ಮುಂಬೈ, ಸೆಪ್ಟೆಂಬರ್ 2: ಪ್ರಬಲ ಜಾಗತಿಕ ಆರ್ಥಿಕ ಬೆಳವಣಿಗೆಯ ಲಾಭ ಪಡೆಯಲು ಭಾರತ ಸರಿಯಾದ ಸ್ಥಿತಿಯಲ್ಲಿದೆ. ಆದರೆ, ಅರ್ಥೀಕರಣ ಹೆಚ್ಚುತ್ತಿರುವ ಬಗ್ಗೆ ಎಚ್ಚರದಿಂದರಬೇಕು ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಹೇಳಿದರು. ಇಲ್ಲಿ ಇಂದು ಸೋಮವಾರ ಸಿಐಐ ಫೈನಾನ್ಸಿಂಗ್ 3.0 ಸಭೆಯಲ್ಲಿ ಮಾತನಾಡುತ್ತಿದ್ದ ಸಿಇಎ ಅವರು, ಭಾರತದ ಆರ್ಥಿಕತೆಯನ್ನು ಮೀರಿಸಿ ಹಣಕಾಸು ಮಾರುಕಟ್ಟೆ ಬೆಳೆಯುತ್ತಿರುವ ಅಪಾಯವನ್ನು ನಿವೇದಿಸುವ ಪ್ರಯತ್ನ ಮಾಡಿದರು.
ಭಾರತದ ಷೇರುಮಾರುಕಟ್ಟೆಯ ಗಾತ್ರವು ದೇಶದ ಜಿಡಿಪಿಯ ಶೇ. 140ರಷ್ಟಿದೆ. ಹಣಕಾಸು ವಲಯದ ಲಾಭ ಹೆಚ್ಚುತ್ತಲೇ ಇದೆ. ಇಷ್ಟೊಂದು ಅಧಿಕ ಮಟ್ಟದ ಮಾರುಕಟ್ಟೆ ಸಂಪತ್ತು ಇರುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಮಾರುಕಟ್ಟೆಯು ಆರ್ಥಿಕತೆಗಿಂತ ದೊಡ್ಡದಾಗಿ ಹೋದರೆ ಸ್ವಾಭಾವಿಕವಾಗಿ ಸಾರ್ವಜನಿಕ ನೀತಿ ಮತ್ತು ನಿರ್ಧಾರಗಳಿಗೆ ಅದರ ಪ್ರಭಾವ ಇರುತ್ತದೆ ಎಂದು ಸಿಇಎ ಅನಂತ ನಾಗೇಶ್ವರನ್ ಎಚ್ಚರಿಸಿದರು.
ಇದನ್ನೂ ಓದಿ: ಇಥನಾಲ್ ಮಿಶ್ರಿತ ಪೆಟ್ರೋಲ್ನಿಂದಾಗಿ ದೇಶದ ಖಜಾನೆಗೆ ಹತ್ತು ವರ್ಷದಿಂದ ಲಕ್ಷ ಕೋಟಿ ರೂ ಹಣ ಉಳಿತಾಯ?
ಅಮೆರಿಕ, ಜಪಾನ್ ಇತ್ಯಾದಿ ಮುಂದುವರಿದ ದೇಶಗಳಲ್ಲಿ ಮಾರುಕಟ್ಟೆ ಬಂಡವಾಳ ಅವುಗಳ ಜಿಡಿಪಿಗಿಂತ ಬಹಳ ಹೆಚ್ಚಿದೆ. ಅಲ್ಲಿ ಅತಿಯಾಗಿ ಹಣಮಯವಾದ ಪರಿಣಾಮ ಸಾಲದ ಮಟ್ಟ ಬಹಳ ಹೆಚ್ಚಿದೆ. ಆಸ್ತಿ ಬೆಲೆ ಹೆಚ್ಚಳದ ಮೇಲೆ ಆರ್ಥಿಕ ಅಭಿವೃದ್ಧಿ ನಿಂತಿದೆ. ಅಸಮಾನತೆ ಹೆಚ್ಚಿದೆ. ಈ ಅಡ್ಡಪರಿಣಾಮಗಳ ಬಗ್ಗೆ ಭಾರತ ಎಚ್ಚರದಿಂದಿರಬೇಕು. ಅಂಥ ಸ್ಥಿತಿ ಎದುರಾಗದಂತೆ ತಪ್ಪಿಸಬೇಕು. ದೇಶದ ಆರ್ಥಿಕ ಆದ್ಯತೆಗಳು ಮತ್ತು ಹೂಡಿಕೆದಾರರ ಹಿತಾಸಕ್ತಿ ಮಧ್ಯೆ ಒಂದು ಸಮತೋಲನ ತರಬೇಕು ಎಂದು ಮುಖ್ಯ ಆರ್ಥಿಕ ಸಲಹೆಗಾರರು ಕಿವಿಮಾತು ಹೇಳಿದರು.
ಭಾರತವು ಬೇರೆಯವರ ಅಜೆಂಡಾಗೆ ಒಳಪಡುವುದಕ್ಕಿಂತ, ತಾನೇ ಜಾಗತಿಕ ಅಜೆಂಡಾ ರೂಪಿಸಬೇಕು. ದೇಶದ ಆರ್ಥಿಕತೆಯ ಗಾತ್ರ ಮತ್ತು ಪ್ರಭಾವವು ನಮಗೆ ಜಾಗತಿಕ ಅಜೆಂಡಾ ರೂಪಿಸುವ ಸಾಮರ್ಥ್ಯ ತಂದು ಕೊಡುತ್ತದೆ. ಇದರಿಂದ ನಮ್ಮ ಆರ್ಥಿಕ ಸಾಧನೆ ಹೆಚ್ಚುತ್ತದೆ ಎಂದು ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹಾರುವ ಕಾರಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ; ಇನ್ನೆರಡು ವರ್ಷದೊಳಗೆ ಕಾಣಲಿದೆ ಮೊದಲ ಏರ್ ಟ್ಯಾಕ್ಸಿ
ಭಾರತದ ಆರ್ಥಿಕತೆಯ ಸ್ಥಿತಿ ಆಶಾದಾಯಕವಾಗಿದ್ದು, ಇದರಿಂದ ಅದರ ಭವಿಷ್ಯ ರೂಪಿಸುವ ಅವಕಾಶ ಸೃಷ್ಟಿಯಾಗುತ್ತದೆ. ದೂರಗಾಮಿಯಾಗಿ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆ ಕಾಪಾಡಲು ಜಾಣತನದಿಂದ ಹೆಜ್ಜೆ ಇಡಬೇಕು. ಈಗ ನಾವು ಯಾವುದಾದರೂ ಕ್ರಮ ತೆಗೆದುಕೊಂಡರೆ ಅದರ ಫಲ ವ್ಯಕ್ತವಾಗಲು ಸಮಯ ಬೇಕಾಗುತ್ತದೆ ಎನ್ನುವುದು ಅರಿವಿರಬೇಕು ಎಂದು ಸಿಇಎ ಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ