Indian stock market: ಷೇರುಪೇಟೆ ಧಮಾಕಾ; ಮತ್ತೆ 50,000 ಪಾಯಿಂಟ್ ದಾಟಿದ ಸೆನ್ಸೆಕ್ಸ್, 15,000 ಪಾಯಿಂಟ್​ಗೂ ಮೇಲೆ ನಿಫ್ಟಿ

ಕೊರೊನಾ ಎರಡನೇ ಅಲೆಯ ಆತಂಕದ ಮಧ್ಯೆಯೂ ಮೇ 18, 2021ರ ದಿನಾಂತ್ಯದ ವಹಿವಾಟು ಮುಗಿಯುವಾಗ ಸೆನ್ಸೆಕ್ಸ್ 50 ಸಾವಿರ ಮೇಲ್ಪಟ್ಟು ಹಾಗೂ ನಿಫ್ಟಿ 15 ಸಾವಿರ ಮೇಲ್ಪಟ್ಟು ವ್ಯವಹಾರ ಚುಕ್ತಾ ಮಾಡಿವೆ.

Indian stock market: ಷೇರುಪೇಟೆ ಧಮಾಕಾ; ಮತ್ತೆ 50,000 ಪಾಯಿಂಟ್ ದಾಟಿದ ಸೆನ್ಸೆಕ್ಸ್, 15,000 ಪಾಯಿಂಟ್​ಗೂ ಮೇಲೆ ನಿಫ್ಟಿ
ಸಾಂದರ್ಭಿಕ ಚಿತ್ರ


ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮತ್ತೆ ಏರಿಕೆ ಹಾದಿಗೆ ಮರಳಿವೆ. ಅದರಲ್ಲೂ ಬಿಎಸ್​ಇ ಸೆನ್ಸೆಕ್ಸ್​ ಮಂಗಳವಾರದಂದು (ಮೇ 18, 2021) 612.6 ಪಾಯಿಂಟ್ ಮೇಲೇರಿ 50,193.33 ಪಾಯಿಂಟ್​ನಲ್ಲಿ ದಿನಾಂತ್ಯದ ವಹಿವಾಟು ಮುಗಿಸಿದರೆ, ನಿಫ್ಟಿ 50 ಸೂಚ್ಯಂಕವು 184.95 ಪಾಯಿಂಟ್ ಹೆಚ್ಚಳವಾಗಿ 15,108.10 ಪಾಯಿಂಟ್​ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಭಾರತದಲ್ಲಿ ಕೊರೊನಾ ಎರಡನೇ ಅಲೆ ಈ ಪರಿಯಲ್ಲಿ ಭಯ ಹುಟ್ಟಿಸುವಾಗಲೂ ಷೇರು ಮಾರುಕಟ್ಟೆ ಏರಿಕೆ ದಾಖಲಿಸಿದ್ದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಸೋಮವಾರ ಹಾಗೂ ಮಂಗಳವಾರ ಈ ಎರಡು ದಿನದಲ್ಲಿ ಸೆನ್ಸೆಕ್ಸ್ 1400 ಪಾಯಿಂಟ್​ಗಳಿಗೂ ಹೆಚ್ಚಿನ ಏರಿಕೆ ಕಂಡಿದೆ. 2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳು ಕಂಪೆನಿಗಳಿಂದ ಉತ್ತಮವಾಗಿ ಬಂದು, ಅದರ ಬೆಂಬಲವೂ ಸಿಕ್ಕಲ್ಲಿ ಮುಂದಿನ ನಾಲ್ಕರಿಂದ ಆರು ವಾರಗಳ ಕಾಲ ಕೊರೊನಾ ಎರಡನೇ ಅಲೆಯ ಪ್ರಭಾವ ಷೇರು ಮಾರುಕಟ್ಟೆ ಮೇಲೆ ಅಷ್ಟೇನೂ ಪ್ರಭಾವ ಬೀರುವುದಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಕೇಂದ್ರ ಸರ್ಕಾರದಿಂದ ಲಾಕ್​ಡೌನ್ ಬೇಡ ಎಂಬ ನಿರ್ಧಾರ ಕೈಗೊಂಡಿದ್ದು ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಲಸಿಕೆ ಹಾಕಬೇಕು ಎಂಬ ನಿರ್ಧಾರ ಕೈಗೊಂಡಿದ್ದು, ಕೋವಿಡ್ ಸೋಂಕು ಪ್ರಕರಣಗಳಲ್ಲಿನ ಸಂಖ್ಯೆ ಇಳಿಮುಖವಾಗಿದ್ದರಿಂದ ಕೈಗಾರಿಕೆ ಚಟುವಟಿಕೆಗಳಿಗೆ ಸಮಸ್ಯೆ ಆಗುವ ಸಾಧ್ಯತೆಗಳು ಕಡಿಮೆ. ಕಳೆದ ವರ್ಷದ ಆರಂಭದಲ್ಲಿ ಗ್ರಾಮೀಣ ಭಾಗದಲ್ಲಿ ಕೋವಿಡ್ ಬೀರಿದ್ದ ಪ್ರಭಾವಕ್ಕಿಂತ ಈ ಬಾರಿ ತೀವ್ರವಾಗಿದೆ. ಇದರಿಂದಾಗಿ ಅಸಂಘಟಿತ ವಲಯದ ಸಣ್ಣ ಕಂಪೆನಿಗಳಿಗೆ ಭರ್ತಿ ಹೊಡೆತ ನೀಡಿದೆ. ಸಣ್ಣ ಪುಟ್ಟ ಕಂಪೆನಿಗಳ ಸಮಸ್ಯೆಯಿಂದಾಗಿ ದೊಡ್ಡ ಕಂಪೆನಿಗಳು ಅನುಕೂಲದ ಲಾಭ ಪಡೆಯುತ್ತಿವೆ. ಮಾರುಕಟ್ಟೆಯಲ್ಲಿ ದೊಡ್ಡ ಕಂಪೆನಿಗಳ ಪಾಲು ಜಾಸ್ತಿ ಆಗಿದೆ. ಆ ನಂತರ ಷೇರಿನ ಬೆಲೆ ಮತ್ತು ಮಾರುಕಟ್ಟೆ ಮೌಲ್ಯದಲ್ಲಿ ಏರಿಕೆಯಾಗಿ, ಸೆನ್ಸೆಕ್ಸ್ ಮತ್ತು ಇತರ ಪ್ರಮುಖ ಸೂಚ್ಯಂಕಗಳ ಏರಿಕೆಗೆ ಇಂಬು ನೀಡಿದೆ ಎನ್ನುತ್ತಾರೆ ವಿಶ್ಲೇಷಕರು.

2016ರ ನೋಟುನಿಷೇಧದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಬದಲಾವಣೆ ಶುರುವಾಯಿತು. ಆರ್ಥಿಕತೆಯು ವ್ಯವಸ್ಥಿತವಾಗಿ, ಮಾರುಕಟ್ಟೆ ಷೇರು ಸಣ್ಣ ಕಂಪೆನಿಗಳಿಂದ ದೊಡ್ಡದಕ್ಕೆ ಬದಲಾವಣೆ ಆಯಿತು. ಜಿಎಸ್​ಟಿ ಜಾರಿಯ ನಂತರ ಅದು ಮುಂದುವರಿಯಿತು. 15 ತಿಂಗಳ ಕೊರೊನಾ ಬಿಕ್ಕಟ್ಟಿನ ಅವಧಿಯು ಆ ಸ್ಥಿತಿಯನ್ನೂ ಮತ್ತೂ ಮುಂದುವರಿಸಿತು. ಆ ಕಾರಣದಿಂದಲೇ ಕೊರೊನಾ ಸನ್ನಿವೇಶದಲ್ಲಿ ದೊಡ್ಡ ಕಂಪೆನಿಗಳು ಗಟ್ಟಿಯಾಗಿ ನಿಂತುಕೊಂಡವು. ತಂತಮ್ಮ ವಲಯದಲ್ಲಿ ಮಾರುಕಟ್ಟೆ ಪಾಲು ಹಾಗೂ ಉದ್ಯಮವನ್ನು ಬೆಳೆಸಿದವು.

ಮಾರ್ಚ್ ಮತ್ತು ಮೇ ಮೊದಲ ವಾರದ ಮಧ್ಯೆ ಮಾರುಕಟ್ಟೆ ಅಷ್ಟಾಗಿ ಬೀಳದಿರಲು ಕಾರಣ ಏನು?
ಈ ವರ್ಷ ಫೆಬ್ರವರಿ 15ರಂದು ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಎತ್ತರವಾದ 52,154 ಪಾಯಿಂಟ್​ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿತು. ಮಾರ್ಚ್ ನಂತರ ಮೇ ತನಕ ಕೊರೋ ಪ್ರಕರಣಗಳು ಭಾರತದಲ್ಲಿ ಏರುತ್ತಲೇ ಬಂತು. ಮೇ 6ನೇ ತಾರೀಕಿನಂದು ಒಂದೇ ದಿನ 4.1 ಲಕ್ಷ ಪ್ರಕರಣಗಳು ವರದಿಯಾದವು. ಷೇರು ಮಾರ್ಕೆಟ್ ಸ್ವಲ್ಪ ಮಟ್ಟಿಗೆ ದುರ್ಬಲವಾಯಿತೇ ಹೊರತು 2020ರ ಮಾರ್ಚ್- ಏಪ್ರಿಲ್​ನಲ್ಲಿ ಆದಂತೆ ಮಹಾ ಕುಸಿತವನ್ನು ಕಾಣಲಿಲ್ಲ. ಅಂದಹಾಗೆ ಫೆಬ್ರವರಿಯಲ್ಲಿ ಗರಿಷ್ಠ ಮಟ್ಟ ಕಂಡ ಸೆನ್ಸೆಕ್ಸ್, ಏಪ್ರಿಲ್ 20ರಂದು 47,705 ಪಾಯಿಂಟ್​ನೊಂದಿಗೆ 3 ತಿಂಗಳ ಕನಿಷ್ಠ ಮಟ್ಟ ಮುಟ್ಟಿತು.ಈ ಅವಧಿಯಲ್ಲಿ 4450 ಪಾಯಿಂಟ್ಸ್ ಅಥವಾ ಶೇ 8.5ರಷ್ಟು ಇಳಿಕೆ ಕಂಡಿತು. ಇದೀಗ ಮೇ 18ಕ್ಕೆ ಮತ್ತೆ 50 ಸಾವಿರ ಪಾಯಿಂಟ್ ದಾಟಿದೆ.

ಮಾರ್ಚ್​ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ವಿದೇಶಿ ಹೂಡಿಕೆದಾರರು ಏಪ್ರಿಲ್​ನಲ್ಲಿ ನಿವ್ವಳ 9,659 ಕೋಟಿ ರೂಪಾಯಿ ಹಿಂಪಡೆದಿದ್ದಾರೆ. ಮೇ ತಿಂಗಳಲ್ಲಿ ಇಲ್ಲಿಯವರೆಗೆ 8909 ಕೋಟಿ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಎಫ್​ಪಿಐಗಳ ಭಾಗವಹಿಸುವಿಕೆ ದುರ್ಬಲವಾದ ಮೇಲೆ ದೇಶೀ ಸಾಂಸ್ಥಿಕ ಹೂಡಿಕೆದಾರರು ಏಪ್ರಿಲ್​ನಲ್ಲಿ 11,088 ಕೋಟಿ ರೂಪಾಯಿ ನಿವ್ವಳ ಹೂಡಿಕೆ ಮತ್ತು ಮೇ ತಿಂಗಳಲ್ಲಿ ಇಲ್ಲಿಯ ತನಕ ನಿವ್ವಳವಾಗಿ 2839 ಕೋಟಿ ರೂ. ಹೂಡಿದ್ದಾರೆ.

ನಿಫ್ಟಿಯಲ್ಲಿ ಮೇ 18ರಂದು ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 5.86
ಬಜಾಜ್ ಆಟೋ ಶೇ 5.25
ಟೈಟನ್ ಕಂಪೆನಿ ಶೇ 4.83
ಬಜಾಜ್ ಫೈನಾನ್ಸ್ ಶೇ 4.76
ಟಾಟಾ ಮೋಟಾರ್ಸ್ ಶೇ 3.53

ನಿಫ್ಟಿಯಲ್ಲಿ ಮೇ 18ರಂದು ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಭಾರ್ತಿ ಏರ್​ಟೆಲ್ ಶೇ -2.42
ಐಟಿಸಿ ಶೇ -1.20
ಕೋಲ್ ಇಂಡಿಯಾ ಶೇ -1.15
ಡಾ.ರೆಡ್ಡೀಸ್ ಲ್ಯಾಬ್ಸ್ ಶೇ -0.66
ಡಿವೀಸ್ ಲ್ಯಾಬ್ಸ್ ಶೇ -0.48

ಇದನ್ನೂ ಓದಿ: Balakrishna Industries: ಈ ಷೇರಿನ ಮೇಲಿನ 10,000 ರೂಪಾಯಿ ಹೂಡಿಕೆ 20 ವರ್ಷದಲ್ಲಿ 3.50 ಕೋಟಿ ರೂಪಾಯಿ

ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

(Indian stock market index sensex ends above 50,000 points and nifty above 15,000 points on May 18, 2021)