Indian CEOs: ನಿರ್ವಹಣಾ ವೆಚ್ಚ ಕಡಿತ ಮಾಡೋಣ, ಉದ್ಯೋಗಿಗಳ ವಜಾ ಬೇಡ; ಭಾರತೀಯ ಸಿಇಒಗಳ ಅಭಿಪ್ರಾಯ
ಭಾರತದ ಶೇ 93ರಷ್ಟು ಸಿಇಒಗಳು ಉದ್ಯೋಗಿಗಳ ವಜಾ ನಿರ್ಧಾರ ಕೈಗೊಳ್ಳುವ ಬದಲು ಕಾರ್ಯನಿರ್ವಹಣೆ ವೆಚ್ಚ ಕಡಿತಗೊಳಿಸುವುದಕ್ಕೇ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ದಾವೋಸ್: ಉದ್ಯೋಗಿಗಳ ವಜಾ ನಿರ್ಧಾರ ಕೈಗೊಳ್ಳುವ ಬದಲು ಕಾರ್ಯನಿರ್ವಹಣೆ ವೆಚ್ಚ ಕಡಿತ ಮಾಡುವ ಬಗ್ಗೆ ಭಾರತದ ಕಂಪನಿಗಳ ಹೆಚ್ಚಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEOs) ಒಲವು ವ್ಯಕ್ತಪಡಿಸಿದ್ದಾರೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಹೆಚ್ಚುತ್ತಿರುವ ಮಧ್ಯೆಯೇ ನಡೆಸಲಾಗಿರುವ ಸಮೀಕ್ಷೆಯೊಂದರಿಂದ ಈ ವಿಚಾರ ತಿಳಿದುಬಂದಿದೆ. ಜಾಗತಿಕ ಸಲಹಾ ಸಂಸ್ಥೆ ಪಿಡಬ್ಲ್ಯುಸಿ (PwC) ಸಿಇಒಗಳ ವಾರ್ಷಿಕ ಸಮೀಕ್ಷೆ ನಡೆಸಿದ್ದು, ಇದರ ವರದಿಯನ್ನು ಸ್ವಿಜರ್ಲೆಂಡ್ನ (Switzerland) ದಾವೋಸ್ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ಸಭೆಯಲ್ಲಿ (World Economic Forum) ಮಂಡಿಸಿದೆ.
ಸಮೀಕ್ಷೆಗೆ ಒಳಗಾದ ಪ್ರತಿ 10 ಮಂದಿ ಸಿಇಒಗಳ ಪೈಕಿ ನಾಲ್ವರು (ಶೇ 40ರಷ್ಟು ಜಾಗತಿಕ ಮತ್ತು ಶೇ 41ರಷ್ಟು ಭಾರತೀಯ ಸಿಇಒಗಳು) ತಮ್ಮ ಕಂಪನಿಗಳು ಈಗಿನ ಹಾದಿಯಲ್ಲೇ ಮುಂದುವರಿದರೆ ಮುಂದಿನ 10 ವರ್ಷಗಳಲ್ಲಿ ಆರ್ಥಿಕವಾಗಿ ಸ್ಥಿರವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತದ ಶೇ 78ರಷ್ಟು ಸಿಇಒಗಳು, ಜಾಗತಿಕವಾಗಿ ಶೇ 73ರಷ್ಟು ಸಿಇಒಗಳು, ಏಷ್ಯಾ ಪೆಸಿಫಿಕ್ನ ಶೇ 69ರಷ್ಟು ಸಿಇಒಗಳು ಮುಂದಿನ 12 ತಿಂಗಳುಗಳಲ್ಲಿ ತಮ್ಮ ಕಂಪನಿಯ ಬೆಳವಣಿಗೆ ಕುಂಠಿತವಾಗಬಹುದು ಎಂದು ಅಂದಾಜಿಸಿದ್ದಾರೆ. ಒಟ್ಟಾರೆ ಜಾಗತಿಕ ಪರಿಸ್ಥಿತಿ ಜತೆ ಹೋಲಿಸಿದರೆ ಭಾರತದ ಆರ್ಥಿಕತೆ ಮುಂದಿನ 12 ತಿಂಗಳುಗಳಲ್ಲಿ ಚೇತರಿಕೆ ಕಾಣುವ ಭರವಸೆ ಇದೆ ಎಂದು ಶೇ 57ರಷ್ಟು ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾ ಪೆಸಿಫಿಕ್ನ ಶೇ 37ರಷ್ಟು ಸಿಇಒಗಳು ಮತ್ತು ಜಾಗತಿಕವಾಗಿ ಶೇ 29ರಷ್ಟು ಸಿಇಒಗಳು ಮುಂದಿನ 12 ತಿಂಗಳುಗಳಲ್ಲಿ ಆರ್ಥಿಕ ಬೆಳವಣಿಗೆ ಸುಧಾರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: Dunzo Layoffs: ಬೆಂಗಳೂರು ಮೂಲದ ಡುಂಜೋದಲ್ಲಿ ಶೇ 3ರಷ್ಟು ಉದ್ಯೋಗಿಗಳ ವಜಾ
ಭಾರತದ ಶೇ 93ರಷ್ಟು ಸಿಇಒಗಳು ಕಾರ್ಯನಿರ್ವಹಣೆ ವೆಚ್ಚ ಕಡಿತಗೊಳಿಸುವುದಕ್ಕೇ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ಸಮೀಕ್ಷೆಯಲ್ಲಿ ಒಟ್ಟಾರೆಯಾಗಿ 105 ದೇಶಗಳ 4,410 ಸಿಇಒಗಳು ಭಾಗಿಯಾಗಿದ್ದರು. ಈ ಪೈಕಿ 68 ಮಂದಿ ಭಾರತೀಯ ಕಂಪನಿಗಳ ಸಿಇಒಗಳಾಗಿದ್ದಾರೆ. 2022ರ ಅಕ್ಟೋಬರ್, ನವೆಂಬರ್ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ವಿಶ್ವಬ್ಯಾಂಕ್ ಪ್ರಕಾರ ಭಾರತದ ಆರ್ಥಿಕತೆಯು 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ತುಸು ಮಂದಗತಿಯ ಬೆಳವಣಿಗೆ ಕಾಣಲಿದೆ ಎಂದು ಹೇಳಲಾಗಿದೆ. ದೇಶೀಯ ಬೇಡಿಕೆಯ ಕಾರಣದಿಂದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಇ ಭಾರತ ಗುರುತಿಸಿಕೊಳ್ಳಲಿದೆ ಎಂದೂ ವಿಶ್ವಬ್ಯಾಂಕ್ ಹೇಳಿದೆ.