ಸೂಪರ್ ಫಾಸ್ಟ್ ಆಗಿ ಚಾರ್ಚ್ ಆಗುವ ಸೋಡಿಯಂ ಬ್ಯಾಟರಿ ತಯಾರಿಸಿದ ಬೆಂಗಳೂರಿನ ವಿಜ್ಞಾನಿಗಳು; ಸ್ವಾವಲಂಬನೆಯ ಹಾದಿ ಸುಗಮ

Indian scientists develop sodium ion battery: ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಸೋಡಿಯಂ ಅಯಾನ್ ಬ್ಯಾಟರಿ ಅಭಿವೃದ್ಧಿಪಡಿಸಿದೆ. ಲಿಥಿಯಂ ಅಯಾನ್ ಬ್ಯಾಟರಿಗಿಂತ ಇದು ವೇಗವಾಗಿ ಚಾರ್ಜ್ ಅಗಬಲ್ಲುದು, ಬ್ಯಾಟರಿಯ ಬಾಳಿಕೆಯೂ ಹೆಚ್ಚು ಕಾಲ ಇರುತ್ತದೆ. ಅಗ್ಗವೂ ಹೌದು. ಭಾರತದಲ್ಲಿ ಸೋಡಿಯಂ ಹೇರಳವಾಗಿ ಸಿಗುವ ವಸ್ತುವಾದ್ದರಿಂದ ಲಿಥಿಯಂ ಆಮದನ್ನು ಭಾರತ ತಪ್ಪಿಸಬಹುದು.

ಸೂಪರ್ ಫಾಸ್ಟ್ ಆಗಿ ಚಾರ್ಚ್ ಆಗುವ ಸೋಡಿಯಂ ಬ್ಯಾಟರಿ ತಯಾರಿಸಿದ ಬೆಂಗಳೂರಿನ ವಿಜ್ಞಾನಿಗಳು; ಸ್ವಾವಲಂಬನೆಯ ಹಾದಿ ಸುಗಮ
ಸೋಡಿಯಂ ಅಯಾನ್ ಬ್ಯಾಟರಿ

Updated on: May 25, 2025 | 4:44 PM

ಬೆಂಗಳೂರು, ಮೇ 25: ಸಿಲಿಕಾನ್ ಸಿಟಿಯ ವಿಜ್ಞಾನಿಗಳು ಬಹಳ ವೇಗವಾಗಿ ಚಾರ್ಜ್ ಆಗಬಲ್ಲ ಮತ್ತು ಹೆಚ್ಚು ಕಾಲ ಬಾಳಿಕೆ ಬರಬಲ್ಲ ಸೋಡಿಯಂ ಅಯಾನ್ ಬ್ಯಾಟರಿ (Sodium Ion Battery) ಅಭಿವೃದ್ಧಿಪಡಿಸಿದ್ದಾರೆ. ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರಿಸರ್ಚ್​ನ (Jawaharlal Nehru Center for Advanced Scientific Research) ಪ್ರೊಫೆಸರ್ ಪ್ರೇಮಕುಮಾರ್ ಸೆಂಗುಟ್ಟುವನ್ ನೇತೃತ್ವದ ವಿಜ್ಞಾನಿಗಳು ಈ ಬ್ಯಾಟರಿ ಆವಿಷ್ಕರಿಸಿದ್ದಾರೆ. ಇದು ಲಿಥಿಯಮ್ ಅಯಾನ್ ಬ್ಯಾಟರಿಗಿಂತ ಹೆಚ್ಚು ವೇಗವಾಗಿ ಚಾರ್ಜ್ ಆಗುತ್ತದೆ. ಹೆಚ್ಚು ಬಾಳಿಕೆ ಬರುತ್ತದೆ. ವರದಿ ಪ್ರಕಾರ, ಕೇವಲ ಆರು ನಿಮಿಷದಲ್ಲಿ ಶೇ. 80ರಷ್ಟು ಚಾರ್ಜ್ ಆಗುತ್ತದೆ. 3,000 ಕ್ಕಿಂತ ಹೆಚ್ಚು ಚಾರ್ಜ್ ಸೈಕಲ್​​ಗಳನ್ನು ಇದು ನೀಡುತ್ತದೆ.

ಈ ಆವಿಷ್ಕಾರವು ಭಾರತಕ್ಕೆ ಉಪಯುಕ್ತ ಎನಿಸಲಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಗಣನೀಯವಾಗಿ ಬೆಳೆಯುತ್ತಿದೆ. ಹಾಗೆಯೇ ಸೌರಶಕ್ತಿ ಬಳಕೆಗೆ ಈ ಬ್ಯಾಟರಿಗಳ ಅವಶ್ಯಕತೆ ಬಹಳ ಇದೆ. ಸದ್ಯ ಲಿಥಿಯಂ ಅಯಾನ್ ಬ್ಯಾಟರಿಯನ್ನು ಬಳಸಲಾಗುತ್ತಿದೆ. ಲಿಥಿಯಮ್ ವಿರಳವಾಗಿ ಲಭ್ಯ ಇರುವ ವಸ್ತುವಾಗಿದ್ದು, ಭಾರತವು ಸಂಪೂರ್ಣವಾಗಿ ಇದರ ಆಮದು ಮಾಡುತ್ತಿದೆ.

ಇದನ್ನೂ ಓದಿ: ಬ್ರಿಟನ್​​ನಿಂದ ಗುಳೆ ಹೊರಟ ಶ್ರೀಮಂತರ ಪಟ್ಟಿಗೆ ಭಾರತ ಮೂಲದ ಶ್ರವಿಣ್ ಸೇರ್ಪಡೆ; ಸಾಹುಕಾರರು ಯುಕೆ ಬಿಡಲು ಏನು ಕಾರಣ?

ಇದನ್ನೂ ಓದಿ
ಶ್ರೀಮಂತರು ಬ್ರಿಟನ್ ಬಿಟ್ಟು ಹೋಗುತ್ತಿರುವುದ್ಯಾಕೆ?
ಐಫೋನ್ ಮೇಲೆ ಶೇ. 25 ಆಮದು ಸುಂಕ: ಟ್ರಂಪ್
ಭಾರತವನ್ನು ನೇರವಾಗಿ ಎದುರಿಸಲ್ಲ ಚೀನಾ; ಕಾರಣಗಳೇನು?
1 ಬ್ಯಾರಲ್ ತೈಲದಿಂದ ಎಷ್ಟು ಪೆಟ್ರೋಲ್ ತಯಾರಿಕೆ ಸಾಧ್ಯ?

ಇದಕ್ಕೆ ವ್ಯತಿರಿಕ್ತವಾಗಿ, ಸೋಡಿಯಂ ಭಾರತದಲ್ಲಿ ವ್ಯಾಪಕವಾಗಿ ಲಭ್ಯ ಇದೆ. ಸೋಡಿಯಂ ಅಯಾನ್ ಬ್ಯಾಟರಿ ಆವಿಷ್ಕಾರ ಮಾಡಲಾಗಿರುವುದರಿಂದ ಲಿಥಿಯಂ ಆಮದು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಸೌರಶಕ್ತಿ ಮತ್ತು ಬ್ಯಾಟರಿ ಉತ್ಪಾದನೆಯಲ್ಲಿ ಭಾರತ ಹೆಚ್ಚು ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.

ಚಾರ್ಜ್ ಸೈಕಲ್ ಎಂದರೇನು?

ಭಾರತೀಯ ವಿಜ್ಞಾನಿಗಳು ಆವಿಷ್ಕರಿಸಿರುವ ಸೋಡಿಯಂ ಅಯಾನ್ ಬ್ಯಾಟರಿಯ ಚಾರ್ಜ್ ಸೈಕಲ್ 3,000 ಎನ್ನಲಾಗಿದೆ. ಅಂದರೆ, ಇದು 3,000 ಬಾರಿ ಪೂರ್ಣ ಚಾರ್ಜ್ ಮಾಡುವಷ್ಟು ಬಾಳಿಕೆ ಬರುತ್ತದೆ. ಲಿಥಿಯಂ ಅಯಾನ್ ಬ್ಯಾಟರಿಯ ಚಾರ್ಜ್ ಸೈಕಲ್ 500ರಿಂದ 1,000 ಇರುತ್ತದೆ. ಲಿಥಿಯಂಗೆ ಹೋಲಿಸಿದರೆ ಸೋಡಿಯಂ ಅಯಾನ್ ಬ್ಯಾಟರಿ 8-10 ವರ್ಷ ಹೆಚ್ಚು ಕಾಲ ಬಾಳಿಕೆ ಬರಬಲ್ಲುದು. ಲಿಥಿಯಮ್ ಬ್ಯಾಟರಿಗಿಂತ ಇದು ಅಗ್ಗವೂ ಹೌದು. ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಸೋಡಿಯಂ ಅಯಾನ್ ಬ್ಯಾಟರಿಯು ಸಾವಿರಾರು ಬಾರಿ ಚಾರ್ಜ್ ಸೈಕಲ್ ಆದ ಬಳಿಕವೂ ಶೇ. 80ರಷ್ಟು ಸಾಮರ್ಥ್ಯ ಉಳಿಸಿಕೊಂಡಿರುತ್ತದೆ.

ಇದನ್ನೂ ಓದಿ: ಜಪಾನ್ ಅನ್ನು ಹಿಂದಿಕ್ಕಿರುವ ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ: ನೀತಿ ಆಯೋಗ್ ಸಿಇಒ

ಭಾರತೀಯ ವಿಜ್ಞಾನಿಗಳು ಸೋಡಿಯಂ ಅಯಾನ್ ಬ್ಯಾಟರಿಯ ಪ್ರೋಟೋಟೈಪ್ ಸಿದ್ಧಪಡಿಸಿದ್ದಾರೆ. ಇದರ ಕಠಿಣತಮ ಪ್ರಯೋಗ, ಪರೀಕ್ಷೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆಯಂತೆ. ಭಾರತದ ಗ್ರೀನ್ ಎನರ್ಜಿ ಮಿಷನ್ ಅನ್ನು ಇನ್ನಷ್ಟು ವೇಗವಾಗಿ ಪೂರ್ಣಗೊಳಿಸಲು ಇದು ಸಾಧ್ಯವಾಗಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ