ಮುಂಬೈ, ಜೂನ್ 10: ಮೋದಿ 3.0 ಸರ್ಕಾರದ ಹೊಸ ಸಂಪುಟ ರಚನೆ ಆದ ಬೆನ್ನಲ್ಲೇ ಷೇರು ಮಾರುಕಟ್ಟೆ (stock market) ಹೊಸ ದಾಖಲೆ ಎತ್ತರಕ್ಕೆ ಏರಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ (Nifty50) ಸೇರಿದಂತೆ ಷೇರು ಮಾರುಕಟ್ಟೆ ಪ್ರಮುಖ ಸೂಚ್ಯಂಕಗಳು ಇಂದು ಹೆಚ್ಚಿವೆ. ಬೆಳಗಿನ ಸ್ವಲ್ಪ ಹೊತ್ತಿನಲ್ಲಿ ಸೆನ್ಸೆಕ್ಸ್ 77,000 ಅಂಕಗಳ ಮಟ್ಟ ತಲುಪಿ ಹೊಸ ದಾಖಲೆ ಬರೆಯಿತು. ನಿಫ್ಟಿ50 ಸೂಚ್ಯಂಕ ಕೂಡ 23,411 ಅಂಕಗಳ ಮಟ್ಟ ಮುಟ್ಟಿತು. ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡವಾದರೂ ದಿನಾಂತ್ಯದ ವೇಳೆಗೆ ಮತ್ತೆ ಎತ್ತರಕ್ಕೆ ಏರುವ ನಿರೀಕ್ಷೆ ಇದೆ.
ನಿಫ್ಟಿ ಮತ್ತು ಸೆನ್ಸೆಕ್ಸ್ ಮೇಲೇರಿ ಕೆಳಗೆ ಇಳಿದರೂ ಬ್ಯಾಂಕ್, ಸ್ಮಾಲ್ಕ್ಯಾಪ್ ಇತ್ಯಾದಿ ವಿವಿಧ ಸೂಚ್ಯಂಕಗಳು ಪಾಸಿಟಿವ್ ಆಗಿವೆ. ಮಿಡ್ಕ್ಯಾಪ್ ಸೂಚ್ಯಂಕಗಳೂ ಕೂಡ ಮೇಲೇರಿವೆ. ಆದರೆ, ದೊಡ್ಡ ಮಾರುಕಟ್ಟೆ ಬಂಡವಾಳದ ಕಂಪನಿಗಳ ಷೇರುಗಳು ಸೋಮವಾರ ಹಿನ್ನಡೆ ಕಂಡಿವೆ.
ಇದನ್ನೂ ಓದಿ: ಈ ವಾರ ಎರಡು ಐಪಿಒ; ಇಕ್ಸಿಗೋ, ಯುನೈಟೆಡ್ ಕಾಟ್ಫ್ಯಾಬ್ ಷೇರು ಬಿಡುಗಡೆ; ದಿನಾಂಕ, ಬೆಲೆ, ಹೂಡಿಕೆ ಮೊತ್ತ ತಿಳಿಯಿರಿ
ಅಮೆರಿಕದಲ್ಲಿ ಕಾರ್ಪೊರೇಟ್ ವಲಯದಲ್ಲಿ ನೇಮಕಾತಿ ಹೆಚ್ಚುತ್ತಿರುವುದು ವರದಿಯಾಗಿದೆ. ಹಾಗೆಯೇ, ಸಂಬಳ ಹೆಚ್ಚಳವೂ ಆಗುತ್ತಿದೆ. ಇದು ಭಾರತ ಸೇರಿದಂತೆ ಏಷ್ಯಾದ ಷೇರು ಮಾರುಕಟ್ಟೆಗಳ ಮೇಲೆ ತುಸು ಪ್ರಭಾವ ಬೀರಿರಬಹುದು ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಅಮೆರಿಕದಲ್ಲಿ ಉದ್ಯೋಗ ವಾತಾವರಣ ಆಶಾದಾಯಕ ವಾಗಿರುವುದರಿಂದ ಅಲ್ಲಿಯ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು ಸದ್ಯಕ್ಕಂತೂ ಇಳಿಸದೇ ಇರಬಹುದು. ಇದು ಹೂಡಿಕೆದಾರರನ್ನು ಗೊಂದಲಕ್ಕೆ ಕೆಡವಿರುವ ಅಂದಾಜಿದೆ.
ಪಿಎಸ್ಯು ಷೇರುಗಳು ಹೆಚ್ಚು ಬೇಡಿಕೆ ಪಡೆದಿವೆ. ಐಟಿ ವಲಯದ ಷೇರುಗಳಿಗೆ ನಷ್ಟವಾಗಿದೆ. ಪವರ್ ಗ್ರಿಡ್, ಎನ್ಟಿಪಿಸಿ, ಎಸ್ಬಿಐ, ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಕ್ಸಿಸ್ ಬ್ಯಾಂಕ್ ಹೆಚ್ಚು ಲಾಭ ಮಾಡಿರುವ ಷೇರುಗಳಾಗಿವೆ. ರಿಲಾಯನ್ಸ್, ಅದಾನಿ ಪೋರ್ಟ್ಸ್, ಐಸಿಐಸಿಐ ಬ್ಯಾಂಕ್ ಸ್ಟಾಕುಗಳೂ ಕೂಡ ಮೇಲೇರಿವೆ.
ಇದನ್ನೂ ಓದಿ: ಚಿಕ್ಕಂದಿನಲ್ಲಿ ಸಹಪಾಠಿಗಳಿಂದ ಅವಹೇಳನಕ್ಕೊಳಗಾಗುತ್ತಿದ್ದ ಹುಡುಗಿ ಇವತ್ತು ಮೈನಿಂಗ್ ಸಾಮ್ರಾಜ್ಯದ ಒಡತಿ
ಟಿಸಿಎಸ್ ಕುಸಿತ ಮುಂದುವರಿದಿದೆ. ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರ, ಟೈಟಾನ್ ಕಂಪನಿ, ಎಲ್ಟಿಐ ಮೈಂಡ್ ಟ್ರೀ ಮೊದಲಾದ ಕಂಪನಿಗಳ ಷೇರುಗಳಿಗೆ ನಷ್ಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ