ನಿಮ್ಮ ಬ್ಯಾಂಕ್ ಸಾಲದ ಮೇಲೆ ಕ್ರೆಡಿಟ್ ಸ್ಕೋರ್ ಪರಿಣಾಮ ಏನು? ಎಷ್ಟು ಸ್ಕೋರ್ ಇದ್ದರೆ ಉತ್ತಮ?
Credit Score impact on personal loan interest rate: ಬ್ಯಾಂಕುಗಳು ಪರ್ಸನಲ್ ಲೋನ್ ನೀಡುವಾಗ ಗಮನಿಸುವ ಪ್ರಮುಖ ಅಂಶಗಳಲ್ಲಿ ಕ್ರೆಡಿಟ್ ಸ್ಕೋರ್ ಒಂದು. ಕ್ರೆಡಿಟ್ ಸ್ಕೋರ್ 600ಕ್ಕಿಂತ ಕಡಿಮೆ ಇದ್ದರೆ ಸಾಲ ಸಿಗುವುದು ಬಹಳ ಕಷ್ಟ. ಸಿಕ್ಕರೂ ಗರಿಷ್ಠ ಬಡ್ಡಿದರ ವಿಧಿಸಲಾಗುತ್ತದೆ. 720ಕ್ಕಿಂತ ಹೆಚ್ಚು ಅಂಕಗಳ ಕ್ರೆಡಿಟ್ ಸ್ಕೋರ್ ಇದ್ದರೆ ನಿಮಗೆ ಸಾಲ ಕೊಡಲು ಬ್ಯಾಂಕುಗಳು ಕಾತರಿಸುತ್ತಿರುತ್ತವೆ.

ಬ್ಯಾಂಕುಗಳು ಸಾಲ ನೀಡುವಾಗ ಕೆಲ ನಿಗದಿತ ಮಾನದಂಡಗಳನ್ನು ಅನುಸರಿಸುತ್ತವೆ. ಸಾಲ ವಾಪಸಾತಿ ಆಗುತ್ತದೆ ಎನ್ನುವ ಖಾತ್ರಿ ಇದ್ದರೆ, ಮತ್ತು ಸಾಲ ವಾಪಸ್ ಬರದಿದ್ದರೆ ಹರಾಜು ಹಾಕಲು ಆಸ್ತಿಯ ಅಡಮಾನ ಇದ್ದರೆ, ಅಂಥವನ್ನು ಬ್ಯಾಂಕುಗಳು ಸುರಕ್ಷಿತ ಸಾಲ ಎಂದು ಪರಿಗಣಿಸುತ್ತವೆ. ಇವುಗಳಿಗೆ ಕಡಿಮೆ ಬಡ್ಡಿದರ ಇರುತ್ತದೆ. ಆದರೆ, ಪರ್ಸನಲ್ ಲೋನ್ಗಳು ಬಹಳ ರಿಸ್ಕಿಯಾಗಿರುತ್ತವೆ. ಇದರಲ್ಲಿ ಗ್ರಾಹಕರಿಂದ ಅಡಮಾನ ಪಡೆಯಲಾಗುವುದಿಲ್ಲ. ಸಾಲ ವಾಪಸ್ಸಾಗಬಹುದು ಎನ್ನುವ ಭರವಸೆ ಮತ್ತು ನಂಬಿಕೆಯ ಮೇಲೆ ಬ್ಯಾಂಕು ವೈಯಕ್ತಿಕ ಸಾಲ ನೀಡುತ್ತದೆ. ಈ ವಿಶ್ವಾಸಕ್ಕೆ ಕ್ರೆಡಿಟ್ ಸ್ಕೋರ್ ಒಂದು ಅಳತೆಗೋಲಾಗಿರುತ್ತದೆ.
ಗ್ರಾಹಕರ ಪರ್ಸನಲ್ ಲೋನ್ ಮೇಲೆ ಅವರ ಕ್ರೆಡಿಟ್ ಸ್ಕೋರ್ ಪ್ರಭಾವ ಇರುತ್ತದೆ. ಕ್ರೆಡಿಟ್ ಸ್ಕೋರ್ ಎಂದರೆ ಒಬ್ಬ ಗ್ರಾಹಕರ ಹಿಂದಿನ ಎಲ್ಲಾ ಸಾಲಗಳ ವಿವರದ ಆಧಾರದ ಮೇಲೆ ನೀಡಲಾಗುವ ಅಂಕ. ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸರಿಯಾಗಿ ಕಟ್ಟಲಾಗಿದೆಯಾ, ಹಿಂದಿನ ಲೋನ್ಗಳ ಇಎಂಐ ಅನ್ನು ಸರಿಯಾಗಿ ಕಟ್ಟಲಾಗಿದೆಯಾ ಎಂಬುದೆಲ್ಲವೂ ದಾಖಲಾಗಿರುತ್ತದೆ. ಎಲ್ಲವನ್ನೂ ನೀವು ಅತ್ಯುತ್ತಮವಾಗಿ ನಿಭಾಯಿಸಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಗರಿಷ್ಠವಾಗಿರುತ್ತದೆ.
ಇದನ್ನೂ ಓದಿ: ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿಗೆ ಇನ್ಷೂರೆನ್ಸ್ ಗ್ಯಾರಂಟಿ; 5 ಲಕ್ಷ ರೂ ಮಿತಿ ಹೆಚ್ಚಿಸಲು ಕೇಂದ್ರ ಯೋಜನೆ
ಕ್ರೆಡಿಟ್ ಸ್ಕೋರ್ ಅನ್ನು 300ರಿಂದ 800 ಅಂಕಗಳ ಶ್ರೇಣಿಯಲ್ಲಿ ನೀಡಲಾಗುತ್ತದೆ. ಕೆಲ ಏಜೆನ್ಸಿಗಳು 300ರಿಂದ 900 ಅಂಕಗಳ ಶ್ರೇಣಿಯಲ್ಲಿ ಸ್ಕೋರ್ ನೀಡುತ್ತವೆ. ನಿಮ್ಮ ಸಾಲ ನಿರ್ವಹಣೆ ಅತ್ಯುತ್ತಮವಾಗಿದ್ದರೆ 750ಕ್ಕಿಂತ ಹೆಚ್ಚು ಅಂಕಗಳನ್ನು ನೀಡಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟುವುದು ಒಮ್ಮೆ ತಪ್ಪಿಸಿಕೊಂಡರೂ ನಿಮ್ಮ ಸ್ಕೋರ್ ಕಡಿಮೆ ಆಗುತ್ತದೆ. ಸಾಲದ ಇಎಂಐ ಸರಿಯಾಗಿ ಕಟ್ಟದಿದ್ದರೂ ಸ್ಕೋರ್ ಕುಂಠಿತಗೊಳ್ಳುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ 600ಕ್ಕಿಂತ ಕಡಿಮೆ ಅಂಕಗಳಿದ್ದರೆ ಅದು ಕಳಪೆ ಸ್ಕೋರ್ ಎನಿಸುತ್ತದೆ. ನಿಮಗೆ ಪರ್ಸನಲ್ ಲೋನ್ ಸಿಗುವುದು ಕಷ್ಟ. ಒಂದು ವೇಳೆ ಸಾಲ ಸಿಕ್ಕರೂ ಅದಕ್ಕೆ ಬಡ್ಡಿದರ ಹೆಚ್ಚೇ ಇರುತ್ತದೆ. ಶೇ. 14ರ ಬಡ್ಡಿಗೆ ಸಿಗುವ ಸಾಲಕ್ಕೆ ಶೇ. 18ರಿಂದ 24ರಷ್ಟು ಬಡ್ಡಿ ವಿಧಿಸಬಹುದು.
ಕ್ರೆಡಿಟ್ ಸ್ಕೋರ್ 650ರಿಂದ 720 ಅಂಕಗಳ ಮಧ್ಯೆ ಇದ್ದರೆ ಅದು ಉತ್ತಮ ಸ್ಕೋರ್. ನಿಮಗೆ ಸಾಲ ತಿರಸ್ಕರಿಸುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ರೆಗ್ಯುಲರ್ ಬಡ್ಡಿದರ ಪ್ರಕಾರ ನಿಮಗೆ ಸಾಲ ಕೊಡಲಾಗುತ್ತದೆ.
ಇದನ್ನೂ ಓದಿ: ಎನ್ಪಿಎಸ್ ವಾತ್ಸಲ್ಯ; ಮಕ್ಕಳ ಹಣಕಾಸು ಭದ್ರತೆಗೆ ಒಳ್ಳೆಯ ಸ್ಕೀಮ್; ಈ ಯೋಜನೆಯ ವಿವರ
ನಿಮ್ಮ ಕ್ರೆಡಿಟ್ ಸ್ಕೋರ್ 720 ಅಂಕಗಳಿಗೂ ಹೆಚ್ಚಿದ್ದರೆ ಆಗ ಬ್ಯಾಂಕುಗಳು ನಿಮಗೆ ಸಾಲ ಕೊಡಲು ಯಾವ ಹಿಂದೇಟೂ ಹಾಕುವುದಿಲ್ಲ. ರೆಗ್ಯುಲರ್ ರೇಟ್ಗಿಂತ ಕಡಿಮೆ ಬಡ್ಡಿಗೆ ನಿಮಗೆ ಸಾಲ ಸಿಗುವ ಅವಕಾಶ ಹೆಚ್ಚಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ