ನವದೆಹಲಿ, ಫೆಬ್ರುವರಿ 18: ಭಾರತದಲ್ಲಿರುವ ಅತೀ ಮೌಲ್ಯಯುತ ಖಾಸಗಿ ಕಂಪನಿಗಳ ಒಟ್ಟು ಮೌಲ್ಯ 324 ಲಕ್ಷ ಕೋಟಿ ರೂ ಆಗುತ್ತದಂತೆ. ಅಂದರೆ, 3.8 ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿವೆ ಈ 500 ಟಾಪ್ ಕಂಪನಿಗಳು. ಎಕ್ಸಿಸ್ ಬ್ಯಾಂಕ್ನ ಬುರ್ಗುಂಡಿ ಪ್ರೈವೇಟ್ ಮತ್ತು ಹುರುನ್ ಇಂಡಿಯಾ ಜಂಟಿಯಾಗಿ ಮಾಡಿದ ಅಂದಾಜು ಇದು. ಇದು ನಿಜವೇ ಆದಲ್ಲಿ ಭಾರತದ ಜಿಡಿಪಿಗಿಂತ ಅದರ 500 ಖಾಸಗಿ ಕಂಪನಿಗಳ ಮೌಲ್ಯವೇ ಹೆಚ್ಚಿದೆ.
2023ರ ವರ್ಷದಲ್ಲಿ ಭಾರತದ ಜಿಡಿಪಿ 3.4 ಟ್ರಿಲಿಯನ್ ಡಾಲರ್ನಷ್ಟು ಇದೆ. ಈ 500 ಕಂಪನಿಗಳ ಮೌಲ್ಯವು ಈ ಜಿಡಿಪಿಯನ್ನೇ ಮೀರಿಸುತ್ತದೆ. ಅಷ್ಟೇ ಅಲ್ಲ, ಯುಎಇ, ಇಂಡೋನೇಷ್ಯ ಮತ್ತು ಸ್ಪೇನ್ ದೇಶದ ಜಿಡಿಪಿಗಳನ್ನು ಸೇರಿಸಿದರೂ ಈ ಮಟ್ಟಕ್ಕೆ ಬರಲಾಗದು. ಪಾಕಿಸ್ತಾನದ ಜಿಡಿಪಿಗಿಂತ ಹತ್ತು ಪಟ್ಟು ಮೌಲ್ಯ ಭಾರತದ ಬೆರಳೆಣಿಕೆಯ ಖಾಸಗಿ ಕಂಪನಿಗಳಿಗೆ ಇದೆ.
ಇದನ್ನೂ ಓದಿ: Unemployment: ಅಕ್ಟೋಬರ್-ಡಿಸೆಂಬರ್ನಲ್ಲಿ ನಿರುದ್ಯೋಗ ದರ ಶೇ. 6.4ಕ್ಕೆ ಇಳಿಕೆ: ಎನ್ಎಸ್ಎಸ್ಒ ಸಮೀಕ್ಷಾ ವರದಿ
2024ರ ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ಪಟ್ಟಿಯಲ್ಲಿ ಇರುವ ಕಂಪನಿಗಳು ಅಸಾಧಾರಣದ್ದಾಗಿವೆ. 84 ಲಕ್ಷ ಜನರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಆರ್ಥಿಕತೆಯ ಕೀಲಿ ಕೈ ಈ ಟಾಪ್ ಕಂಪನಿಗಳಲ್ಲಿವೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಈ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.
ಮುಕೇಶ್ ಅಂಬಾನಿ ಮಾಲಕತ್ವದ ಆರ್ಐಎಲ್ನ ಮೌಲ್ಯ 17 ಲಕ್ಷ ಕೋಟಿ ರೂಗೂ ಅಧಿಕ ಇದೆ. ಟಿಸಿಎಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಮೌಲ್ಯ 10 ಲಕ್ಷ ಕೋಟಿ ರೂ ಗಡಿ ದಾಟುತ್ತದೆ. ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಮೊದಲಾದ ಕಂಪನಿಗಳು ಟಾಪ್-10ನಲ್ಲಿ ಇವೆ.
ಇದನ್ನೂ ಓದಿ: GDP growth: ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.4ಕ್ಕೆ ಹೆಚ್ಚಬಹುದು: ಐಸಿಆರ್ಎ ನಿರೀಕ್ಷೆ
ಈ ಬುರ್ಗುಂಡಿ ಪ್ರೈವೇಟ್ 500 ಪಟ್ಟಿಯೊಳಗೆ, 2024ರಲ್ಲಿ ಅತಿವೇಗವಾಗಿ ಮೌಲ್ಯ ಹೆಚ್ಚಿಸಿಕೊಂಡ ಕಂಪನಿಗಳಲ್ಲಿ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಮೊದಲು ಬರುತ್ತದೆ. ಹಿಂದಿನ ಪಟ್ಟಿಗೆ ಹೋಲಿಸಿದರೆ ಇದರ ಮೌಲ್ಯ ಶೇ. 297ರಷ್ಟು ಹೆಚ್ಚಾಗಿದೆ. ಐನಾಕ್ಸ್ ವಿಂಡ್, ಮತ್ತು ಜೆಪ್ಟೋ ಕೂಡ ತಮ್ಮ ಮೌಲ್ಯವನ್ನು ಬಹುತೇಕ ಮೂರು ಪಟ್ಟು ಹೆಚ್ಚಿಸಿಕೊಂಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ