Success story: 20 ಹಸುವಿನೊಂದಿಗೆ ಡೇರಿ ಫಾರ್ಮ್ ಆರಂಭಿಸಿದ ಕರ್ನಾಟಕ ಮೂಲದ ಈ ಐಐಟಿ ಎಂಜಿನಿಯರ್ಗೆ ಈಗ 40 ಕೋಟಿಯ ಆದಾಯ
ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸ ಬಿಟ್ಟು, ಅಮೆರಿಕದಿಂದ ಬಂದು ಇವತ್ತಿಗೆ 40 ಕೋಟಿ ರೂಪಾಯಿಯ ಆದಾಯ ಬರುವಂಥ ಕಂಪೆನಿ ಕಟ್ಟಿದ ಕರ್ನಾಟಕ ಮೂಲದ ಕಿಶೋರ್ ಇಂದುಕುರಿ ಯಶೋಗಾಥೆ ಇದು.
“ಎಲ್ಲಾದರೂ ದನ ಕಾಯೋಕೆ ಹೋಗು,” ಅಂದರೆ ಇದು ಬೈಗುಳ ಅಂತ ಅರ್ಥ ಮಾಡಿಕೊಳ್ಳುತ್ತಿದ್ದ ಕಾಲ ಒಂದಿತ್ತು. ಈಗಲೂ ಟ್ರೆಂಡ್ ಅದೇ ಇರಬಹುದು. ಆದರೆ ಈ ಐಐಟಿ ಎಂಜಿನಿಯರ್ ಬಗ್ಗೆ ಓದಿದ ಮೇಲೆ ಈ ಬೈಗುಳವೇ ಅದೆಂಥ ಅಮೋಘವಾದ ಸಲಹೆ ಅನ್ನಿಸದಿದ್ದರೆ ಹೇಳಿ. ತುಂಬ ದೊಡ್ಡ ಓದು, ಆ ಓದಿಗೆ ತಕ್ಕಂತೆ ಆರಂಕಿಯ ಸಂಬಳ, ವಿಲಾಸಿ ಜೀವನ… ಕಷ್ಟವೋ ಸುಖವೋ ಒಂದಿಪ್ಪತ್ತು ವರ್ಷ ಹೆಣಗಿ ಬಿಟ್ಟರೆ ಆ ಮೇಲೆ ನೆಮ್ಮದಿಯಾಗಿರಬಹುದು ಎಂಬುದು ಬಹಳ ಜನರ ಆಲೋಚನೆ. ಆದರೆ “ನನಗೆ ಇಷ್ಟವಾಗಿದ್ದು ಇದು, ಹೀಗೇ ಬದುಕ್ತೀನಿ, ಯಾರು ಏನಾದರೂ ಹೇಳಿಕೊಳ್ಳಲಿ,” ಅಂತ ಸರಳ ಜೀವನ ನಡೆಸಲು ಬಂದ ಎಂಜಿನಿಯರ್ವೊಬ್ಬರು ಎಂಥ ಸಾಧನೆಗೆ ಅಡಿಗಲ್ಲು ಹಾಕಿದ್ದಾರೆ ಗೊತ್ತಾ? ಅವರ ಹೆಸರು ಕಿಶೋರ್ ಇಂದುಕುರಿ. ಅಮೆರಿಕದಲ್ಲಿದ್ದ ಕೆಲಸ ಬಿಟ್ಟು, ಭಾರತಕ್ಕೆ ಬಂದು 20 ಹಸುಗಳನ್ನು ಖರೀದಿಸಿದ ಕಿಶೋರ್ ಇಂದುಕುರಿ ಅವರ ಡೇರಿ 44 ಕೋಟಿ ರೂಪಾಯಿ ಮೌಲ್ಯದ ಕಂಪೆನಿಯಾಗಿ ಬೆಳೆದು ನಿಂತಿದೆ.
ಕಿಶೋರ್ ಐಐಟಿ ಖರಗ್ಪುರ್ ಎಂಜಿನಿಯರ್. ಮೂಲತಃ ಕರ್ನಾಟಕದವರು. ತಮ್ಮ ಮಾಸ್ಟರ್ ಡಿಗ್ರಿ, ಜತೆಗೆ ಪಿಎಚ್.ಡಿ., ಮಾಡುವ ಸಲುವಾಗಿ ಅಮೆರಿಕದ ಮಸಾಚ್ಯುಸೆಟ್ಸ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಆ ನಂತರ ಅಲ್ಲೇ ಅಮೆರಿಕದ ಟೆಕ್ ಕಂಪೆನಿ ಇಂಟೆಲ್ನಲ್ಲಿ ಉದ್ಯೋಗಕ್ಕೆ ಸೇರಿದರು. ಆದರೆ ಕಿಶೋರ್ ಅವರೊಳಗೊಂದು ಆಸೆ ಇದ್ದೇ ಇತ್ತು. ಮತ್ತೆ ತನ್ನೂರಿನ ಕಡೆಗೆ, ತನ್ನ ಬೇರುಗಳ ಕಡೆಗಿನ ಸೆಳೆತ ಅದು. ಆರು ವರ್ಷಗಳ ಕಾಲ ಇಂಟೆಲ್ನಲ್ಲಿ ಕೆಲಸ ಮಾಡಿದ ಅವರು, ಕೊನೆಗೆ ಅಲ್ಲಿಂದ ಕರ್ನಾಟಕಕ್ಕೇ ವಾಪಸ್ ಬಂದರು. ಇಲ್ಲಿಂದ ಹೈದರಾಬಾದ್ಗೆ ತೆರಳಿದರು. ಅಲ್ಲಿ ಅವರಿಗೆ ಸುರಕ್ಷಿತ ಮತ್ತು ಸ್ವಚ್ಛ ಹಾಲಿನ ಆಯ್ಕೆ ಬಹಳ ಕಡಿಮೆ ಇದೆ ಎಂಬುದು ಗಮನಕ್ಕೆ ಬಂತು.
2012ರಲ್ಲಿ 20 ಹಸುಗಳೊಂದಿಗೆ ಇಂದುಕುರಿ ಡೇರಿ ಆರಂಭ ಆ ಕಾರಣಕ್ಕೆ 2012ರಲ್ಲಿ 20 ಹಸುಗಳೊಂದಿಗೆ ಇಂದುಕುರಿ ಡೇರಿ ಆರಂಭಿಸಿದರು. ಹಾಲು ಕರೆದು, ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದಕ್ಕೆ ಆರಂಭಿಸಿದರು. ಅವರು ಮತ್ತು ಅವರ ಕುಟುಂಬ ಮಾಡಿದ ಮೊದಲ ಹೂಡಿಕೆ ಅಂದರೆ ಶೀತಲಗೃಹ ಮತ್ತ ಸಂಗ್ರಹ ವ್ಯವಸ್ಥೆ. ಹಾಲು ವಿತರಣೆಗೆ ಮುಂಚೆ ದೀರ್ಘಾವಧಿಗೆ ಉಳಿಯಬೇಕು ಎಂಬ ಕಾರಣಕ್ಕೆ ಮಾಡಿದಂಥ ಹೂಡಿಕೆ ಅದು. ಅಲ್ಲಿಂದ ಆಚೆಗೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 2018ರ ಹೊತ್ತಿಗೆ ಕಿಶೋರ್ ಅವರ ಡೇರಿ ಫಾರ್ಮ್ಗೆ ಸಿದ್ ಫಾರ್ಮ್ ಅಂತ ಹೆಸರಿಟ್ಟರು. ಅಂದ ಹಾಗೆ ಕಿಶೋರ್ ಅವರ ಮಗನ ಹೆಸರು ಸಿದ್ಧಾರ್ಥ್. ಮಗನ ಹೆಸರನ್ನೇ ಡೇರಿಗೆ ಇಟ್ಟರು. ಹೈದರಾಬಾದ್ ಸುತ್ತಮುತ್ತ 6000 ಗ್ರಾಹಕರಿಗೆ ಹಾಲಿನ ಡೆಲಿವರಿ ಮಾಡಲಾಗುತ್ತಿತ್ತು. ಇವತ್ತಿಗೆ ಸಿದ್ ಫಾರ್ಮ್ ಶಾಬಾದ್ಗೂ ವಿಸ್ತರಣೆ ಆಗಿದೆ. 120 ಸಿಬ್ಬಂದಿ ಇದ್ದಾರೆ. ವಾರ್ಷಿಕ ಆದಾಯ 40 ಕೋಟಿ ರೂಪಾಯಿಗೂ ಹೆಚ್ಚಿದೆ. ಪ್ರತಿ ದಿನ 10,000 ಗ್ರಾಹಕರಿಗೆ ಹಾಲು ವಿತರಿಸಲಾಗುತ್ತದೆ.
ಆರಂಭದ ದಿನಗಳಲ್ಲಿ ಬಹಳ ಕಠಿಣ ಇತ್ತು ಎನ್ನುತ್ತಾರೆ ಕಿಶೋರ್. ಗ್ರಾಹಕರಿಗೆ ತಾಜಾ ಹಾಲು ದೊರೆಯಬೇಕು ಅಂತ ವೈಯಕ್ತಿಕವಾಗಿ ಗಮನ ನೀಡಬೇಕಿತ್ತು. ಎಲ್ಲ ಉಳಿತಾಯದ ಹಣವನ್ನು ಡೇರಿಗಾಗಿಯೇ ಹಾಕಲಾಗಿತ್ತು. ಆರಂಭದ ಹೂಡಿಕೆ ರೂ. 1 ಕೋಟಿ ಮತ್ತು ಆ ನಂತರ ರೂ. 2 ಕೋಟಿ ಹಾಕಲಾಗಿತ್ತು. ಇವತ್ತಿಗೆ ತನ್ನಷ್ಟಕ್ಕೆ ಡೇರಿ ಫಾರ್ಮ್ ಸ್ವಾವಲಂಬಿಯಾಗಿದೆ. ಅದು ಕೂಡ 2018ರಲ್ಲಿ ರೂ. 1.3 ಕೋಟಿ ಸಾಲ ಪಡೆದು, ಡೇರಿ ಕಾರ್ಯಾಚರಣೆಯಲ್ಲಿ ವಿಸ್ತರಣೆ ಆದ ಮೇಲೆ ಈ ಹಂತಕ್ಕೆ ಬಂದಿದೆ.
ನಾನಾ ಉತ್ಪನ್ನಗಳು ಸಿಗುತ್ತಿವೆ ಆರಂಭದಲ್ಲಿ ಹಸು ಮತ್ತು ಎಮ್ಮೆ ಹಾಲಿನೊಂದಿಗೆ ಆರಂಭವಾದ ಸಿದ್ ಫಾರ್ಮ್ ಇವತ್ತು ಉತ್ಪನ್ನಗಳಲ್ಲಿ ವಿಸ್ತರಣೆ ಆಗಿದೆ. ಹಸು ಹಾಗೂ ಎಮ್ಮೆ ಹಾಲು, ಹಸುವಿನ ಹಾಲಿಂದ ತೆಗೆದ ಬೆಣ್ಣೆ, ಸ್ಕಿಮ್ ಹಾಲು, ಹಸುವಿನ ಹಾಲಿನ ತುಪ್ಪ, ಎಮ್ಮೆ ಹಾಲಿನ ತುಪ್ಪ ಮತ್ತು ಬೆಣ್ಣೆ, ಹಸು ಮತ್ತು ಎಮ್ಮೆಯ ಮೊಸರು ಹಾಗೂ ಸಾವಯವ ಪನ್ನೀರ್ ಹೀಗೆ ನಾನಾ ಉತ್ಪನ್ನಗಳಿವೆ. ಡೇರಿ ಫಾರ್ಮ್ನಲ್ಲಿ ಉತ್ಪನ್ನಗಳ ಪ್ರಾಡಕ್ಟ್ಗಳಲ್ಲಿ ಉತ್ತಮ ಗುಣಮಟ್ಟಕ್ಕಾಗಿ ಅತ್ಯುತ್ತಮ ತಂತ್ರಜ್ಞಾನ ಬಳಸಲಾಗಿದೆ. ಯುವ ಪೋಷಕರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ತಂತ್ರಜ್ಞಾನವನ್ನು ತರಲಾಗಿದೆ.
ಕೋವಿಡ್- 19 ಕಾರಣಕ್ಕೆ ಹಾಲಿನ ಉದ್ಯಮಕ್ಕೆ ಸ್ವಲ್ಪ ಮಟ್ಟಿಗೆ ಪೆಟ್ಟು ಬಿದ್ದಿದೆ. ಬಿಕ್ಕಟ್ಟಿನ ಮಧ್ಯೆಯೂ ಹಾಲು ಉತ್ಪಾದನೆಯನ್ನು ನಿಲ್ಲಿಸಿಲ್ಲ. ಇದೀಗ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಹೈದರಾಬಾದ್ ಸಮೀಪದ ಪ್ರದೇಶಗಳಿಗೆ ಮತ್ತು ಬೆಂಗಳೂರಿನಂಥ ನಗರಗಳಿಗೂ ವಿಸ್ತರಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ: 3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ
(IIT Kharagpur alumni Kishore Indukuri success story who build 40 crore rupees dairy farm empire in Hyderabad)
Published On - 12:27 pm, Tue, 18 May 21