ಭಾರತದ ಒಟ್ಟಾರೆ ಟ್ರೇಡ್ ಡೆಫಿಸಿಟ್ ಹಿಗ್ಗಿದರೂ, ಅಮೆರಿಕದೊಂದಿಗೆ ಹೆಚ್ಚಾಯ್ತು ಸರ್ಪ್ಲಸ್
India's trading data: 2024-25ರಲ್ಲಿ ಭಾರತ ಒಟ್ಟು 770.18 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡಿದೆ. ಇದರಲ್ಲಿ ಸರಕು ರಫ್ತು 437.06 ಬಿಲಿಯನ್ ಡಾಲರ್ ಇದೆ. ಇನ್ನು, ಒಟ್ಟಾರೆ ಭಾರತ ಮಾಡಿಕೊಂಡ ಆಮದು 892.18 ಬಿಲಿಯನ್ ಡಾಲರ್ ಇದೆ. 2024-25ರಲ್ಲಿ ಭಾರತದ ವ್ಯಾಪಾರ ಕೊರತೆ 122 ಬಿಲಿಯನ್ ಡಾಲರ್ನಷ್ಟಿದೆ. ಆದರೆ, ಅಮೆರಿಕದೊಂದಿಗೆ ಭಾರತದ ಸರಕು ವ್ಯಾಪಾರವು ಪಾಸಿಟಿವ್ ಆಗಿದೆ.

ನವದೆಹಲಿ, ಏಪ್ರಿಲ್ 16: ಮಾರ್ಚ್ ತಿಂಗಳಲ್ಲಿ ಭಾರತದ ಒಟ್ಟಾರೆ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ (Trade Deficit) ಮತ್ತಷ್ಟು ಹೆಚ್ಚಾಗಿದೆ. ಅಂದರೆ, ಒಟ್ಟಾರೆ ರಫ್ತಿಗಿಂತ ಆಮದು ಪ್ರಮಾಣ ಮತ್ತಷ್ಟು ಹಿಗ್ಗಿದೆ. ಆದರೆ, ಅಮೆರಿಕದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ ಭಾರತದ ಟ್ರೇಡ್ ಸರ್ಪ್ಲಸ್ ಹೊಂದಿದ್ದು, ಅದು 2024-25ರಲ್ಲಿ ಮತ್ತಷ್ಟು ಹೆಚ್ಚಿದೆ. ಅಂದರೆ, ಅಮೆರಿಕಕ್ಕೆ ಭಾರತದ ರಫ್ತು ಮತ್ತಷ್ಟು ಹಿಗ್ಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಅಮೆರಿಕದೊಂದಿಗೆ ಭಾರತದ ಟ್ರೇಡ್ ಸರ್ಪ್ಲಸ್ ಶೇ. 16.6ರಷ್ಟು ಹೆಚ್ಚಾಗಿದೆ.
2024-25ರಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಗಣನೀಯವಾಗಿ ಹೆಚ್ಚಾಗಿದೆ. ಹಾಗೆಯೇ, ಆಮದು ಕೂಡ ಹೆಚ್ಚಾಗಿದೆ. ಎರಡು ದೇಶಗಳ ನಡುವಿನ ಒಟ್ಟು ವ್ಯಾಪಾರ ಹೆಚ್ಚಾಗಿದೆ.
2024-25ರಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸರಕು ವ್ಯಾಪಾರದ ವಿವರ
- ಸರಕು ರಫ್ತು: 77.52ನಿಂದ 86.51 ಬಿಲಿಯನ್ ಡಾಲರ್ಗೆ ಹೆಚ್ಚಳ (ಶೇ. 11.6)
- ಸರಕು ಆಮದು: 42.20ನಿಂದ 45.33 ಬಿಲಿಯನ್ ಡಾಲರ್ಗೆ ಹೆಚ್ಚಳ (ಶೇ. 7.42).
ಇದನ್ನೂ ಓದಿ: Retail Inflation: ಹೋಲ್ಸೇಲ್ ದರ ಬಳಿಕ ರೀಟೇಲ್ ಹಣದುಬ್ಬರವೂ ಮಾರ್ಚ್ ತಿಂಗಳಲ್ಲಿ ಶೇ. 3.34ಕ್ಕೆ ಇಳಿಕೆ
ಇಲ್ಲಿ ಸರ್ವಿಸ್ ಸೆಕ್ಟರ್ನ ವಹಿವಾಟನ್ನು ಗಣಿಸಲಾಗಿಲ್ಲ. ಕೇವಲ ಸರಕು ವ್ಯಾಪಾರದ ಅಂಕಿ ಅಂಶ ಇದೆ. ಭಾರತದ ಸರ್ವಿಸ್ ಸೆಕ್ಟರ್ಗೆ ಅಮೆರಿಕ ದೊಡ್ಡ ಮಾರುಕಟ್ಟೆಯಾಗಿದೆ. ಅದನ್ನು ಸೇರಿಸಿದರೆ ಅಮೆರಿಕದ ಜೊತೆ ಭಾರತದ ಟ್ರೇಡ್ ಸರ್ಪ್ಲಸ್ ಮತ್ತಷ್ಟು ಬೃಹತ್ತಾಗುತ್ತದೆ.
ಭಾರತದಿಂದ ಅಮೆರಿಕಕ್ಕೆ ರಫ್ತಾದ ಪ್ರಮುಖ ಸರಕುಗಳು
ಎಲೆಕ್ಟ್ರಾನಿಕ್ ವಸ್ತುಗಳು, ಜವಳಿ, ಔಷಧ, ಎಂಜಿನಿಯರಿಂಗ್ ಉತ್ಪನ್ನ, ಆಭರಣ, ಪೆಟ್ರೋಲಿಯಂ ಉತ್ಪನ್ನ, ಕೃಷಿ ಉತ್ಪನ್ನಗಳು ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಪ್ರಮುಖ ಸರಕುಗಳೆನಿಸಿವೆ.
ಭಾರತದ ಒಟ್ಟಾರೆ ಸರಕು ವ್ಯಾಪಾರ ಕೊರತೆಯಲ್ಲಿ ಹೆಚ್ಚಳ
ಕಳೆದ ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ನಲ್ಲಿ ಭಾರತದ ಒಟ್ಟಾರೆ ವ್ಯಾಪಾರ ಕೊರತೆ 21.54 ಬಿಲಿಯನ್ ಡಾಲರ್ನಷ್ಟಿದೆ. ಫೆಬ್ರುವರಿಯಲ್ಲಿ 14.05 ಬಿಲಿಯನ್ ಡಾಲರ್ನಷ್ಟು ಮಾತ್ರವೇ ಡೆಫಿಸಿಟ್ ಇತ್ತು. ಈಗ ಅದು ಗಣನೀಯವಾಗಿ ಹೆಚ್ಚಳವಾಗಿದೆ.
ಮಾರ್ಚ್ ತಿಂಗಳಲ್ಲಿ ಭಾರತದಿಂದ ಸರಕು ರಫ್ತು 41.97 ಬಿಲಿಯನ್ ಡಾಲರ್ ಇದೆ. ಆಮದು ಪ್ರಮಾಣ 63.51 ಬಿಲಿಯನ್ ಡಾಲರ್ ಇದೆ. ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್ನಲ್ಲಿ ಆಮದು ಮತ್ತು ರಫ್ತು ಎರಡೂ ಕೂಡ ಹೆಚ್ಚಳ ಆಗಿದೆ. ರಫ್ತಿಗಿಂತ ಆಮದು ಬಹಳ ಹೆಚ್ಚಿದ್ದರಿಂದ ಟ್ರೇಡ್ ಡೆಫಿಸಿಟ್ ಹೆಚ್ಚಾಗಿದೆ.
ಇದನ್ನೂ ಓದಿ: ಮಾರ್ಚ್ನಲ್ಲಿ ಶೇ. 2.05ಕ್ಕೆ ಇಳಿದ ಸಗಟು ಹಣದುಬ್ಬರ ದರ; ಬೆಲೆ ಏರಿಕೆ ಬಿಸಿ ಫೆಬ್ರುವರಿಗಿಂತ ಕಡಿಮೆ
ಇಡೀ ಹಣಕಾಸು ವರ್ಷವನ್ನು ಪರಿಗಣಿಸಿದಾಗ, ಭಾರತದಿಂದ ಸರಕು ರಫ್ತು 437.42 ಬಿಲಿಯನ್ ಡಾಲರ್ನಷ್ಟಿದೆ. ಸರಕು ಆಮದು 720.24 ಬಿಲಿಯನ್ ಡಾಲರ್ ಇದೆ. ಇಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ರಫ್ತಿನಲ್ಲಿ ನಗಣ್ಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಆದರೆ, 2023-24ರಲ್ಲಿ 678.21 ಬಿಲಿಯನ್ ಡಾಲರ್ ಇದ್ದ ಸರಕು ಆಮದು, 2024-25ರಲ್ಲಿ 720.24 ಬಿಲಿಯನ್ ಡಾಲರ್ಗೆ ಏರಿದೆ.
2024-25ರಲ್ಲಿ ಭಾರತದ ಟ್ರೇಡಿಂಗ್ ಮಾಹಿತಿ
ಒಟ್ಟು ರಫ್ತು: 770.18 ಬಿಲಿಯನ್ ಡಾಲರ್
(ಸರಕು, 437.06 ಬಿಲಿಯನ್ ಡಾಲರ್; ಸರ್ವಿಸ್, 333.12 ಬಿಲಿಯನ್ ಡಾಲರ್)
ಒಟ್ಟು ಆಮದು: 892.18 ಬಿಲಿಯನ್ ಡಾಲರ್
(ಸರಕು, 677.24 ಬಿಲಿಯನ್ ಡಾಲರ್; ಸರ್ವಿಸ್, 214.94 ಬಿಲಿಯನ್ ಡಾಲರ್)
ಒಟ್ಟಾರೆ ಟ್ರೇಡ್ ಡೆಫಿಸಿಟ್ 122 ಬಿಲಿಯನ್ ಡಾಲರ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ