ವಾಷಿಂಗ್ಟನ್: ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಎಂಬಂತೆ ಆಗಿದೆ ಭಾರತ ಮೂಲದ ಟಾಪ್ ಎಕ್ಸಿಕ್ಯೂಟಿವ್ ನವೀನ್ ಶೆಟ್ಟಿ (Nevin Shetty) ಕತೆ. ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರದಲ್ಲಿರುವ ಫ್ಯಾಬ್ರಿಕ್ (Fabric) ಎಂಬ ಸ್ಟಾರ್ಟಪ್ನಲ್ಲಿ ಸಿಎಫ್ಒ ಆಗಿದ್ದಾಗ ನವೀನ್ ಶೆಟ್ಟಿ ಮಾಡಿದ ಕರ್ಮಕಾಂಡ ಇದೀಗ ಅವರ ಬೆನ್ನುಹತ್ತಿದೆ. ಯಾವುದೋ ನಿರೀಕ್ಷೆಯಲ್ಲಿ ಕಂಪನಿ ದುಡ್ಡು ಕದ್ದು ಕ್ರಿಪ್ಟೋ ಮೇಲೆ ಹೂಡಿಕೆ ಮಾಡಿ ಇದ್ದಬದ್ದದ್ದೆನ್ನೆಲ್ಲಾ ಕಳೆದುಕೊಂಡ ಭಾರತ ಮೂಲದ 39 ವರ್ಷದ ನೆವೀನ್ ಶೆಟ್ಟಿ ವಿರುದ್ಧ ನಾಲ್ಕು ಗುರುತರ ಆರೋಪಗಳು ದಾಖಲಾಗಿವೆ. ಈ ಪ್ರಕರಣವನ್ನು ಗಂಭೀರ ಸ್ವರೂಪದ್ದೆಂದು ಪರಿಗಣಿಸಲಾಗಿದ್ದು, ಆರೋಪ ಸಾಬೀತಾದರೆ 20 ವರ್ಷದವರೆಗೂ ಸೆರೆಮನೆವಾಸದ ಶಿಕ್ಷೆ ಸಿಗಬಹುದು.
39 ವರ್ಷದ ನವೀನ್ ಶೆಟ್ಟಿ ಈ ಹಿಂದೆ ಬ್ಲ್ಯೂಪ್ರಿಂಟ್ ರಿಜಿಸ್ಟ್ರಿ ಎಂಬ ಸ್ಟಾರ್ಟಪ್ನ ಸಿಇಒ ಆಗಿದ್ದವರು. 2021 ಮಾರ್ಚ್ ತಿಂಗಳಲ್ಲಿ ಅವರು ರೀಟೇಲ್ ವಾಣಿಜ್ಯ ವ್ಯವಹಾರಗಳಿಗೆ ಸಾಫ್ಟ್ವೇರ್ ಪ್ಲಾಟ್ಫಾರ್ಮ್ ರೂಪಿಸುವ ಫ್ಯಾಬ್ರಿಕ್ ಕಂಪನಿಗೆ ಸಿಎಫ್ಒ ಆಗಿ ನೇಮಕವಾಗಿದ್ದರು.
ಒಂದು ವರ್ಷದ ಬಳಿಕ ಕೆಲಸದ ಸಾಧನೆ ತೃಪ್ತಿದಾಯಕವಿಲ್ಲ. ಸಿಎಫ್ಒ ಸ್ಥಾನದಿಂದ ಹೊರಹೋಗಬೇಕಾಗಬಹುದು ಎಂದು ಕಂಪನಿ ಹೇಳಿದಾಗ ನವೀನ್ ಶೆಟ್ಟಿ ತಲೆಯಲ್ಲಿ ಮತ್ತೇನೋ ಆಲೋಚನೆ ಹುಟ್ಟಿತ್ತು. ಕಂಪನಿಗೆ ಗೊತ್ತಾಗದ ಹಾಗೆ 35 ಮಿಲಿಯನ್ ಡಾಲರ್ ಹಣವನ್ನು (ಸುಮಾರು 290 ಕೋಟಿ ರೂಪಾಯಿ) ಕದ್ದು ಹೈಟವರ್ ಟ್ರೆಷರಿ ಎಂಬ ಕ್ರಿಪ್ಟೋ ಪ್ಲಾಟ್ಫಾರ್ಮ್ ಮೇಲೆ ಹೂಡಿಕೆ ಮಾಡಿದ್ದಾನೆ. ಕುತೂಹಲ ಎಂದರೆ ಈ ಪ್ಲಾಟ್ಫಾರ್ಮ್ ಅನ್ನು ನವೀನ್ ಶೆಟ್ಟಿಯೆ ಸೈಡ್ ಬ್ಯುಸಿನೆಸ್ ಆಗಿ ನಿರ್ವಹಿಸುತ್ತಿರುತ್ತಾನೆ.
ಈ ರೀತಿ ಕ್ರಿಪ್ಟೋಗೆ ಹೂಡಿಕೆ ಮಾಡುವ ಆಲೋಚನೆಯ ಹಿಂದೆ ನವೀನ್ ಶೆಟ್ಟಿಗೆ ಬೇರೆಯೇ ಪ್ಲಾನ್ ಇತ್ತು. ಕ್ರಿಪ್ಟೋ ಪ್ಲಾಟ್ಫಾರ್ಮ್ನಲ್ಲಿ ಮಾಡಿದ ಹೂಡಿಕೆಯಿಂದ ಬರುವ ರಿಟರ್ನ್ನಲ್ಲಿ ತಾನು ಪಡೆಯುವುದು ಅವನ ಉದ್ದೇಶವಾಗಿತ್ತು. ಫ್ಯಾಬ್ರಿಕ್ ಕಂಪನಿಗೆ ಶೇ. 6ರ ಬಡ್ಡಿ ಕೊಡುವುದು ಹಾಗೂ ಉಳಿದ ಲಾಭವನ್ನು ತಾನು ಇಟ್ಟುಕೊಳ್ಳುವುದು ಎಂಬುದು ಶೆಟ್ಟಿಯ ಲೆಕ್ಕಾಚಾರವಾಗಿತ್ತು. ಆದರೆ, ಎಲ್ಲವೂ ಅಂದುಕೊಂಡಂತೆ ಆಗಬೇಕಲ್ಲ. ಆತ ಕ್ರಿಪ್ಟೋಗೆ ಹೂಡಿಕೆ ಮಾಡಿದ್ದ ಕಾಲ ಕ್ರಿಪ್ಟೋಗೆ ದುರ್ದಿನಗಳಾಗಿದ್ದಂತಹವು. ಕ್ರಿಪ್ಟೋ ಜಗತ್ತೇ ನೆಲಕಚ್ಚಿಹೋಗುತ್ತಿದ್ದಂತಹ ಕಾಲಘಟ್ಟ. ಹೈಟವರ್ ಟ್ರೆಷರಿಯಲ್ಲಿ ಮಾಡಿದ್ದ ಕ್ರಿಪ್ಟೋ ಹೂಡಿಕೆ ಎಲ್ಲವೂ ಬಹುತೇಕ ಶೂನ್ಯಕ್ಕೆ ಇಳಿದವು. ಅಷ್ಟೂ ದುಡ್ಡು ನಿರ್ನಾಮವಾಗಿ ಹೋಗಿತ್ತು.
ಆಡಳಿತದ ಗಮನಕ್ಕೆ ತಾರದೆಯೇ 35 ಮಿಲಿಯನ್ ಡಾಲರ್ ಹಣವನ್ನು ಕದ್ದು ಸಾಗಿಸಿರುವ ಸಂಗತಿ ಗೊತ್ತಾದ ಬಳಿಕ ಫ್ಯಾಬ್ರಿಕ್ ಕಂಪನಿಯು ಅಮೆರಿಕದ ಎಫ್ಬಿಐ ಗಮನಕ್ಕೆ ತಂದಿತು. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಈ ಪ್ರಕರಣದ ತನಿಖೆ ನಡೆಸಿ, ನವೀನ್ ಶೆಟ್ಟಿಯ ಕರ್ಮಕಾಂಡವನ್ನು ಬಯಲಿಗೆ ತಂದಿದೆ.
ಸಿಎಫ್ಒ ಆಗಿ ನವೀನ್ ಶೆಟ್ಟಿ ಅವರಿಗೆ ಕಂಪನಿಗೆ ಲಾಭ ತರುವ ಹೂಡಿಕೆಗಳನ್ನು ಗುರುತಿಸುವ ಜವಾಬ್ದಾರಿ ಇತ್ತು. ಅ ನಿಟ್ಟಿನಲ್ಲಿ ಅವರು ಕ್ರಿಪ್ಟೋ ಮೇಲೆ ಹೂಡಿಕೆ ಮಾಡಿದ್ದಾರೆ. ಅದರಿಂದ ಆದ ನಷ್ಟದಿಂದ ಅವರು ವೈಯಕ್ತಿಕವಾಗಿ ಕಂಗೆಟ್ಟುಹೋಗಿದ್ದಾರೆ. ಕಂಪನಿಗೆ ವಂಚನೆ ಮಾಡುವ ಉದ್ದೇಶದಿಂದ ಅವರು ಆ ಕೆಲಸ ಮಾಡಿಲ್ಲ ಎಂದು ನವೀನ್ ಶೆಟ್ಟಿ ಪರ ವಕೀಲರು ಕೋರ್ಟ್ನಲ್ಲಿ ವಾದಿಸುತ್ತಿದ್ದಾರೆ.