ನವದೆಹಲಿ, ಡಿಸೆಂಬರ್ 30: ಭಾರತೀಯರ ಪಾಲಿಗೆ ಚಿನ್ನವೆಂದರೆ ಸಂಪತ್ತಿನ ಪ್ರತೀಕ. ಚಿನ್ನವು ಆಸ್ತಿ, ಅಂತಸ್ತು, ಪ್ರತಿಷ್ಠೆ, ಹೂಡಿಕೆ, ಸಂಪ್ರದಾಯ, ಧರ್ಮ ಹೀಗೆ ಹಲವು ವಿಚಾರಗಳಿಗೆ ತಳುಕು ಹಾಕಿಕೊಂಡಿದೆ. ಭಾರತೀಯ ಮಹಿಳೆಯರಿಗಂತೂ ಚಿನ್ನ ಬಹುಪ್ರಿಯ. ಹೆಚ್ಚಿನ ಕಾರ್ಯಕ್ರಮಗಳಲ್ಲಿ ಮಹಿಳೆಯರು ಮೈತುಂಬ ಒಡವೆ ಹಾಕಿಕೊಳ್ಳುವುದುಂಟು. ಕಷ್ಟಕಾಲಕ್ಕೆ ಎಂದು ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವುದುಂಟು. ಅಂತೆಯೇ, ಒಂದು ಅಂದಾಜು ಪ್ರಕಾರ ಭಾರತೀಯ ಮಹಿಳೆಯರು ಹೊಂದಿರುವ ಚಿನ್ನವನ್ನು ಒಟ್ಟು ಸೇರಿಸಿದರೆ 24,000 ಟನ್ಗಳಷ್ಟಾಗಬಹುದು ಎನ್ನುತ್ತಿದೆ ವರ್ಲ್ಡ್ ಗೋಲ್ಡ್ ಕೌನ್ಸಿಲ್. ಇದು ವಿಶ್ವದ ಒಟ್ಟಾರೆ ಗೋಲ್ಡ್ ರಿಸರ್ವ್ಸ್ನ ಶೇ. 11ರಷ್ಟು ಪ್ರಮಾಣ ಎನಿಸುತ್ತದೆ. ಭಾರತದ ಮನೆಗಳಲ್ಲಿ ಇರುವ ಚಿನ್ನವು ದೇಶದ ಜಿಡಿಪಿಯ ಶೇ. 40ರಷ್ಟಿದೆಯಂತೆ.
ಚೀನಾ ಬಿಟ್ಟರೆ ವಿಶ್ವದಲ್ಲಿ ಚಿನ್ನಕ್ಕೆ ಅತಿಹೆಚ್ಚು ಬೇಡಿಕೆ ಇರುವುದು ಭಾರತದಲ್ಲಿ. ಮಹಿಳೆಯರೇ ಚಿನ್ನಕ್ಕೆ ಅತಿದೊಡ್ಡ ಮಾರುಕಟ್ಟೆ. ಹೀಗಾಗಿ, ಭಾರತೀಯ ಮಹಿಳೆಯರ ಬಳಿ ಇಷ್ಟೊಂದು ಚಿನ್ನ ಇದೆ ಎನ್ನುವುದು ಅಚ್ಚರಿ ಎನಿಸುವುದಿಲ್ಲ. ವಿಶ್ವದ ಕೆಲ ಪ್ರಮುಖ ದೇಶಗಳ ಗೋಲ್ಡ್ ರಿಸರ್ವ್ಸ್ ಇಷ್ಟಿದೆ ಎನ್ನುವ ವಿವರ ಈ ಕೆಳಕಂಡಂತಿದೆ:
ಈ ಇಷ್ಟೂ ದೇಶಗಳ ಚಿನ್ನವನ್ನು ಒಟ್ಟುಗೂಡಿಸಿದರೆ ಭಾರತದ ಮಹಿಳೆಯರ ಬಳಿ ಇರುವ 24,000 ಟನ್ ಚಿನ್ನಕ್ಕೆ ಸಮ ಬರಲಾರದು. ಐಎಂಎಫ್ ಬಳಿಯೂ ಇಷ್ಟೊಂದು ಚಿನ್ನದ ನಿಧಿ ಇಲ್ಲ. ವಿಶ್ವದಲ್ಲಿ ಹೆಚ್ಚೂಕಡಿಮೆ ಮುಕ್ಕಾಲು ಪಾಲು ಭಾಗದ ಚಿನ್ನವನ್ನು ರಿಫೈನ್ ಮಾಡುವ ಸ್ವಿಟ್ಜರ್ಲ್ಯಾಂಡ್ ದೇಶದಲ್ಲೂ ಇಷ್ಟೊಂದು ಗೋಲ್ಡ್ ರಿಸರ್ವ್ಸ್ ಇಲ್ಲ ಎನ್ನುವುದು ವಾಸ್ತವ.
ಇದನ್ನೂ ಓದಿ: 2024ರಲ್ಲಿ ಡಾಲರ್ ಎದುರು ಭಾರತೀಯ ರುಪಾಯಿ ನೀರಸ ಪ್ರದರ್ಶನ ತೋರಿತಾ? ಇಲ್ಲಿದೆ ವಾಸ್ತವ ಸಂಗತಿ
ಭಾರತದ ಒಟ್ಟಾರೆ ಗೋಲ್ಡ್ ರಿಸರ್ವ್ಸ್ನಲ್ಲಿ ಶೇ. 40ರಷ್ಟು ಭಾಗವು ದಕ್ಷಿಣ ಭಾರತದ್ದಿದೆ. ಅದರಲ್ಲೂ ತಮಿಳುನಾಡು ಮುಂಚೂಣಿಯಲ್ಲಿದೆ. ಭಾರತದ ಶೇ. 28ರಷ್ಟು ಚಿನ್ನವು ತಮಿಳುನಾಡಿನಲ್ಲಿದೆ. ಕೇರಳದಲ್ಲೂ ಕೂಡ ಜನರ ಬಳಿ ಹೆಚ್ಚಿನ ಚಿನ್ನ ಇದೆ.
ಭಾರತದಲ್ಲಿ ಚಿನ್ನದ ಖರೀದಿ ಮತ್ತು ಮಾರಾಟಕ್ಕೆ ಶೇ. 3ರಷ್ಟು ಜಿಎಸ್ಟಿ ಇರುತ್ತದೆ. ಒಂದು ಕುಟುಂಬದಲ್ಲಿ ಇಷ್ಟ ಬಂದಷ್ಟು ಚಿನ್ನವನ್ನು ಇಟ್ಟುಕೊಳ್ಳಲು ಅವಕಾಶ ಇಲ್ಲ. ವಿವಾಹಿತ ಮಹಿಳೆಯೊಬ್ಬಳು 500 ಗ್ರಾಮ್ವರೆಗೆ ಚಿನ್ನ ಇಟ್ಟುಕೊಳ್ಳಬಹುದು. ಅವಿವಾಹಿತ ಮಹಿಳೆ 250 ಗ್ರಾಮ್, ಮತ್ತು ಪುರುಷರು 100 ಗ್ರಾಮ್ ಚಿನ್ನ ಇಟ್ಟುಕೊಳ್ಳಬಹುದು.
ಇದನ್ನೂ ಓದಿ: ಈ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೇ. 6.5ರಿಂದ ಶೇ. 6.8ರ ಶ್ರೇಣಿಯಲ್ಲಿರುವ ಸಾಧ್ಯತೆ: ಡುಲಾಯ್ಟ್ ವರದಿ
ನಿಮ್ಮ ಬಳಿ ಈ ಮಿತಿಗಿಂತ ಹೆಚ್ಚು ಚಿನ್ನ ಇದ್ದು, ಅದನ್ನು ಖರೀದಿಸಿದ್ದಕ್ಕೆ ಅಥವಾ ಪಡೆದದ್ದಕ್ಕೆ ಸೂಕ್ತ ದಾಖಲಾತಿ ಇಲ್ಲದಿದ್ದರೆ ದುಬಾರಿ ಮೊತ್ತದ ತೆರಿಗೆ ಮತ್ತು ದಂಡ ಪಾವತಿಸಬೇಕಾಗುತ್ತದೆ. ಚಿನ್ನದ ಮಾರುಕಟ್ಟೆ ಬೆಲೆಯ ಶೇ 60ರಷ್ಟು ಮೊತ್ತವನ್ನು ತೆರಿಗೆಯಾಗಿ ನೀಡಬೇಕಾಗುತ್ತದೆ. ಶೇ. 25ರಷ್ಟು ಶುಲ್ಕ, ಶೇ. 10ರಷ್ಟು ದಂಡ ಮತ್ತು ಶೇ. 4ರಷ್ಟು ಎಚ್ಇಸಿಯನ್ನು ಕಟ್ಟಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ