ಸುಭದ್ರ ಸ್ಥಿತಿಯಲ್ಲಿ ಭಾರತೀಯ ಬ್ಯಾಂಕುಗಳು; ಎನ್ಪಿಎ ಇನ್ನಷ್ಟು ಕಡಿಮೆ: ಆರ್ಬಿಐ ವರದಿ
Banks' NPA has come down, says RBI Report: ಭಾರತದ ಕಮರ್ಷಿಯಲ್ ಬ್ಯಾಂಕುಗಳ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ ಎಂದು ಆರ್ಬಿಐ ವರದಿಯೊಂದು ಹೇಳುತ್ತಿದೆ. ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ಗಳ ಎನ್ಪಿಎ ಶೇ. 2.8ಕ್ಕೆ ಇಳಿದಿದೆ. ನಿವ್ವಳ ಎನ್ಪಿಎ ಶೇ. 0.6ಕ್ಕೆ ಇಳಿದಿದೆ. ಕಮರ್ಷಿಯಲ್ ಬ್ಯಾಂಕುಗಳ ಸಿಆರ್ಎಆರ್ ಅಥವಾ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಶೇ. 16ಕ್ಕಿಂತ ಹೆಚ್ಚಿದ್ದು, ಅನಿಶ್ಚಿತ ಸಂದರ್ಭಕ್ಕೆ ಇದು ಅವಶ್ಯದಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನವದೆಹಲಿ, ಜೂನ್ 27: ಭಾರತದ ಅನುಸೂಚಿತ ವಾಣಿಜ್ಯ ಬ್ಯಾಂಕ್ಗಳ (scheduled commercial bank) ಒಟ್ಟಾರೆ ಅನುತ್ಪಾದಕ ಸಾಲದ (NPA) ಪ್ರಮಾಣ ಶೇ. 2.8ಕ್ಕೆ ಇಳಿದಿದೆ. ಗ್ರಾಸ್ ಎನ್ಪಿಎ ಪ್ರಮಾಣ ಈ ಮಟ್ಟಕ್ಕೆ ಇಳಿದಿರುವುದು ಹಲವು ವರ್ಷಗಳಲ್ಲಿ ಇದೇ ಮೊದಲು. ನಿವ್ವಳ ಎನ್ಪಿಎಯಂತೂ ಶೇ. 0.6 ಮಾತ್ರ ಇದೆ ಎಂದು ಆರ್ಬಿಐ ಜೂನ್ 27, ಇಂದು ಬಿಡುಗಡೆ ಮಾಡಿದ ಅದರ 29ನೇ ಹಣಕಾಸು ಸ್ಥಿರತೆಯ ವರದಿಯಲ್ಲಿ ತಿಳಿಸಿದೆ. ಇದರೊಂದಿಗೆ ಭಾರತದ ಬ್ಯಾಂಕುಗಳು ಸುಭದ್ರ ಸ್ಥಿತಿಯಲ್ಲಿ ಇರುವುದರ ಸೂಚನೆ ಇದಾಗಿದೆ.
ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳ ಅನುತ್ಪಾದಕ ಆಸ್ತಿಯ ಪ್ರಮಾಣ ಕಡಿಮೆ ಆಗುವುದರ ಜೊತೆಗೆ ಅದರ ಆರ್ಒಎ ಅಥವಾ ಆಸ್ತಿ ಮೇಲಿನ ಲಾಭ ಶೇ. 1.3ರಷ್ಟಿದೆ. ಆರ್ಒಇ ಅಥವಾ ಈಕ್ವಿಟಿ ಮೇಲಿನ ಲಾಭ ಶೇ. 13.8ರಷ್ಟಿದೆ. ಇದು ದಶಕದಲ್ಲೇ ಗರಿಷ್ಠ ಮಟ್ಟ ಎನ್ನಲಾಗಿದೆ.
ಸಾಲಕ್ಕೆ ಬದಲಿಯಾಗಿ ಇರಿಸಲಾಗುವ ಮೀಸಲು ನಿಧಿಯ ಪ್ರಮಾಣವಾದ ಸಿಆರ್ಎಆರ್ ಅಥವಾ ಕ್ಯಾಪಿಟಲ್ ಅಡಿಕ್ವಸಿ ರೇಶಿಯೋ ಈ ಕಮರ್ಷಿಯಲ್ ಬ್ಯಾಂಕ್ಗಳಲ್ಲಿ ಸರಾಸರಿಯಾಗಿ ಶೇ. 16.8ರಷ್ಟಿದೆ. ಅನಿಶ್ಚಿತ ಸಂದರ್ಭವನ್ನು ಎದುರಿಸುವಷ್ಟು ಕ್ಯಾಷ್ ಮೊತ್ತ ಬ್ಯಾಂಕುಗಳ ಬಳಿ ಇದೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಆರ್ಬಿಐನ ವರದಿ ಹೇಳುತ್ತಿದೆ.
ಇದನ್ನೂ ಓದಿ: Bank Holidays: ಜುಲೈ ತಿಂಗಳಲ್ಲಿ 12 ದಿನ ರಜೆಗಳಿವೆ; ನಿಮ್ಮ ಊರಲ್ಲಿ ಯಾವ್ಯಾವತ್ತು ರಜೆ? ಇಲ್ಲಿದೆ ಪಟ್ಟಿ
ಭಾರತದ್ದು ಮಾತ್ರವಲ್ಲ ಜಾಗತಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಆರ್ಬಿಐ ವರದಿ ಆಶಾದಾಯಕವಾಗಿದೆ. ‘ಜಾಗತಿಕ ರಾಜಕೀಯ ಬಿಕ್ಕಟ್ಟು, ಸಾರ್ವಜನಿಕ ಸಾಲ ಹೆಚ್ಚಳ, ಹಣದುಬ್ಬರ ಇಳಿಕೆಯಲ್ಲಿನ ಮಂದಗತಿ ಇತ್ಯಾದಿ ಅಂಶಗಳು ಜಾಗತಿಕವಾಗಿ ಆರ್ಥಿಕತೆಗೆ ಹಿನ್ನಡೆಯಾಗಿವೆ. ಆದರೂ ಕೂಡ ಜಾಗತಿಕ ಹಣಕಾಸು ವ್ಯವಸ್ಥೆಯ ಪ್ರತಿರೋಧ ಶಕ್ತಿ ಉತ್ತಮವಾಗಿದೆ, ಸ್ಥಿರವಾಗಿದೆ,’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ವರದಿಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ