
ನವದೆಹಲಿ, ಸೆಪ್ಟೆಂಬರ್ 21: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾರಿತ್ರಿಕ ಮಹಾ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ / ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಅಂತಿಮಗೊಳಿಸಲಾಗಿದೆ. ವಿಜಯದಶಮಿ ದಿನವಾದ ಅಕ್ಟೋಬರ್ 20ರಂದು ಈ ಎಫ್ಟಿಎ ಜಾರಿಗೆ ಬರಲಿದೆ. ಈ ಒಪ್ಪಂದದ ಮೂಲಕ ಎರಡೂ ದೇಶಗಳ ನಡುವಿನ ಶೇ. 90ಕ್ಕೂ ಹೆಚ್ಚು ಸರಕು ಮತ್ತು ಸೇವೆಗಳ ಮೇಲಿನ ಆಮದು ಸುಂಕವನ್ನು (Duty-Free Trade) ರದ್ದುಗೊಳಿಸಲಾಗಲಿದೆ ಅಥವಾ ಗಣನೀಯವಾಗಿ ಕಡಿತಗೊಳಿಸಲಾಗುತ್ತದೆ. ಇದರ ಜೊತೆಗೆ, ಮುಂಬರುವ ವರ್ಷಗಳಲ್ಲಿ ನ್ಯೂಜಿಲೆಂಡ್ ಭಾರತದಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ($20 Billion) ಬಂಡವಾಳ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದೆ.
ಈ ಒಪ್ಪಂದ ಸಾಕಾರಗೊಳ್ಳಲು ಶ್ರಮಿಸಿದವರಲ್ಲಿ ವಾಣಿಜ್ಯ ಸಚಿವ ಪೀಯುಷ್ ಗೋಯಲ್ ಪ್ರಮುಖರು. ಈ ಒಪ್ಪಂದದ ಕುರಿತು ಎಕ್ಸ್ನಲ್ಲಿ ಬರೆದಿರುವ ಅವರು, ವಿಜಯದಶಮಿ ದಿನದಂದು ಅದು ಜಾರಿಗೆ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
‘ಎರಡೂ ದೇಶಗಳಿಗೆ ಇದು ಗೆಲುವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ಎಫ್ಟಿಎ ವಿಜಯದಶಮಿ ದಿನವಾದ 2026ರ ಅಕ್ಟೋಬರ್ 20ರಂದು ಜಾರಿಗೆ ಬರುತ್ತದೆ’ ಎಂದು ವಾಣಿಜ್ಯ ಸಚಿವರು ತಿಳಿಸಿದ್ದಾರೆ.
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರೂ ಕೂಡ ಈ ವ್ಯಾಪಾರ ಒಪ್ಪಂದ ಜಾರಿಗೊಳ್ಳುತ್ತಿರುವುದಕ್ಕೆ ಸಂತಸ ಪಟ್ಟಿದ್ದಾರೆ. ಈ ಎಫ್ಟಿಎಯಿಂದಾಗಿ ಹಲವು ಉದ್ಯಮಗಳು ಬೆಳವಣಿಗೆ ಕಾಣಲಿವೆ. ರಫ್ತುದಾರರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಹೆಚ್ಚು ಉದ್ಯೋಗ ಹೆಚ್ಚು ಆದಾಯ ಸಿಗುತ್ತದೆ ಎಂದು ತಮ್ಮ ದೇಶಕ್ಕಾಗುವ ಲಾಭವನ್ನು ಅವರು ತೋರ್ಪಡಿಸಿದ್ದಾರೆ.
ನ್ಯೂಜಿಲೆಂಡ್ ಪಿಎಂ ಲುಕ್ಸನ್ ಅವರ ಎಕ್ಸ್ ಪೋಸ್ಟ್
Almost exactly three years ago, I committed that National would secure a free trade deal with India within our first term if elected.
And today, we finalised the deal, which comes into force next month.
It is exciting to think of how many businesses will grow as a result of… pic.twitter.com/WQt04FNHXi
— Christopher Luxon (@chrisluxonmp) September 21, 2026
ಇದನ್ನೂ ಓದಿ: Tata Aeris: ಟಾಟಾ ಕಂಪನಿಯಿಂದ ಬರುತ್ತಿದೆ ಏರಿಸ್ ಹೆಸರಿನ ಹೊಸ ಕಾರು: ದಂಗಾದ ಅಟೋ ಮಾರುಕಟ್ಟೆ
ಇದನ್ನೂ ಓದಿ: ಇಬ್ಬರಲ್ಲಿ ಬಹುಮತಕ್ಕೆ ಇಬ್ಬರದ್ದೂ ಮತ ಬೇಕಲ್ಲವಾ? ಚಂದ್ರಶೇಖರನ್ ಮರುನೇಮಕ ನಿರ್ಧಾರ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್
ಈ ಒಪ್ಪಂದವು ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತದ ವ್ಯಾಪಾರಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದ್ದು, ಭಾರತೀಯ ರಫ್ತುದಾರರಿಗೆ ಮತ್ತು ಯುವ ವೃತ್ತಿಪರರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ.
ಭಾರತ ಈಗಾಗಲೇ ಕೆಲವಾರು ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಯುಎಇ, ಆಸ್ಟ್ರೇಲಿಯಾ, ಜಪಾನ್, ದಕ್ಷಿಣ ಕೊರಿಯಾ, ಮಾರಿಷಸ್ ಮತ್ತು ಸಿಂಗಾಪುರದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಅಥವಾ ಆರ್ಥಿಕ ಸಹಕಾರ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ.
ಆಗ್ನೇಯ ಏಷ್ಯನ್ ರಾಷ್ಟ್ರಗಳ ಆಸಿಯಾನ್ ಕೂಟ, ಯೂರೋಪಿಯನ್ ವ್ಯಾಪಾರ ಸಂಘಟನೆಯ ಕೂಟ, ದಕ್ಷಿಣ ಏಷ್ಯನ್ ವ್ಯಾಪಾರ ಕೂಟವಾದ ಸಾಫ್ಟ, ಬಂಗಾಳ ಕೊಲ್ಲಿ ಸುತ್ತಲಿನ ದೇಶಗಳ ಬಿಸ್ಮ್ಟೆಕ್ ಕೂಟದ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ಒಪ್ಪಂದ ಚಾಲನೆಯಲ್ಲಿ ಇದೆ.
ಅಮೆರಿಕ, ಯುಕೆ, ಐರೋಪ್ಯ ಒಕ್ಕೂಟ, ಒಮಾನ್ ದೇಶಗಳೊಂದಿಗೆ ಒಪ್ಪಂದ ಸಂಬಂಧ ಮಾತುಕತೆ ನಡೆಯುತ್ತಿದೆ. ಈ ಪೈಕಿ ಯುಕೆ, ಇಯು ಮತ್ತು ಒಮಾನ್ ದೇಶಗಳೊಂದಿಗೆ ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ. ಬಹಳ ಬೇಗ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Mon, 21 September 26