AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facts: ಬಜೆಟ್ ಮಂಡನೆ ಫೆಬ್ರುವರಿ ಕೊನೆಯ ದಿನದ ಬದಲು 1ರಂದು ಯಾಕೆ? ಸಂಜೆ 5ರ ಬದಲು ಬೆಳಗ್ಗೆ 11ಗಂಟೆಗೆ ಬದಲಾಗಿದ್ದು ಯಾಕೆ?

Union Budget 2024, ಬ್ರಿಟಿಷರ ಕಾಲದಿಂದಲೂ ಬಜೆಟ್ ಮಂಡನೆ ಫೆಬ್ರುವರಿ ಕೊನೆಯ ದಿನದಂದು ಮತ್ತು ಸಂಜೆ 5 ಗಂಟೆಗೆ ಆಗುತ್ತಿತ್ತು. 1999ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಸಮಯವನ್ನು ಸಂಜೆ 5ರ ಬದಲು ಬೆಳಗ್ಗೆ 11 ಗಂಟೆಗೆ ಬದಲಿಸಲಾಯಿತು. 2017ರಲ್ಲಿ ಬಜೆಟ್ ಮಂಡನೆ ದಿನವನ್ನು ಫೆಬ್ರುವರಿ ಕೊನೆಯ ಬದಲು ಫೆಬ್ರುವರಿ 1ರಂದು ನಡೆಸಲು ಮೊದಲುಗೊಳ್ಳಲಾಯಿತು.

Facts: ಬಜೆಟ್ ಮಂಡನೆ ಫೆಬ್ರುವರಿ ಕೊನೆಯ ದಿನದ ಬದಲು 1ರಂದು ಯಾಕೆ? ಸಂಜೆ 5ರ ಬದಲು ಬೆಳಗ್ಗೆ 11ಗಂಟೆಗೆ ಬದಲಾಗಿದ್ದು ಯಾಕೆ?
ಬಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 14, 2024 | 5:40 PM

Share

ಕೇಂದ್ರ ಬಜೆಟ್ ಎಂಬುದು ಮುಂದಿನ ಹಣಕಾಸು ವರ್ಷಕ್ಕೆ ಸರ್ಕಾರದ ಆದಾಯ ಮತ್ತು ವೆಚ್ಚದ ಅಂದಾಜು ಲೆಕ್ಕಪತ್ರ. ಈ ವರ್ಷ ಚುನಾವಣೆ ಇರುವುದರಿಂದ ಈ ಬಾರಿಯದ್ದು ಮಧ್ಯಂತರ ಬಜೆಟ್. ಫೆಬ್ರುವರಿ 1ರಂದು ಹಣಕಾಸು ಸಚಿವರಿಂದ ಬಜೆಟ್ (Union Budget 2024) ಮಂಡನೆ ಆಗುತ್ತದೆ. ಈಗ್ಗೆ 2017ರಿಂದಲೂ ಬಜೆಟ್ ಮಂಡನೆ ಫೆಬ್ರುವರಿ 1ರಂದೇ ಆಗುತ್ತಿದೆ. ಹಾಗೆಯೇ, 2017ರಿಂದ ಪ್ರತ್ಯೇಕ ರೈಲ್ವೆ ಬಜೆಟ್ ನಡೆಯುತ್ತಾ ಬಂದಿಲ್ಲ. ಕೇಂದ್ರ ಬಜೆಟ್​ನೊಳಗೆಯೇ ರೈಲ್ವೆ ಬಜೆಟ್ ಅನ್ನೂ ಸೇರಿಸಲಾಗಿದೆ.

2017ಕ್ಕೆ ಹಿಂದೆ ಬಜೆಟ್ ಮಂಡನೆ ಯಾವಾಗ ಇರುತ್ತಿತ್ತು?

2017ಕ್ಕೆ ಮುನ್ನ ಬಜೆಟ್ ಅನ್ನು ಫೆಬ್ರುವರಿ ತಿಂಗಳ ಕೊನೆಯ ಕಾರ್ಯ ದಿನದಂದು (ಲಾಸ್ಟ್ ವರ್ಕಿಂಗ್ ಡೇ) ನಡೆಸಲಾಗುತ್ತಿತ್ತು. ಇದು ಬ್ರಿಟಿಷರ ಆಳ್ವಿಕೆ ಕಾಲದಿಂದಲೂ ನಡೆಸಿಕೊಂಡು ಬರಲಾಗಿದ್ದ ಪದ್ಧತಿ.

ಇದನ್ನೂ ಓದಿ: ಫೆ. 1ಕ್ಕೆ ಮಧ್ಯಂತರ ಬಜೆಟ್ ಮಂಡನೆ; ಜನವರಿ 31ರಿಂದ ಫೆಬ್ರುವರಿ 9ರವರೆಗೆ ಬಜೆಟ್ ಅಧಿವೇಶನ: ವರದಿ

ಅರುಣ್ ಜೇಟ್ಲಿ ನಿಧನರಾಗುವ ಮುನ್ನ ಹಣಕಾಸು ಸಚಿವರಾಗಿ ಈ ಬ್ರಿಟಿಷ್ ಪರಂಪರೆ ನಿಲ್ಲಿಸಿದರು. ಈ ದಿನ ಬದಲಾವಣೆಗೆ ಅದೊಂದೇ ಕಾರಣವಾಗಿರಲಿಲ್ಲ. ಫೆಬ್ರುವರಿ ಅಂತ್ಯದಲ್ಲಿ ಬಜೆಟ್ ಮಂಡನೆ ಆದಾಗ ಏಪ್ರಿಲ್ 1ರೊಳಗೆ ಹೊಸ ನೀತಿಗಳನ್ನು ಜಾರಿಗೆ ಸಿದ್ಧಪಡಿಸಲು ಅವಶ್ಯ ಸಮಯಾವಕಾಶ ಇರುತ್ತಿರಲಿಲ್ಲ. ಹೀಗಾಗಿ, ಫೆಬ್ರುವರಿ 1ಕ್ಕೆ ಬಜೆಟ್ ಮಂಡನೆ ದಿನವನ್ನು ಬದಲಾಯಿಸಲಾಯಿತು.

ಬಜೆಟ್ ಮಂಡನೆ ಸಮಯ ಸಂಜೆ 5ರ ಬದಲು ಬೆಳಗ್ಗೆ 11ಕ್ಕೆ ಬದಲಾಯಿಸಲು ಏನು ಕಾರಣ?

ಕುತೂಹಲವೆಂದರೆ 1999ಕ್ಕೆ ಹಿಂದಿನವರೆಗೂ ಬಜೆಟ್ ಮಂಡನೆ ಸಂಜೆ 5 ಗಂಟೆಗೆ ಆಗುತ್ತಿತ್ತು. ಈ ಸಂಪ್ರದಾಯವೂ ಬ್ರಿಟಿಷರ ಕಾಲದಿಂದಲೇ ರೂಢಿಗತವಾಗಿತ್ತು. ಬ್ರಿಟಿಷ್ ಆಳ್ವಿಕೆ ವೇಳೆ ಅಲ್ಲಿನ ಸಂಸತ್ತಿನಲ್ಲೇ ಭಾರತದ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಬ್ರಿಟನ್​ನ ಸ್ಥಳೀಯ ಕಾಲಮಾನದಲ್ಲಿ 11 ಗಂಟೆಗೆ ಬಜೆಟ್ ಮಂಡನೆ ಇರುತ್ತಿತ್ತು. ಆಗ ಭಾರತೀಯ ಕಾಲಮಾನದಲ್ಲಿ ಸಂಜೆ 5 ಆಗಿರುತ್ತಿತ್ತು. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದರೂ ಈ ಆಚರಣೆ ನಿಲ್ಲಲಿಲ್ಲ. ಬಜೆಟ್ ಮಂಡನೆ ಸಂಜೆ 5ಕ್ಕೆಯೇ ನಡೆಯುವುದು ಮುಂದುವರಿದಿತ್ತು.

ಇದನ್ನೂ ಓದಿ: ಫೆಬ್ರುವರಿ 1ರ ಬಜೆಟ್: ರಫ್ತು ಸುಂಕ, ರೈಲ್ವೆ, ಕೃಷಿ ವಿಚಾರದಲ್ಲಿ ಸಂಭವನೀಯ ಘೋಷಣೆಗಳೇನು? ಇಲ್ಲಿದೆ ಡೀಟೇಲ್ಸ್

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರವೇ ಈ ಸಂಪ್ರದಾಯವನ್ನೂ ಬದಿಗೆ ಸರಿಸಿತ್ತು. 1999ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಮೊದಲ ಬಾರಿಗೆ ಬಜೆಟ್ ಮಂಡನೆಯನ್ನು ಬೆಳಗ್ಗೆ 11ಕ್ಕೆ ಆರಂಭಿಸಿದರು. ಆ ಬಳಿಕ ಪ್ರತೀ ವರ್ಷವೂ ಬಜೆಟ್ ಮಂಡನೆ ಬೆಳಗ್ಗೆ 11ಕ್ಕೆ ನಡೆಯುತ್ತಾ ಬರುತ್ತಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ