ನವದೆಹಲಿ, ಸೆಪ್ಟೆಂಬರ್ 27: ಏಷ್ಯಾ ಖಂಡದಲ್ಲಿ ಅತ್ಯಂತ ಪ್ರಭಾವ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆಸ್ಟ್ರೇಲಿಯಾ ಮೂಲದ ಲೋವಿ ಇನ್ಸ್ಟಿಟ್ಯೂಟ್ (Lowy Institute) ಎಂಬ ಚಿಂತನ ವೇದಿಕೆ (ಥಿಂಕ್ ಟ್ಯಾಂಕ್) ಪ್ರಕಟಿಸಿದ ಪಟ್ಟಿಯಲ್ಲಿ ಜಪಾನ್ ಅನ್ನು ಭಾರತ ಹಿಂದಿಕ್ಕಿ ಒಂದು ಸ್ಥಾನ ಮೇಲೇರಿದೆ. ಏಷ್ಯಾದಲ್ಲಿ ಅಮೆರಿಕವೇ ಅತ್ಯಂತ ಶಕ್ತಿಶಾಲಿಯಾಗಿದೆ. ಅಮೆರಿಕದ ಸಮೀಪದಲ್ಲೇ ಚೀನಾ ಇದೆ. ಲೋವಿ ಇನ್ಸ್ಟಿಟ್ಯೂಟ್ನ ಏಷ್ಯಾ ಪವರ್ ಇಂಡೆಕ್ಸ್ನಲ್ಲಿ (Asia Power Index) ಅಮೆರಿಕ ಮತ್ತು ಚೀನಾ ಮೊದಲಿನ ಸಾಲಿನಲ್ಲಿವೆ. ಅಮೆರಿಕಕ್ಕೆ 81.7 ಅಂಕಗಳನ್ನು ನೀಡಲಾಗಿದೆ. ಚೀನಾಗೆ 72.7 ಅಂಕಗಳು ಸಿಕ್ಕಿವೆ. ಇವೆರಡೂ ಕೂಡ ಏಷ್ಯಾದಲ್ಲಿ ಸೂಪರ್ ಪವರ್ ಎನಿಸಿವೆ.
ಒಟ್ಟಾರೆ 27 ದೇಶಗಳು ಏಷ್ಯಾ ಪವರ್ ಇಂಡೆಕ್ಸ್ನಲ್ಲಿವೆ. ಇದರಲ್ಲಿ ಸೂಪರ್ ಪವರ್, ಮೇಜರ್ ಪವರ್ ಮಿಡಲ್ ಪವರ್ ಮತ್ತು ಮೈನರ್ ಪವರ್ ಎಂದು ನಾಲ್ಕು ಮಟ್ಟಗಳಾಗಿ ವರ್ಗೀಕರಿಸಲಾಗಿದೆ. ಅಮೆರಿಕ ಮತ್ತು ಚೀನಾ ಸೂಪರ್ ಪವರ್ ಎನಿಸಿವೆ. ಮೇಜರ್ ಪವರ್ ದೇಶಗಳು ಯಾವುವೂ ಇಲ್ಲ. 16 ದೇಶಗಳು ಮಿಡಲ್ ಪವರ್ ಪಟ್ಟಿಯಲ್ಲಿವೆ. ಇದರಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದು 39.1 ಅಂಕ ಪಡೆದಿದೆ. ಜಪಾನ್, ಆಸ್ಟ್ರೇಲಿಯಾ, ರಷ್ಯಾ ಮತ್ತು ಸೌತ್ ಕೊರಿಯಾ ದೇಶಗಳೂ 30ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿವೆ. ಒಂದು ಕಾಲದಲ್ಲಿ ವಿಶ್ವದ ಸೂಪರ್ ಪವರ್ ದೇಶವಾಗಿದ್ದ ರಷ್ಯಾ ಏಷ್ಯಾದಲ್ಲಿ ಹೊಂದಿರುವ ಪ್ರಭಾವದಲ್ಲಿ 6ನೇ ಸ್ಥಾನ ಪಡೆದಿದೆ.
ಪಾಕಿಸ್ತಾನ, ಉತ್ತರ ಕೊರಿಯಾ, ಬ್ರೂನೇ ಮೊದಲಾದ ದೇಶಗಳೂ ಕೂಡ ಮಧ್ಯಮ ಶಕ್ತಿ ಅಥವಾ ಮಿಡಲ್ ಪವರ್ ದೇಶಗಳಾಗಿವೆ. ಅಲ್ಪ ಶಕ್ತ ದೇಶಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮಯನ್ಮಾರ್ ಮೊದಲಾದವು ಇವೆ.
ಏಷ್ಯಾದಲ್ಲಿ ಯಾವ್ಯಾವ ದೇಶಗಳು ಎಷ್ಟು ಪ್ರಭಾವ ಹೊಂದಿವೆ ಎಂದು ಗುರುತಿಸಲು ಲೋವಿ ಇನ್ಸ್ಟಿಟ್ಯೂಟ್ ಎಂಟು ಮಾನದಂಡಗಳನ್ನು ಇಟ್ಟುಕೊಂಡಿದೆ. ಭವಿಷ್ಯದ ಸಂಪನ್ಮೂಲಗಳು, ಡಿಫೆನ್ಸ್ ನೆಟ್ವರ್ಕ್, ಸಾಂಸ್ಕೃತಿ ಪ್ರಭಾವ, ಆರ್ಥಿಕ ಸಾಮರ್ಥ್ಯ, ಮಿಲಿಟರಿ ಸಾಮರ್ಥ್ಯ, ಪ್ರತಿರೋಧ ಶಕ್ತಿಯಲ್ಲಿ ಅಮೆರಿಕವೇ ಮುಂಚೂಣಿಯಲ್ಲಿದೆ. ಆದರೆ, ಏಷ್ಯಾದಲ್ಲಿ ಆರ್ಥಿಕ ಸಂಬಂಧ ಹೆಣೆಯುವುದು ಮತ್ತು ರಾಜತಾಂತ್ರಿಕ ಪ್ರಭಾವ ಬೀರುವುದು ಈ ವಿಚಾರದಲ್ಲಿ ಅಮೆರಿಕಕ್ಕಿಂತ ಚೀನಾ ಮುಂದಿದೆ.
ಇದನ್ನೂ ಓದಿ: ಟಾಟಾ ಗ್ರೂಪ್ನಿಂದ ಭಾರತದ ಮೊದಲ ಸೆಮಿಕಂಡಕ್ಟರ್ ತಯಾರಿಕೆ ಘಟಕ ಸ್ಥಾಪನೆ ನಿಶ್ಚಿತ; ತೈವಾನ್ನ ಪಿಎಸ್ಎಂಸಿ ಜೊತೆ ಒಪ್ಪಂದ
ಭಾರತವು ಭವಿಷ್ಯದ ಸಂಪನ್ಮೂಲಗಳ ಶೇಖರಣೆಯಲ್ಲಿ ಉತ್ತಮ ಪ್ರಗತಿ ಹೊಂದಿದೆ. ಜಪಾನ್ ಅನ್ನು ಒಟ್ಟಾರೆಯಾಗಿ ಹಿಂದಿಕ್ಕಲು ಕಾರಣವಾಗಿದ್ದು ಇದೇ ವಿಚಾರ. ಆದರೆ ಏಷ್ಯಾ ಮಟ್ಟದಲ್ಲಿ ಆರ್ಥಿಕ ಸಂಬಂಧಗಳ ವಿಚಾರದಲ್ಲಿ ಭಾರತ ಹಿಂದುಳಿದಿದೆ ಎನ್ನುವುದು ಲೋವಿ ಇನ್ಸ್ಟಿಟ್ಯೂಟ್ನ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ