2024ರಲ್ಲಿ ಡಾಲರ್ ಎದುರು ಭಾರತೀಯ ರುಪಾಯಿ ನೀರಸ ಪ್ರದರ್ಶನ ತೋರಿತಾ? ಇಲ್ಲಿದೆ ವಾಸ್ತವ ಸಂಗತಿ
Indian Rupee currency value: ಯುಎಸ್ ಡಾಲರ್ ಎದುರು ಭಾರತದ ರುಪಾಯಿ ಕರೆನ್ಸಿ ಮೌಲ್ಯ 2024ರಲ್ಲಿ ಶೇ. 3ರಷ್ಟು ಕುಸಿದಿದೆ. ಆದರೆ, ಇತರ ವಿಶ್ವ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರುಪಾಯಿ ಕಡಿಮೆ ಅಸ್ಥಿರತೆ ತೋರಿರುವುದು ಅಂಕಿ ಅಂಶಗಳಿಂದ ತಿಳಿಯುತ್ತದೆ. 2025ರಲ್ಲಿ ರುಪಾಯಿ ಕರೆನ್ಸಿ ಡಾಲರ್ ಎದುರು ಬಲಿಷ್ಠಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನವದೆಹಲಿ, ಡಿಸೆಂಬರ್ 29: ಭಾರತದ ರುಪಾಯಿ ಕರೆನ್ಸಿ ಮೌಲ್ಯ ಕುಸಿದುಹೋಗುತ್ತಿದೆ ಎನ್ನುವ ಮಾಹಿತಿಯನ್ನು ಸಾಕಷ್ಟು ಬಾರಿ ನೀವು ನೋಡಿರಬಹುದು. 2024ರಲ್ಲಿ ಅಮೆರಿಕನ್ ಡಾಲರ್ ಎದುರು ರುಪಾಯಿ ಮೌಲ್ಯ ಶೇ. 3ರಷ್ಟು ಕುಸಿದಿರುವುದು ಹೌದು. ಭಾರತದ ಆರ್ಥಿಕ ಬೆಳವಣಿಗೆಯ ವೇಗ ತುಸು ಮಂದಗೊಂಡಿರುವುದು, ಜಾಗತಿಕ ಮಾರುಕಟ್ಟೆಗಳಲ್ಲಿ ಡಾಲರ್ಗೆ ಬೇಡಿಕೆ ಹೆಚ್ಚಿದ್ದು ರುಪಾಯಿ ಕರೆನ್ಸಿ ಮೌಲ್ಯ ತುಸು ತಗ್ಗಲು ಕಾರಣ. ಈಗ ಅದು ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದಿದೆ. ಆದರೂ ಕೂಡ ವಿಶ್ವದಲ್ಲಿ ಅತಿ ಕಡಿಮೆ ಅಸ್ಥಿರತೆ ಕಂಡ ಕರೆನ್ಸಿಗಳಲ್ಲಿ ರುಪಾಯಿ ಇದೆ ಎನ್ನುವುದು ಗಮನಾರ್ಹ. ವಿಶ್ವದ ಬಹಳಷ್ಟು ಕರೆನ್ಸಿಗಳು ಡಾಲರ್ ಎದುರು ತೀರಾ ಕಳಪೆ ಪ್ರದರ್ಶನ ನೀಡಿವೆ. ಅವುಗಳಿಗೆ ಹೋಲಿಸಿದರೆ ರುಪಾಯಿ ಎಷ್ಟೋ ಮಟ್ಟಿಗೆ ಪ್ರತಿರೋಧ ತೋರಿದೆ.
2024ರಲ್ಲಿ ಜಾಗತಿಕವಾಗಿ ಕರೆನ್ಸಿ ಮಾರುಕಟ್ಟೆ ಸಂಚಲನದ ಸ್ಥಿತಿಯಲ್ಲಿತ್ತು. ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್ ಯುದ್ಧ, ರೆಡ್ ಸೀ ಬಿಕ್ಕಟ್ಟು, ಪ್ರಮುಖ ದೇಶಗಳಲ್ಲಿ ಚುನಾವಣೆ ಇವೆಲ್ಲವೂ ಕೂಡ ವಿವಿಧ ಕರೆನ್ಸಿಗಳ ಎದುರು ರುಪಾಯಿ ಪ್ರದರ್ಶನದ ಮೇಲೆ ನಿರಂತರ ಪರಿಣಾಮ ಬೀರಿದೆ. ಗಮನಿಸಬೇಕಾದ ಸಂಗತಿ ಎಂದರೆ ರುಪಾಯಿ ಕರೆನ್ಸಿ ಕುಸಿತ ಕಂಡಿದೆಯಾದರೂ ಡಾಲರ್ ಕರೆನ್ಸಿಗೆ ಹೋಲಿಸಿದರೆ ಇತರ ಕರೆನ್ಸಿಗಳ ಎದುರು ರುಪಾಯಿ ಮೌಲ್ಯ ಹೆಚ್ಚಿನ ಮಟ್ಟಿಗೆ ಕುಸಿತ ಕಂಡಿಲ್ಲ. ಯೂರೋ ಮತ್ತು ಜಪಾನಿ ಯೆನ್ ಕರೆನ್ಸಿ ಎದುರು ರುಪಾಯಿ ಪಾಸಿಟಿವ್ ಆಗಿದೆ.
ಇದನ್ನೂ ಓದಿ: ಈ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ. 6.5ರಿಂದ ಶೇ. 6.8ರ ಶ್ರೇಣಿಯಲ್ಲಿರುವ ಸಾಧ್ಯತೆ: ಡುಲಾಯ್ಟ್ ವರದಿ
ಆರ್ಬಿಐ ಮುನ್ನೆಚ್ಚರಿಕೆಯಾಗಿ ಕೆಲ ತಿಂಗಳುಗಳಿಂದ ಫಾರೆಕ್ಸ್ ಮೀಸಲು ನಿಧಿಯನ್ನು ಉಬ್ಬಿಸುತ್ತಲೇ ಹೋಗಿತ್ತು. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 704.89 ಬಿಲಿಯನ್ ಡಾಲರ್ಗೆ ಏರಿತ್ತು. ಇದು ರುಪಾಯಿ ಮೌಲ್ಯ ತೀರಾ ಕುಸಿಯದಂತೆ ನೋಡಿಕೊಳ್ಳಲು ಆರ್ಬಿಐಗೆ ಸಾಧ್ಯ ಮಾಡಿಕೊಟ್ಟಿದೆ. ಹೀಗಾಗಿ, ಫಾರೆಕ್ಸ್ ರಿಸರ್ವ್ಸ್ ಸದ್ಯ 650 ಬಿಲಿಯನ್ ಡಾಲರ್ಗಿಂತ ಕೆಳಗೆ ಬಂದಿದೆ.
2024ರ ಜನವರಿ 1ರಂದು ಡಾಲರ್ ಎದುರು ರುಪಾಯಿ 83.19 ರ ಮಟ್ಟದಲ್ಲಿ ಇತ್ತು. ಡಿಸೆಂಬರ್ 27ರಂದು ಒಂದು ಹಂತದಲ್ಲಿ 85.80 ಯ ದಾಖಲೆ ಮಟ್ಟಕ್ಕೆ ಕುಸಿದಿತ್ತು. ಇವತ್ತು (ಡಿ. 29) ರುಪಾಯಿ ಮೌಲ್ಯ 85.39 ರೂ ಇದೆ. ಒಂದು ವರ್ಷದ ಅಂತರದಲ್ಲಿ ಡಾಲರ್ ಎದುರು ಕುಸಿದಿರುವುದು ಶೇ. 3 ಮಾತ್ರ. ಇದರಲ್ಲಿ ಹೆಚ್ಚಿನ ಕುಸಿತ ಆಗಿರುವುದು ಕಳೆದ ಎರಡು ತಿಂಗಳಲ್ಲೇ. ಅದು ಬಿಟ್ಟರೆ ಉಳಿದಂತೆ ರುಪಾಯಿ ಕರೆನ್ಸಿ ಮೌಲ್ಯದ ಕುಸಿತ ಬಹಳ ಮಂದವೇಗದಲ್ಲಿ ಇತ್ತು.
2024ರ ಆರಂಭದಲ್ಲಿ ಡಾಲರ್ ಎದುರು ಚೀನಾದ ಯುವಾನ್ ಕರೆನ್ಸಿ 7.09 ಮಟ್ಟದಲ್ಲಿ ಇತ್ತು. ಇವತ್ತು ಅದು 7.30ಗೆ ಕುಸಿದಿದೆ. ಇದೂ ಕೂಡ ಒಂದು ವರ್ಷದಲ್ಲಿ ಶೇ. 3ರಷ್ಟು ಕುಸಿತ ಕಂಡಿದೆ. ಪೌಂಡ್, ಯೆನ್ ಇತ್ಯಾದಿ ಹೆಚ್ಚಿನ ಕರೆನ್ಸಿಗಳು ಡಾಲರ್ ಎದುರು ರುಪಾಯಿಗಿಂತಲೂ ಹೀನಾಯ ಪ್ರದರ್ಶನ ತೋರಿವೆ.
ಇದನ್ನೂ ಓದಿ: ಭಾರತದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸ್ಟಾರ್ಟಪ್ಗಳು; ಅರ್ಧದಷ್ಟು ಕಂಪನಿಗಳಲ್ಲಿ ಮಹಿಳಾ ನಿರ್ದೇಶಕರು
ಯೂರೋ ಕರೆನ್ಸಿ ಎದುರು ಆಗಸ್ಟ್ 27ರಂದು 93.75 ರೂಪಾಯಿ ಮೌಲ್ಯ ಇತ್ತು. ಡಿಸೆಂಬರ್ 27ರಂದು ರುಪಾಯಿ ಮೌಲ್ಯ 89.11 ಮಟ್ಟಕ್ಕೆ ಹೆಚ್ಚಿದೆ.
2025ರಲ್ಲಿ ರುಪಾಯಿ ಕರೆನ್ಸಿ ಹೆಚ್ಚು ಆಶಾದಾಯಕವಾಗಬಹುದು…
2025ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ಅವರು ಚೀನಾದ ಆಮದುಗಳಿಗೆ ಹೆಚ್ಚಿನ ಸುಂಕ ವಿಧಿಸಬಹುದು. ಇದರಿಂದ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಬಹುದು. ಇದರಿಂದ ಅಲ್ಲಿನ ಫೆಡರರ್ ರಿಸರ್ವ್ಸ ಸಂಸ್ಥೆ ಬಡ್ಡಿದರವನ್ನು ಕಡಿಮೆ ಮಾಡಬಹುದು. ಇದು ಭಾರತದಂತಹ ದೇಶಗಳ ಕರೆನ್ಸಿಗಳಿಗೆ ಉಸಿರು ನೀಡಿದಂತಾಗಬಹುದು ಎಂದು ಕೋಟಕ್ ಸೆಕ್ಯೂರಿಟೀಸ್ ಸಂಸ್ಥೆಯ ತಜ್ಞರಾದ ಅನಿಂದ್ಯ ಬ್ಯಾನರ್ಜಿ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ