ನವದೆಹಲಿ, ಡಿಸೆಂಬರ್ 24: ಭಾರತೀಯ ಕಾರ್ಪೊರೇಟ್ ಕಂಪನಿಗಳಿಗೆ ಈಗ ಅಗತ್ಯ ಬಂಡವಾಳ ಹೆಚ್ಚು ಸುಲಭವಾಗಿ ಸಿಗುತ್ತಿದೆ. ಕಳೆದ 10 ವರ್ಷದಲ್ಲಿ ಭಾರತೀಯ ಕಂಪನಿಗಳು ಬಂಡವಾಳ ಮಾರುಕಟ್ಟೆಯಿಂದ ಗಳಿಸಿದ ಫಂಡಿಂಗ್ 10 ಪಟ್ಟು ಹೆಚ್ಚಾಗಿದೆ ಎಂದು ಎಸ್ಬಿಐನ ವರದಿಯೊಂದರಲ್ಲಿ ತಿಳಿಸಲಾಗಿದೆ. ಬಂಡವಾಳ ಮಾರುಕಟ್ಟೆಯಲ್ಲಿ 2014ರಲ್ಲಿ ಕಂಪನಿಗಳು ಪಡೆದ ಫಂಡಿಂಗ್ 12,068 ಕೋಟಿ ರೂ ಇತ್ತು. ಈ ಹಣಕಾಸು ವರ್ಷದಲ್ಲಿ (2024-25) ಮೊದಲ ಏಳು ತಿಂಗಳಲ್ಲೇ ಗಳಿಸಿದ ಬಂಡವಾಳ ಬರೋಬ್ಬರಿ 1.21 ಲಕ್ಷ ಕೋಟಿ ರೂ. ಈ ಅಂಶವು ಭಾರತದ ಗರಿಗೆದರಿದ ಆರ್ಥಿಕತೆಗೆ ದ್ಯೋತಕವಾಗಿದೆ ಎಂಬುದನ್ನು ಈ ವರದಿ ಎತ್ತಿ ತೋರಿಸಿದೆ.
ಷೇರು ಮಾರುಕಟ್ಟೆಯ ಮಾರುಕಟ್ಟೆ ಬಂಡವಾಳ ಪ್ರಮಾಣದಲ್ಲಿ ಒಂದು ಪ್ರತಿಶತದಷ್ಟು ಹೆಚ್ಚಳವಾದರೆ ದೇಶದ ಜಿಡಿಪಿ ಬೆಳವಣಿಗೆಯ ವೇಗದಲ್ಲಿ ಶೇ. 0.06ರಷ್ಟು ಹೆಚ್ಚಳ ಆಗುತ್ತದೆ. ಅಧಿಕ ಮಾರುಕಟ್ಟೆ ಬಂಡವಾಳವು ಆರ್ಥಿಕತೆಯ ಶಕ್ತಿಯನ್ನು ತೋರಿಸುತ್ತದೆ. ಹೂಡಿಕೆದಾರರ ವಿಶ್ವಾಸ ಹೆಚ್ಚಿನ ಮಟ್ಟದಲ್ಲಿರುವುದೂ ವ್ಯಕ್ತವಾಗುತ್ತದೆ. ಇದರಿಂದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಉತ್ತೇಜಕ ಅಂಶವಾಗಿದೆ ಎಂದು ಎಸ್ಬಿಐನ ರಿಪೋರ್ಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಇಎಲ್ಐ ಸ್ಕೀಮ್: ಯುಎಎನ್ ಸಕ್ರಿಯಗೊಳಿಸಲು, ಬ್ಯಾಂಕ್ ಖಾತೆ ಆಧಾರ್ಗೆ ಲಿಂಕ್ ಮಾಡಲು ಡೆಡ್ಲೈನ್ ವಿಸ್ತರಣೆ
ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಷೇರು ಮತ್ತು ಡಿಬಂಚರ್ಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ. 2013-14ರ ಹಣಕಾಸು ವರ್ಷದಲ್ಲಿ ಷೇರು ಮತ್ತು ಡಿಬೆಂಚರ್ಗಳಲ್ಲಿ ಮಾಡಲಾಗಿದ್ದ ಉಳಿತಾಯವು ಜಿಡಿಪಿಯ ಶೇ. 0.2ರಷ್ಟಿತ್ತು. 2023-24ರಲ್ಲಿ ಇದು ಶೇ. 1ಕ್ಕೆ ಏರಿದೆ ಎಂಬುದನ್ನು ಈ ವರದಿಯಲ್ಲಿ ತಿಳಿಸಲಾಗಿದೆ.
ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ, ಈ ರೀತಿಯ ಷೇರು ಮತ್ತು ಡಿಬೆಂಚರ್ಗಳಲ್ಲಿನ ಉಳಿತಾಯವು ಒಟ್ಟಾರೆ ವೈಯಕ್ತಿಕ ಹಣಕಾಸು ಉಳಿತಾಯದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ.
ಉದಾಹರಣೆಗೆ, 2013-14ರಲ್ಲಿ ಇಂತಹ ಷೇರು ಮತ್ತು ಡಿಬೆಂಚರ್ಗಳಲ್ಲಿ ಮಾಡಲಾಗುತ್ತಿದ್ದ ಉಳಿತಾಯದ ಹಣವು ಒಟ್ಟಾರೆ ಉಳಿತಾಯದ ಶೇ. 1ರಷ್ಟಿತ್ತು. 2023-24ರಲ್ಲಿ ಇದು ಶೇ. 5ಕ್ಕೆ ಹೆಚ್ಚಾಗಿದೆ. ಜನರಿಂದ ಹಣವು ಬಂಡವಾಳ ಮಾರುಕಟ್ಟೆಗೆ ಹೆಚ್ಚೆಚ್ಚು ಹರಿದುಹೋಗತೊಡಗಿದೆ.
ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ; ರಾಷ್ಟ್ರೀಯ ರೈತ ಸಹಾಯವಾಣಿ ಸ್ಥಾಪನೆ ಸಾಧ್ಯತೆ
ಹತ್ತು ವರ್ಷದ ಹಿಂದಕ್ಕೆ ಹೋಲಿಸಿದರೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಲಿಸ್ಟೆಡ್ ಷೇರುಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ ಆರು ಪಟ್ಟು ಹೆಚ್ಚಾಗಿದೆ. ಇವತ್ತು ಎನ್ಎಸ್ಇನಲ್ಲಿನ ಒಟ್ಟಾರೆ ಮಾರ್ಕೆಟ್ ಕ್ಯಾಪ್ 441 ಲಕ್ಷ ಕೋಟಿ ರೂಗೆ ಬೆಳೆದಿದೆ. ಎನ್ಎಸ್ಇನ ಈಕ್ವಿಟಿ ಕ್ಯಾಷ್ ಸೆಗ್ಮೆಂಟ್ನಲ್ಲಿ 2013-14ರಲ್ಲಿ ಸರಾಸರಿ ಟ್ರೇಡ್ ಗಾತ್ರ 19,460 ರೂ ಇತ್ತು. ಇವತ್ತು ಅದು 30,742 ರೂಗೆ ಏರಿದೆ ಎನ್ನುವ ಸಂಗತಿಯನ್ನು ಎಸ್ಬಿಐ ರಿಪೋರ್ಟ್ನಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ