ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ (ಆಗಸ್ಟ್ 30, 2021) ದಾಖಲೆ ಪ್ರಮಾಣದ ಎತ್ತರದಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಹೂಡಿಕೆದಾರರ ಸಂಪತ್ತು 3.58 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಬ್ಲ್ಯೂಚಿಪ್ ಷೇರುಗಳಲ್ಲಿ ಭಾರೀ ಪ್ರಮಾಣದ ಬೆಂಬಲ ಕಂಡುಬಂತು. ದಿನದ ಕೊನೆಗೆ ಸೆನ್ಸೆಕ್ಸ್ ಸೂಚ್ಯಂಕವು 765 ಪಾಯಿಂಟ್ಸ್ ಅಥವಾ ಶೇ 1.36ರಷ್ಟು ಏರಿಕೆ ದಾಖಲಿಸಿ, 56,889.76 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ- 50 ಸೂಚ್ಯಂಕವು 226 ಪಾಯಿಂಟ್ಸ್ ಅಥವಾ ಶೇ 1.35ರಷ್ಟು ಹೆಚ್ಚಳವಾಗಿ, 16,931 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾ ಮಾಡಿತು. ಇಂದಿನ ವ್ಯವಹಾರದಲ್ಲಿ 2067 ಕಂಪೆನಿಯ ಷೇರುಗಳು ಮೇಲಕ್ಕೆ ಏರಿದರೆ, 998 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದವು. ಇನ್ನು 149 ಕಂಪೆನಿಯ ಷೇರುಗಳ ದರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.
ವಲಯವಾರು ನೋಡುವುದಾದರೆ, ಮಾಹಿತಿ ತಂತ್ರಜ್ಞಾನವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಏರಿಕೆಯಲ್ಲೇ ಅಂತ್ಯವಾಗಿವೆ. ಲೋಹ, ಫಾರ್ಮಾಸ್ಯುಟಿಕಲ್ಸ್, ಪಿಎಸ್ಯು ಬ್ಯಾಂಕ್ ತಲಾ ಶೇ 2ರಷ್ಟು ಹೆಚ್ಚಳ ಕಂಡಿವೆ. ಇನ್ನು ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 1.5ರಷ್ಟು ಏರಿದವು. ಇದೇ ಮೊದಲ ಬಾರಿಗೆ ಷೇರು ಮಾರುಕಟ್ಟೆಯ ಎರಡೂ ಸೂಚ್ಯಂಕಗಳು ದಿನಾಂತ್ಯಕ್ಕೆ ದಾಖಲೆಯ ಎತ್ತರದಲ್ಲಿ ವ್ಯವಹಾರ ಚುಕ್ತಾ ಮಾಡಿವೆ. ಸೆನ್ಸೆಕ್ಸ್ ಈ ಹಿಂದಿನ ಟ್ರೇಡಿಂಗ್ ಅಂತ್ಯಕ್ಕೆ 56,124.72 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿತ್ತು. ಸೋಮವಾರ ಬೆಳಗ್ಗೆ ಶುರುವಿನಲ್ಲೇ 56,329.25 ಪಾಯಿಂಟ್ಸ್ನೊಂದಿಗೆ ಆರಂಭಿಸಿದ್ದು, ದಿನದ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 56,958.27 ಪಾಯಿಂಟ್ಸ್ ಮುಟ್ಟಿತು.
ಅದೇ ರೀತಿ ನಿಫ್ಟಿ 50 ಸೂಚ್ಯಂಕವು ಈ ಹಿಂದಿನ ಟ್ರೇಡಿಂಗ್ ಸೆಷನ್ನಲ್ಲಿ 16,705.20 ಪಾಯಿಂಟ್ಸ್ನೊಂದಿಗೆ ದಿನಾಂತ್ಯ ಕಂಡಿತ್ತು. ಇಂದಿನ ವಹಿವಾಟನ್ನು 16,775.85 ಪಾಯಿಂಟ್ಸ್ನೊಂದಿಗೆ ಶುರು ಮಾಡಿ, ದಿನದ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 16,951.50 ಪಾಯಿಂಟ್ಸ್ ಮುಟ್ಟಿ ಹೊಸ ದಾಖಲೆಯನ್ನು ಬರೆಯಿತು.
ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಭಾರ್ತಿ ಏರ್ಟೆಲ್ ಶೇ 4.25
ಆಕ್ಸಿಸ್ ಬ್ಯಾಂಕ್ ಶೇ 4.21
ಟಾಟಾ ಸ್ಟೀಲ್ ಶೇ 4.08
ಡಿವೀಸ್ ಲ್ಯಾಬ್ಸ್ ಶೇ 3.94
ಕೋಲ್ ಇಂಡಿಯಾ ಶೇ 3.64
ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟೆಕ್ ಮಹೀಂದ್ರಾ ಶೇ -1.81
ನೆಸ್ಟ್ಲೆ ಶೇ -1.08
ಐಷರ್ ಮೋಟಾರ್ಸ್ ಶೇ -0.86
ಇನ್ಫೋಸಿಸ್ ಶೇ -0.63
ಟಿಸಿಎಸ್ ಶೇ -0.51
ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
(Indian Stock Market Index Sensex And Nifty Ends At New Record High On August 30th 2021)
Published On - 4:46 pm, Mon, 30 August 21