ನವದೆಹಲಿ, ಜನವರಿ 15: ಭಾರತದ ಷೇರು ಮಾರುಕಟ್ಟೆ (stock market) ಪುಟಿದೆದ್ದು ಉತ್ಸಾಹದಿಂದ ಮಿಂಚುತ್ತಿರುವಂತಿದೆ. ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಹೊಸ ಎತ್ತರಕ್ಕೆ ಏರಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ (BSE Sensex) ಸಂಕ್ರಾಂತಿ ಹಬ್ಬದ ದಿನದಂದು 600 ಅಂಕಗಳಷ್ಟು ವೃದ್ಧಿ ಕಂಡು, 73,168 ಅಂಕಗಳ ಮಟ್ಟಕ್ಕೆ ಏರಿದೆ. ಬಿಎಸ್ಇ ಇತಿಹಾಸದಲ್ಲಿ 30 ಷೇರುಗಳ ಸೆನ್ಸೆಕ್ಸ್ ಏರಿದ ಗರಿಷ್ಠ ಎತ್ತರ ಇದು. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ (NSE Nifty) ಕೂಡ ಇಂದು ಸೋಮವಾರ 22,000 ಅಂಕಗಳ ಗಡಿಯನ್ನು ಮೊದಲ ಬಾರಿಗೆ ಮುಟ್ಟಿದೆ.
50 ಷೇರುಗಳ ನಿಫ್ಟಿ ಸೂಚ್ಯಂಕ ಸಂಕ್ರಾಂತಿ ಹಬ್ಬದ ದಿನದಂದು 150 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ 22,056.10 ಅಂಕಗಳ ಗಡಿ ಮುಟ್ಟಿದೆ. ಎನ್ಎಸ್ಇ ಇತಿಹಾಸದಲ್ಲಿ ನಿಫ್ಟಿ ಏರಿದ ಗರಿಷ್ಠ ಎತ್ತರ ಇದು. ನಿಫ್ಟಿ 50 ಸತತ ಐದು ಸೆಷನ್ ಹೆಚ್ಚಳ ಕಂಡಿದೆ.
ಇದನ್ನೂ ಓದಿ: Facts: ಬಜೆಟ್ ಮಂಡನೆ ಫೆಬ್ರುವರಿ ಕೊನೆಯ ದಿನದ ಬದಲು 1ರಂದು ಯಾಕೆ? ಸಂಜೆ 5ರ ಬದಲು ಬೆಳಗ್ಗೆ 11ಗಂಟೆಗೆ ಬದಲಾಗಿದ್ದು ಯಾಕೆ?
ಬಿಎಸ್ಇ ಮತ್ತು ಎನ್ಎಸ್ಇಯ ಬಹುತೇಕ ಎಲ್ಲ ಸೂಚ್ಯಂಕಗಳು ಹಿಗ್ಗಿವೆ. ನಿಫ್ಟಿ ಮಿಡ್ಕ್ಯಾಪ್, ಸ್ಮಾಲ್ ಕ್ಯಾಪ್ ಮೊದಲಾದ ವಿವಿಧ ಸೂಚ್ಯಂಕಗಳು ಅಂಕ ವೃದ್ಧಿ ಕಂಡಿವೆ.
ಸೆನ್ಸೆಕ್ಸ್ ಮತ್ತು ನಿಫ್ಟಿಯ ಈ ಅಗಾಧ ಬೆಳವಣಿಗೆಗೆ ಕಾರಣವಾಗಿದ್ದು ಐಟಿ ದಿಗ್ಗಜ ಸಂಸ್ಥೆಗಳ ಹಣಕಾಸು ವರದಿ ಇತ್ತೀಚೆಗೆ ಬಿಡುಗಡೆ ಆಗಿದ್ದು, ಈ ಸಂಸ್ಥೆಗಳು ಉತ್ತಮ ಲಾಭ ತೋರಿಸಿವೆ. ಅದರ ಪರಿಣಾಮವು ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕದ ಮೇಲೆ ಪರಿಣಾಮ ಬೀರಿದೆ.
ನಿಫ್ಟಿ ಮತ್ತು ಸೆನ್ಸೆಕ್ಸ್ನಲ್ಲಿ ಲಿಸ್ಟ್ ಆಗಿರುವ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್ಸಿಎಲ್ ಇತ್ಯಾದಿ ಕಂಪನಿಗಳ ಆದಾಯವು ಮೂರನೇ ತ್ರೈಮಾಸಿಕದಲ್ಲಿ ಉತ್ತಮವಾಗಿದೆ. ಇದರ ಪರಿಣಾಮವಾಗಿ ಈ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಿ ಬೆಲೆ ಹೆಚ್ಚಾಗಿದೆ. ಹೀಗಾಗಿ, ಸೂಚ್ಯಂಕಗಳೂ ವೃದ್ಧಿ ಕಂಡಿವೆ.
ಇದನ್ನೂ ಓದಿ: Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಕಳೆದ ಐದು ವಾರದಲ್ಲಿ ಮೊದಲ ಬಾರಿಗೆ ಇಳಿಕೆ
ಹಿಂದೆಲ್ಲಾ ತುಸು ಮಂದಗತಿಯ ಬೆಳವಣಿಗೆ ಹೊಂದುತ್ತಿದ್ದ ಇನ್ಫೋಸಿಸ್ ಮತ್ತು ವಿಪ್ರೋದ ಷೇರುಗಳು ಈಗ ಚುರುಕು ಕಂಡಿವೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ವಿಪ್ರೋ ಷೇರು ಬೆಲೆ ಶೇ. 11ಕ್ಕಿಂತಲೂ ಹೆಚ್ಚಾಗಿದೆ. ಇನ್ಫೋಸಿಸ್, ಟಿಸಿಎಸ್ ಮತ್ತು ಎಚ್ಸಿಎಲ್ ಷೇರು ಬೆಲೆ ಶೇ. 2ರಿಂದ 4ರವರೆಗೆ ಹೆಚ್ಚಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Mon, 15 January 24