
ನವದೆಹಲಿ, ಮೇ 8: ಎಗ್ಗಿಲ್ಲದೇ ಉಗ್ರಗಾಮಿಗಳನ್ನು ಅಮಾನುಷ ಕೃತ್ಯಗಳಿಗೆ ಬಳಸುತ್ತಾ ಬಂದಿರುವ ಪಾಕಿಸ್ತಾನಕ್ಕೆ ಭಾರತ ಈ ಬಾರಿ ಎಲ್ಲಾ ರೀತಿಯಿಂದಲೂ ಮರ್ಮಾಘಾತ ಕೊಡಲು ಅಣಿಯಾಗಿದೆ. ಈಗಾಗಲೇ ಹಲವು ಆಘಾತಗಳನ್ನು ಕೊಟ್ಟಿದೆ. ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿ ಪಾಕಿಸ್ತಾನಕ್ಕೆ ದಾಹ ಸೃಷ್ಟಿಸಿದೆ. ದೇಶದೊಳಗೆ ಕ್ಷಿಪಣಿಗಳನ್ನು ನುಗ್ಗಿಸಿ ಉಗ್ರರ ನೆಲೆ ಧ್ವಂಸ ಮಾಡಿದೆ. ಇವತ್ತು ಡಿಫೆನ್ಸ್ ಸಿಸ್ಟಂ ಅನ್ನು ನಾಶ ಮಾಡಿದೆ. ನಾಳೆ ಪಾಕಿಸ್ತಾನಕ್ಕೆ ಹಣದ ಹರಿವು ನಿಲ್ಲಿಸಲು ಭಾರತ ಹೊರಟಿದೆ. ಶುಕ್ರವಾರ (ಮೇ 9) ಪಾಕಿಸ್ತಾನಕ್ಕೆ ಸಾಲ ವಿತರಿಸುವ ಸಂಬಂಧ ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ನ ಸಭೆ (IMF loan) ನಡೆಯಲಿದೆ. ಇದರಲ್ಲಿ ಭಾರತದ ಅನಿಸಿಕೆಯೂ ನಿರ್ಧಾರದ ಮೇಲೆ ಪರಿಣಾಮ ಬೀರಬಹುದು.
ಪಾಕಿಸ್ತಾನಕ್ಕೆ ಐಎಂಎಫ್ ಈಗಾಗಲೇ 7 ಬಿಲಿಯನ್ ಡಾಲರ್ ಮೊತ್ತದ ಸಾಲವನ್ನು ಸ್ಯಾಂಕ್ಷನ್ ಮಾಡಿದೆ. ಈ ಸಾಲದ ಪರಾಮರ್ಶೆಯೂ ಮೇ 9ರ ಸಭೆಯಲ್ಲಿ ನಡೆಯಲಿದೆ. ಜೊತೆಗೆ ಹೆಚ್ಚುವರಿಯಾಗಿ 1.3 ಬಿಲಿಯನ್ ಡಾಲರ್ ಸಾಲಕ್ಕೆ ( ಪಾಕಿಸ್ತಾನ ಯಾಚಿಸಿದೆ. ಈ ಸಾಲ ಕೊಡುವುದೋ ಬೇಡವೋ ಎಂಬುದನ್ನು ಐಎಂಎಫ್ ಈ ಸಭೆಯಲ್ಲಿ ಚರ್ಚಿಸಲಿದೆ. 350 ಬಿಲಿಯನ್ ಡಾಲರ್ ಗಾತ್ರದ ಪಾಕಿಸ್ತಾನದ ಆರ್ಥಿಕತೆ ಈಗ ಸಂಕಷ್ಟದ ಸ್ಥಿತಿಯಲ್ಲಿದ್ದು, ಈ ಸಾಲಗಳು ಬಹಳ ಮಹತ್ವದ್ದೆನಿಸಿವೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ಕೊಡಬೇಡಿ: ಐಎಂಎಫ್ಗೆ ಭಾರತ ಮನವಿ; ಈ ಸಾಲ ತಪ್ಪಿದರೆ ಪಾಕಿಸ್ತಾನಕ್ಕೆ ಏನು ಸಮಸ್ಯೆ?
ಪಾಕಿಸ್ತಾನಕ್ಕೆ ಸಾಲ ಕೊಟ್ಟರೆ ಅದು ಭಯೋತ್ಪಾದನೆಗೆ ಬಳಕೆ ಆಗುತ್ತದೆ. ಈ ದೇಶಕ್ಕೆ ಸಾಲ ಕೊಡಬೇಡಿ ಎಂದು ಭಾರತವು ಐಎಂಎಫ್ ಹಾಗು ವಿಶ್ವಬ್ಯಾಂಕುಗಳಿಗೆ ಮನವಿ ಮಾಡಿದೆ. ನಾಳೆ ನಡೆಯುವ ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಭಾರತವು ತನ್ನ ಅನಿಸಿಕೆ ವ್ಯಕ್ತಪಡಿಸಲಿದೆ. ಕೇಂದ್ರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನಲ್ಲಿ ಭಾರತದಿಂದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದ ಕೆ.ವಿ. ಸುಬ್ರಮಣಿಯನ್ ಅವರನ್ನು ಭಾರತ ಕಳೆದ ತಿಂಗಳು ಹಿಂಪಡೆದಿತ್ತು. ಈಗ ಅವರ ಸ್ಥಾನಕ್ಕೆ ಪರಮೇಶ್ವರನ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ನಾಳೆಯ ಸಭೆಯಲ್ಲಿ ಅಯ್ಯರ್ ಅವರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ
ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭೂತಾನ್ ಇರುವ ಸೌತ್ ಏಷ್ಯಾ ಕ್ಷೇತ್ರವನ್ನು ಭಾರತ ಪ್ರತಿನಿಧಿಸುತ್ತದೆ. ಈ ನಾಲ್ಕು ದೇಶಗಳನ್ನು ಪರಮೇಶ್ವರನ್ ಅಯ್ಯರ್ ಪ್ರತಿನಿಧಿಸುತ್ತಾರೆ. ಈ ರೀತಿ ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ನ್ಲಲಿ 15 ಡೈರೆಕ್ಟರ್ಸ್ ಇದ್ದಾರೆ. ಅಮೆರಿಕ, ಜಪಾನ್, ಚೀನಾ, ಜರ್ಮನಿ, ಫ್ರಾನ್ಸ್, ಬ್ರಿಟನ್, ಸೌದಿ ಅರೇಬಿಯ, ರಷ್ಯಾ ದೇಶಗಳು ಸ್ವತಂತ್ರ ಸದಸ್ಯರನ್ನು ಹೊಂದಿವೆ. ಉಳಿದ ದೇಶಗಳನ್ನು ಕ್ಷೇತ್ರವಾರು ವಿಂಗಡಣೆ ಮಾಡಲಾಗಿದೆ. ಒಟ್ಟು 25 ಎಕ್ಸಿಕ್ಯೂಟಿವ್ ಡೈರೆಕ್ಟರ್ಗಳಿರುತ್ತಾರೆ. ಪಾಕಿಸ್ತಾನವು ಮಧ್ಯಪ್ರಾಚ್ಯ ದೇಶಗಳ ಗುಂಪಿನಲ್ಲಿದೆ.
ಐಎಂಎಫ್ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಪಾಕಿಸ್ತಾನಕ್ಕೆ ಸಾಲ ನೀಡಬೇಕೋ ಬೇಡವೋ ಎಂದು ನಿರ್ಧರಿಸಲು ಮತದಾನ ನಡೆಯಬಹುದು. ಬಹುಮತ ಬಂದರೆ ಸಾಲ ನೀಡಲಾಗುತ್ತದೆ. ಭಾರತವು ಇತರ ದೇಶಗಳನ್ನು ಪ್ರಭಾವಿಸಿ ಬಹುಮತ ಸಿಗದಂತೆ ತಡೆಯಲು ಸಾಧ್ಯವಾಗುತ್ತದಾ ಎಂದು ಕಾದು ನೋಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ