ಟಾಟಾ ಗ್ರೂಪ್ನಿಂದ ಭಾರತದ ಮೊದಲ ಸೆಮಿಕಂಡಕ್ಟರ್ ತಯಾರಿಕೆ ಘಟಕ ಸ್ಥಾಪನೆ ನಿಶ್ಚಿತ; ತೈವಾನ್ನ ಪಿಎಸ್ಎಂಸಿ ಜೊತೆ ಒಪ್ಪಂದ
Tata Electronics signs agreement with PSMC for semiconductor unit: ಗುಜರಾತ್ನ ಅಹ್ಮದಾಬಾದ್ ಜಿಲ್ಲೆಯ ಬಂದರು ನಗರಿ ಧೋಲೆರಾದಲ್ಲಿ ಭಾರತದ ಮೊದಲ ಸೆಮಿಕಂಡಕ್ಟರ್ ಚಿಪ್ ಫ್ಯಾಕ್ಟರಿ ಆರಂಭವಾಗಲಿದೆ. ತೈವಾನ್ನ ಪಿಎಸ್ಎಂಸಿ ಸಹಯೋಗದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಈ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕವನ್ನು ಸ್ಥಾಪಿಸಲಿದೆ. ಎರಡೂ ಕಂಪನಿಗಳ ಮಧ್ಯೆ ಒಪ್ಪಂದ ಆಗಿದೆ. ತೈವಾನ್ನ ಕಂಪನಿ ತಾಂತ್ರಿಕ ನೆರವು ಕೊಡಲಿದೆ.
ನವದೆಹಲಿ, ಸೆಪ್ಟೆಂಬರ್ 26: ಟಾಟಾ ಗ್ರೂಪ್ನಿಂದ ಭಾರತದ ಮೊದಲ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪನೆಯಾಗುವುದು ನಿಶ್ಚಿತವಾಗಿದೆ. ಗುಜರಾತ್ನ ಧೋಲೇರಾದಲ್ಲಿ ಚಿಪ್ ಫ್ಯಾಕ್ಟರಿ ಶುರುವಾಗಲಿದೆ. ತೈವಾನ್ನ ಪವರ್ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಶನ್ (ಪಿಎಸ್ಎಂಸಿ) ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ನಡುವೆ ಒಪ್ಪಂದ ಆಗಿದೆ. ಈ ಒಪ್ಪಂದ ಪ್ರಕಾರ, ತೈವಾನ್ ದೇಶದ ಈ ಕಂಪನಿಯು ಚಿಪ್ ಫ್ಯಾಬ್ರಿಕೇಶನ್ ಘಟಕಕ್ಕೆ ಬೇಕಾದ ವಿನ್ಯಾಸ ಮತ್ತು ನಿರ್ಮಾಣ ನೆರವನ್ನು ಒದಗಿಸಲಿದೆ.
ಗುಜರಾತ್ ಕರಾವಳಿಯಲ್ಲಿರುವ ಧೋಲೇರಾ ನಗರದಲ್ಲಿ ಸ್ಥಾಪನೆಯಾಗಲಿರುವ ಈ ಸೆಮಿಕಂಡಕ್ಟರ್ ಚಿಪ್ ಫ್ಯಾಬ್ರಿಕೇಶನ್ ಫ್ಯಾಕ್ಟರಿಯು ಒಂದು ತಿಂಗಳಲ್ಲಿ 50,000 ವೇಫರ್ಗಳನ್ನು ತಯಾರಿಸುವ ಸಾಮರ್ಥ್ಯದ್ದಾಗಿರಲಿದೆ. ವೇಫರ್ ಎಂದರೆ ಚಿಪ್ಗಳಿರುವ ತೆಳು ಹಾಳೆ. ಈ ವೇಫರ್ಗಳು ಎಷ್ಟು ಗಾತ್ರದ್ದು, ಒಂದು ವೇಫರ್ನಲ್ಲಿ ಎಷ್ಟು ಚಿಪ್ಗಳನ್ನು ತಯಾರಿಸಬಹುದು ಇತ್ಯಾದಿ ಮಾಹಿತಿ ಸದ್ಯಕ್ಕೆ ಲಭ್ಯ ಆಗಿಲ್ಲ. ಕೆಲ ಆಧುನಿಕ ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳಲ್ಲಿ 300 ಎಂಎಂ ದಪ್ಪದ ವೇಫರ್ಗಳನ್ನು ತಯಾರಿಸಲಾಗುತ್ತದೆ. ಒಂದು ಎಂಎಂನ ಚಿಪ್ಗಳಾದರೆ ಒಂದು ವೇಫರ್ನಲ್ಲಿ 70,000 ಚಿಪ್ಗಳಿರಬಹುದು. ಆದರೆ, ಟಾಟಾ ಎಲೆಕ್ಟ್ರಾನಿಕ್ಸ್ನ ಫ್ಯಾಬ್ ಘಟಕದಲ್ಲಿ ತಯಾರಾಗುವ ಚಿಪ್ಗಳನ್ನು ಎಐ, ವಾಹನ, ಕಂಪ್ಯೂಟಿಂಗ್, ಟೆಲಿಕಾಂ ಕ್ಷೇತ್ರಗಳಿಗೆ ಬಳಕೆ ಆಗಬಹುದು.
ಈಗಾಗಲೇ ಐಫೋನ್ಗಳನ್ನು ಅಸೆಂಬ್ಲಿಂಗ್ ಮಾಡುತ್ತಿರುವ ಟಾಟಾ ಗ್ರೂಪ್ ಸಂಸ್ಥೆಗೆ ಈ ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರ ಹೊಸ ವಿಸ್ತಾರತೆ ತಂದುಕೊಟ್ಟಿದೆ. ಪಿಎಸ್ಎಂಸಿ ಸಹಯೋಗದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ನಿರ್ಮಿಸುತ್ತಿರುವ ಈ ಫ್ಯಾಕ್ಟರಿಗೆ 91,000 ಕೋಟಿ ರೂ ಬಂಡವಾಳ ಸಿಗಲಿದೆ. 20,000 ಸಂಖ್ಯೆಯಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಟಾಟಾದ ಮುಂಬರುವ ಪರಿಕಲ್ಪನೆಗಳು ಜಾರಿಯಾದರೆ ಈ ಘಟಕವೊಂದೇ ಒಂದು ಲಕ್ಷ ಜನರಿಗೆ ಉದ್ಯೋಗ ಕೊಡಬಲ್ಲುದು.
ಇದನ್ನೂ ಓದಿ: ಶಂಖ್ ಏರ್; ಭಾರತದಲ್ಲಿ ಪದಾರ್ಪಣೆ ಮಾಡಲಿದೆ ಹೊಸ ಏರ್ಲೈನ್ಸ್ ಸಂಸ್ಥೆ
ಈ ಘಟಕದಲ್ಲಿ ಪವರ್ ಮ್ಯಾನೇಜ್ಮೆಂಟ್ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ), ಡಿಸ್ಪ್ಲೇ ಡ್ರೈವರ್ಸ್, ಮೈಕ್ರೋಕಂಟ್ರೋಲರ್ಸ್, ಹೈಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಚಿಪ್ಗಳನ್ನು ತಯಾರಿಸುವ ಉದ್ದೇಶ ಇದೆ. ಈ ಮೇಲೆ ತಿಳಿಸಿದ ಚಿಪ್ಗಳು ಜಾಗತಿಕವಾಗಿ ಬೇಡಿಕೆ ಇರುವಂತಹವು. ಹೀಗಾಗಿ, ಜಾಗತಿಕ ಸೆಮಿಕಂಡಕ್ಟರ್ ಇಕೋಸಿಸ್ಟಂನಲ್ಲಿ ಭಾರತದ ಪಾತ್ರವೂ ಗಮನಾರ್ಹವಾಗಿರುವಂತೆ ಮಾಡಲಿದೆ ಈ ಟಾಟಾ ಫ್ಯಾಕ್ಟರಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ