ಈ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ. 6.5ರಿಂದ ಶೇ. 6.8ರ ಶ್ರೇಣಿಯಲ್ಲಿರುವ ಸಾಧ್ಯತೆ: ಡುಲಾಯ್ಟ್ ವರದಿ
Indian economy growth rate: 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ದರ ಶೇ. 6.5ರಿಂದ ಶೇ. 6.8ರಷ್ಟಿರಬಹುದು. 2025-26ರ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ 6.7ರಿಂದ ಶೇ. 7.3ರಷ್ಟಿರಬಹುದು ಎಂದು ಡುಲಾಯ್ಟ್ ಇಂಡಿಯಾದ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ಹಲವು ಸಮಸ್ಯೆಗಳ ನಡುವೆಯೂ ಭಾರತದ ಆರ್ಥಿಕತೆಯ ಶಕ್ತಿ ಕಡಿಮೆಗೊಂಡಿಲ್ಲ. ಸರ್ಕಾರದ ವಿವಿಧ ಕ್ರಮಗಳ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಜಿಡಿಪಿ ಬೆಳವಣಿಗೆ ಆಶಾದಾಯಕವಾಗಿರಬಹುದು ಎನ್ನಲಾಗಿದೆ.
ನವದೆಹಲಿ, ಡಿಸೆಂಬರ್ 29: ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ (2024-25) ಶೇ. 6.5ರಿಂದ ಶೇ. 6.8ರ ಶ್ರೇಣಿಯಲ್ಲಿ ಬೆಳವಣಿಗೆ ಹೊಂದಬಹುದು ಎಂದು ಡುಲಾಯ್ಟ್ ಸಂಸ್ಥೆಯ ಆರ್ಥಕ ತಜ್ಞರು ಅಂದಾಜಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ (2025-26) ಆರ್ಥಿಕತೆ ಇನ್ನೂ ಹೆಚ್ಚಿನ ವೇಗದಲ್ಲಿ ಬೆಳೆಯಬಹುದು ಎಂಬುದು ಇವರ ಅನಿಸಿಕೆ. ಇವರ ಪ್ರಕಾರ 2025-26ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 6.7ರಿಂದ ಶೇ. 7.3ರಷ್ಟಿರಬಹುದು.
ಅತಿವೃಷ್ಟಿ, ಜಾಗತಿಕ ರಾಜಕೀಯ ಬಿಕ್ಕಟ್ಟು ಇತ್ಯಾದಿ ಕಾರಣಕ್ಕೆ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ಬೆಳವಣಿಗೆ ನಿರೀಕ್ಷೆಯ ಮಟ್ಟ ತಲುಪುವಲ್ಲಿ ವಿಫಲವಾಯಿತು. ಈ ಅವಧಿಯಲ್ಲಿ ಆಂತರಿಕ ಬೇಡಿಕೆ ಮತ್ತು ರಫ್ತು ಕಡಿಮೆಗೊಂಡವು. ಇದು ಮೊದಲಾರ್ಧದ ವಿಚಾರ. ಆದರೆ, ದ್ವಿತೀಯಾರ್ಧದಲ್ಲಿ ಕೆಲ ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಸರ್ವಿಸ್ ಸೆಕ್ಟರ್ ಆಶಾದಾಯಕ ಎನಿಸಿದೆ. ಅಧಿಕ ಮೌಲ್ಯದ ಉತ್ಪನ್ನಗಳ ತಯಾರಿಕೆ ಉತ್ತಮವಾಗಿತ್ತು. ಅನುಭೋಗ ಪ್ರಮಾಣ ಹೆಚ್ಚಿತ್ತು ಎಂದು ಡುಲಾಯ್ಟ್ ಇಂಡಿಯಾದ ಆರ್ಥಿಕ ತಜ್ಞರಾದ ರುಮ್ಕಿ ಮಜುಮ್ದಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸ್ಟಾರ್ಟಪ್ಗಳು; ಅರ್ಧದಷ್ಟು ಕಂಪನಿಗಳಲ್ಲಿ ಮಹಿಳಾ ನಿರ್ದೇಶಕರು
ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲೀಕರಣ ಮತ್ತು ಎಫ್ಡಿಐನತ್ತ ಸರ್ಕಾರ ಮುತುವರ್ಜಿ ತೋರುತ್ತಿರುವುದು ಮುಂದುವರಿಯುತ್ತಿದೆ. ಈ ಸಂಗತಿಗಳು ಆರ್ಥಿಕ ಬೆಳವಣಿಗೆಗೆ ಹೆಚ್ಚುವರಿ ವೇಗ ನೀಡಬಲ್ಲುದು. ಆದರೂ ಕೂಡ ಈ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ. 6.5ರಿಂದ ಶೇ. 6.8ರಷ್ಟಕ್ಕೆ ಮಾತ್ರ ನಮ್ಮ ಅಂದಾಜನ್ನು ಸೀಮಿತಗೊಳಿಸಿದ್ದೇವೆ. ಮುಂಬರುವ ಹಣಕಾಸು ವರ್ಷದಲ್ಲಿ ತುಸು ಹೆಚ್ಚಿನ ಬೆಳವಣಿಗೆ ನಿರೀಕ್ಷಿಸುತ್ತಿದ್ದೇವೆ ಎಂದು ಮಜುಮ್ದಾರ್ ಅವರ ಅನಿಸಿಕೆ.
ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ಕೆಮಿಕಲ್ನಂತಹ ಅಧಿಕ ಮೌಲ್ಯದ ಉತ್ಪನ್ನಗಳ ರಫ್ತು ಹೆಚ್ಚುತ್ತಿದೆ. ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತ ಹೆಚ್ಚು ಮಾನ್ಯತೆ ಪಡೆಯುತ್ತಿದೆ. ಕಳೆದ ಎರಡು ಮತ್ತು ಎರಡೂವರೆ ತಿಂಗಳಲ್ಲಿ ವಿದೇಶೀ ಹೂಡಿಕೆಗಳು ಸಾಕಷ್ಟು ಹೊರಹೋದರೂ ಬಂಡವಾಳ ಮಾರುಕಟ್ಟೆ ಸ್ಥಿರತೆ ತೋರಿದೆ. ರೀಟೇಲ್ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಎಫ್ಐಐ ಹೊರಹರಿವಿನ ಪರಿಣಾಮವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡುಲಾಯ್ಟ್ನ ಆರ್ಥಿಕ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಷೇರುಮಾರುಕಟ್ಟೆಯ ಸ್ಥಿರ ಪ್ರದರ್ಶನ; ದಾಖಲೆಯ ಸತತ 9ನೇ ವರ್ಷ ಸಕಾರಾತ್ಮಕ ರಿಟರ್ನ್ ಕೊಟ್ಟ ನಿಫ್ಟಿ, ಸೆನ್ಸೆಕ್ಸ್
ಕೃಷಿ ಆದಾಯ, ನಿಖರ ಸಬ್ಸಿಡಿ, ಸಾಮಾಜಿಕ ಕಲ್ಯಾಣ ಯೋಜನೆಗಳು, ಉದ್ಯೋಗ ಸೃಷ್ಟಿ ಯೋಜನೆಗಳು, ಡಿಜಿಟಲೀಕರಣ, ಸರ್ವಿಸ್ ಸೆಕ್ಟರ್ ಬೆಳವಣಿಗೆ ಇವೆಲ್ಲವೂ ಕೂಡ ಸ್ಥೂಲವಾಗಿ ಅನುಭೋಗ ವೆಚ್ಚಕ್ಕೆ ಅನುಕೂಲ ಮಾಡಿಕೊಟ್ಟಿವೆ ಎಂದಿದ್ದಾರೆ ಅವರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ