್ತು ಎಂಬ ಸಂಗತಿಯನ್ನು ವಿಶ್ವಸಂಸ್ಥೆ ಮತ್ತು ಆಕ್ಸ್ಫರ್ಡ್ ನಡೆಸಿದ ಜಂಟಿ ಅಧ್ಯಯನ ಕಂಡುಕೊಂಡಿದೆ.
ಕೋವಿಡ್ ನಂತರ ಪರಿಸ್ಥಿತಿ ಹೇಗೆ ಸಾಗಿದೆ ಎಂಬುದನ್ನು ಈ ಅಧ್ಯಯನದಲ್ಲಿ ಅವಲೋಕಿಸಲಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Wed, 12 July 23