
ನವದೆಹಲಿ, ಮಾರ್ಚ್ 3: ಇರಾನ್ ಯುದ್ಧದ ಪರಿಣಾಮ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ತೈಲ ಸಾಗಣೆಗೆ ಅಡ್ಡಿಯಾಗಿರುವುದರಿಂದ ಭಾರತಕ್ಕೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ದಟ್ಟವಾಗಿದೆ. ಹಲವು ವಾರಗಳ ಕಾಲ ಈ ಪರಿಸ್ಥಿತಿ ಮುಂದುವರಿಯುವುದರಿಂದ ಭಾರತವು ತೈಲ ಸರಬರಾಜು ಅಬಾಧಿತವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿವಿಧ ಕ್ರಮಗಳನ್ನು ಅದು ಯೋಜಿಸಿದೆ.
ಪೆಟ್ರೋಲ್ ಮತ್ತು ಡೀಸಲ್ ರಫ್ತನ್ನು ಕಡಿಮೆಗೊಳಿಸುವುದು, ರಷ್ಯಾದಿಂದ ಕಚ್ಚಾ ತೈಲ ಖರೀದಿ ಹೆಚ್ಚಿಸುವುದು, ಎಲ್ಪಿಜಿ ರೇಶನ್ ಇತ್ಯಾದಿ ಕ್ರಮಗಳನ್ನು ಭಾರತ ಆಲೋಚಿಸುತ್ತಿದೆ. ಪೆಟ್ರೋಲ್ ಮತ್ತು ಡೀಸಲ್ ರಫ್ತನ್ನು ನಿರ್ಬಂಧಿಸುವುದು ಭಾರತದ ಮೊದಲ ಆದ್ಯತೆಯಾಗಿದೆ.
ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಆಯಿಲ್ ರಿಫೈನರಿಗಳಲ್ಲಿ ತೈಲದ ಸಂಸ್ಕರಣೆ ಮಾಡಿ, ಪೆಟ್ರೋಲ್, ಡೀಸಲ್ ಅನ್ನು ತಯಾರಿಸಲಾಗುತ್ತದೆ. ನಂತರ ಅದನ್ನು ಯೂರೋಪ್ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಪೆಟ್ರೋಲ್ ಉತ್ಪಾದನೆಯಲ್ಲಿ ಮೂರನೇ ಒಂದು ಭಾಗದಷ್ಟನ್ನು ಭಾರತ ರಫ್ತು ಮಾಡುತ್ತದೆ. ಶೇ. 25ರಷ್ಟು ಡಿಸಲ್ ಅನ್ನು ರಫ್ತು ಮಾಡುತ್ತದೆ. ಪೆಟ್ರೋಲ್ ರಫ್ತಿನಲ್ಲಿ ಭಾರತ ಐದನೇ ಸ್ಥಾನ ಹೊಂದಿದೆ. ಈಗ ಇವುಗಳ ರಫ್ತನ್ನು ಭಾರತ ಕಡಿಮೆ ಮಾಡುವ ಒಂದು ಮುಂಜಾಗ್ರತಾ ಕ್ರಮವನ್ನು ಯೋಜಿಸಿದೆ.
ಇದನ್ನೂ ಓದಿ: ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ
ಭಾರತದಲ್ಲಿ ತಕ್ಕ ಮಟ್ಟಿಗೆ ಪೆಟ್ರೋಲ್ ಮತ್ತು ಡೀಸಲ್ ಸಂಗ್ರಹ ಇದೆ. ಆದರೆ, ಎಲ್ಪಿಜಿ ಗ್ಯಾಸ್ನದ್ದೇ ಹೆಚ್ಚು ಚಿಂತೆ ಇರುವುದು. ಭಾರತಕ್ಕೆ ಬೇಕಾದ ಎಲ್ಪಿಜಿಯಲ್ಲಿ ಮುಕ್ಕಾಲು ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಆಮದಿನಲ್ಲಿ ಶೇ. 85ಕ್ಕಿಂತ ಹೆಚ್ಚಿನದನ್ನು ಗಲ್ಫ್ ಪ್ರದೇಶದಿಂದ ಪಡೆಯಲಾಗುತ್ತಿದೆ. ದೇಶದೊಳಗೆ ಸದ್ಯ ಇರುವ ಎಲ್ಪಿಜಿ ಸಂಗ್ರಹ ಎರಡು ವಾರಗಳಿಗೂ ಸಾಕಾಗುವುದಿಲ್ಲ ಎನ್ನಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಇಂಡಿಯನ್ ಆಯಿಲ್, ಹೆಚ್ಪಿಸಿಎಲ್, ಬಿಪಿಸಿಎಲ್ ಸಂಸ್ಥೆಗಳು ಪೆಟ್ರೋಕೆಮಿಕಲ್ ರಿಫೈನರಿಗಳಲ್ಲಿ ಎಲ್ಪಿಜಿ ಉತ್ಪಾದನೆ ಹೆಚ್ಚಿಸುತ್ತಿವೆ.
ಹಾಗೆಯೇ, ಎಲ್ಎನ್ಜಿ ಪೂರೈಕೆಯಲ್ಲೂ ಭಾರತಕ್ಕೆ ತೊಂದರೆ ಇದೆ. ಭಾರತದಲ್ಲಿ ಎಲ್ಎನ್ಜಿ ಗ್ಯಾಸ್ ಸಂಗ್ರಹವು 10-12 ದಿನಗಳಿಗೆ ಆಗುವಷ್ಟು ಮಾತ್ರ ಇರುವುದು.
ಗಲ್ಫ್ ಪ್ರದೇಶದಿಂದ ಹೊಸ ತೈಲ ಮಾಲು ಹೊರಬರದೇ ಹೋದರೆ ಭಾರತಕ್ಕೆ ಪೆಟ್ರೋಲ್ ಸಂಕಷ್ಟ ಎದುರಾಗಲಿದೆ. ಈಗ ಭಾರತಕ್ಕೆ ಭರವಸೆಯ ಬೆಳಕಂತೆ ಇರುವುದು ರಷ್ಯಾದ ತೈಲ. ಅಮೆರಿಕದ ನಿಷೇಧದಿಂದಾಗಿ ರಷ್ಯನ್ ತೈಲವು ಸಾಕಷ್ಟು ಪ್ರಮಾಣದಲ್ಲಿ ಹಾಗೆಯೇ ಉಳಿದಿದೆ. ರಷ್ಯನ್ ತೈಲ ಹೊತ್ತ ಹಡಗುಗಳು ಸಮುದ್ರದಲ್ಲಿ ಸ್ಥಗಿತಗೊಂಡಿವೆ. ಹೀಗಾಗಿ, ಬಹಳ ಬೇಗ ಈ ಹಡಗುಗಳನ್ನು ಭಾರತಕ್ಕೆ ತಿರುಗಿಸುವ ಅವಕಾಶ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ