
ನವದೆಹಲಿ, ಏಪ್ರಿಲ್ 16: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವುದು ಬೋಯಿಂಗ್ ವಿಮಾನ (Boeing aircraft) ವಿಚಾರದಲ್ಲಿ ಭಾರತಕ್ಕೆ ಅನ್ವಯ ಆಗಬಹುದು. ಅಮೆರಿಕದ ಬೋಯಿಂಗ್ ಸಂಸ್ಥೆ ತಯಾರಿಸುವ ವಿಮಾನಗಳನ್ನು ಪಡೆಯದಿರಲು ಚೀನಾ ನಿರ್ಧರಿಸಿದೆ. ಸುಮಾರು 100 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ಚೀನೀ ಏರ್ಲೈನ್ ಸಂಸ್ಥೆಗಳು ನೀಡಿದ್ದ ಆರ್ಡರ್ ಅನ್ನು ರದ್ದುಗೊಳಿಸಲಾಗಿದೆ. ಚೀನಾದ ಸರಕುಗಳಿಗೆ ಅಮೆರಿಕ ಶೇ. 145ರಷ್ಟು ಟ್ಯಾರಿಫ್ ಹಾಕಿದ್ದಕ್ಕೆ ಚೀನಾ ತೆಗೆದುಕೊಳ್ಳುತ್ತಿರುವ ಪ್ರತಿಕ್ರಮಗಳಲ್ಲಿ (revenge tax) ಬೋಯಿಂಗ್ ಆರ್ಡರ್ ರದ್ದು ಕೂಡ ಒಂದು.
ಅಮೆರಿಕದ ಬೋಯಿಂಗ್ ವಿಮಾನಗಳಿಗೆ ಮಾಡಲಾಗಿದ್ದು ಬುಕಿಂಗ್ ಅನ್ನು ಚೀನಾ ರದ್ದುಗೊಳಿಸಿರುವುದು ಭಾರತದ ಕೆಲ ಏರ್ಲೈನ್ ಸಂಸ್ಥೆಗಳಿಗೆ ಅನುಕೂಲ ಮಾಡಿದೆ. ಟಾಟಾ ಗ್ರೂಪ್ಗೆ ಸೇರಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಆಕಾಶ ಏರ್ಲೈನ್ಸ್ (Akasa Airlines) ಸಂಸ್ಥೆಗಳು ಸಾಕಷ್ಟು ಬೋಯಿಂಗ್ ವಿಮಾನಗಳನ್ನು ಬುಕ್ ಮಾಡಿವೆ. ಅವುಗಳು ಸರಿಯಾದ ಸಮಯಕ್ಕೆ ಡೆಲಿವರಿ ಆಗುವುದು ಅನುಮಾನ ಇತ್ತು. ಈಗ ಚೀನಾದಿಂದ ಆರ್ಡರ್ ರದ್ದಾಗಿದ್ದರಿಂದ ಬೋಯಿಂಗ್ ಸಂಸ್ಥೆ ಭಾರತೀಯ ಕಂಪನಿಗಳಿಗೆ ಸಮಯಕ್ಕೆ ಸರಿಯಾಗಿ ಡೆಲಿವರಿ ಮಾಡುವ ಸಾಧ್ಯತೆ ದಟ್ಟವಾಗಿದೆ.
ಚೀನೀ ಏರ್ಲೈನ್ ಕಂಪನಿಗಳು ರದ್ದು ಮಾಡಿರುವುದು ನೂರು ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು. ಏರ್ ಇಂಡಿಯಾ ಮತ್ತು ಆಕಾಶ ಏರ್ ಸಂಸ್ಥೆಗಳು 446 ಬೋಯಿಂಗ್ ವಿಮಾನಗಳಿಗೆ ಆರ್ಡರ್ ಕೊಟ್ಟಿವೆ. ಇದರಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಸಂಖ್ಯೆ 416 ಇದೆ. ಇನ್ನೂ ಕೆಲ ಬೇರೆ ಬೇರೆ ಬೋಯಿಂಗ್ ಮಾಡಲ್ ವಿಮಾನಗಳಿವೆ.
ಇದನ್ನೂ ಓದಿ: ಭಾರತದ ಒಟ್ಟಾರೆ ಟ್ರೇಡ್ ಡೆಫಿಸಿಟ್ ಹಿಗ್ಗಿದರೂ, ಅಮೆರಿಕದೊಂದಿಗೆ ಹೆಚ್ಚಾಯ್ತು ಸರ್ಪ್ಲಸ್
ವಿಶ್ವದಲ್ಲಿ ಅತಿಹೆಚ್ಚು ಕಮರ್ಷಿಯಲ್ ವಿಮಾನಗಳನ್ನು ತಯಾರಿಸುವ ಸಂಸ್ಥೆಗಳೆಂದರೆ ಬೋಯಿಂಗ್ ಮತ್ತು ಏರ್ಬಸ್. ಬ್ರೆಜಿಲ್ನ ಎಂಬ್ರಾಯರ್, ಚೀನಾದ ಕೋಮಾಕ್ ಇತ್ಯಾದಿ ಕೆಲ ಕಂಪನಿಗಳು ಕಮರ್ಷಿಯಲ್ ವಿಮಾನಗಳನ್ನು ತಯಾರಿಸುತ್ತವಾದರೂ ಬೋಯಿಂಗ್, ಏರ್ಬಸ್ ಅನ್ನು ಮೀರಿಸಲು ಆಗುವುದಿಲ್ಲ.
ಚೀನಾದ ವಿಮಾನ ಸಂಸ್ಥೆಗಳು ಬೋಯಿಂಗ್ಗಿಂತ ಏರ್ಬಸ್ ವಿಮಾನಗಳನ್ನು ಹೆಚ್ಚಾಗಿ ಖರೀದಿಸಿವೆ. 2,275 ಏರ್ಬಸ್ ವಿಮಾನಗಳು ಚೀನಾದಲ್ಲಿ ಆಪರೇಟ್ ಆಗುತ್ತಿವೆ. ಚೀನಾದಲ್ಲಿರುವ ಬೋಯಿಂಗ್ ವಿಮಾನಗಳ ಸಂಖ್ಯೆ 1,865.
ಈಗ ಬೋಯಿಂಗ್ಗೆ ನೀಡಿದ್ದ ಆರ್ಡರ್ ಅನ್ನು ರದ್ದು ಮಾಡಿದ ಬಳಿಕ ಅದೇ ಪ್ರಮಾಣದಲ್ಲಿ ಏರ್ಬಸ್ನಿಂದ ಬೇರೆ ವಿಮಾನಗಳನ್ನು ಚೀನಾ ಖರೀದಿಸಲಿದೆ. ಅಂದಹಾಗೆ, ಏರ್ಬಸ್ ಕಂಪನಿಯು ಫ್ರಾನ್ಸ್ ಮತ್ತು ಜರ್ಮನಿಯ ಮೂಲದ್ದಾಗಿದೆ.
ಇದನ್ನೂ ಓದಿ: ಕೆಲವೇ ವರ್ಷಗಳಲ್ಲಿ ಅಮೆರಿಕದ ಆರ್ಥಿಕತೆಯನ್ನು ಭಾರತ ಹಿಂದಿಕ್ಕಲಿದೆ: ಜೆಫ್ರೀ ಸ್ಯಾಕ್ಸ್ ಶಾಕಿಂಗ್ ಹೇಳಿಕೆ
ಚೀನಾ ಕಂಪನಿಗಳು ಆರ್ಡರ್ ರದ್ದು ಮಾಡಿದ್ದರಿಂದ ಅಮೆರಿಕದ ಬೋಯಿಂಗ್ ಕಂಪನಿಗೆ ನಷ್ಟವಾಗುವ ಸಾಧ್ಯತೆ ಇಲ್ಲ. ಸಾಕಷ್ಟು ವಿಮಾನಗಳಿಗೆ ಬುಕಿಂಗ್ ಆಗಿದ್ದು, ಅವೆಲ್ಲವನ್ನೂ ಸಕಾಲಕ್ಕೆ ಡೆಲಿವರಿ ಕೊಡುವುದು ಬೋಯಿಂಗ್ಗೆ ಕಷ್ಟವಾಗಿತ್ತು. ಈಗ ಚೀನಾದ ಆರ್ಡರ್ ರದ್ದಾಗಿರುವುದರಿಂದ ಬೇರೆ ಏರ್ಲೈನ್ ಕಂಪನಿಗಳ ಆರ್ಡರ್ ಅನ್ನು ಬೇಗನೇ ಪೂರ್ಣಗೊಳಿಸಲು ಬೋಯಿಂಗ್ಗೂ ಅನುಕೂಲವಾಗಬಲ್ಲುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ