ಎನ್ಪಿಎಸ್ ವಾತ್ಸಲ್ಯ; ಮಕ್ಕಳ ಹಣಕಾಸು ಭದ್ರತೆಗೆ ಒಳ್ಳೆಯ ಸ್ಕೀಮ್; ಈ ಯೋಜನೆಯ ವಿವರ
NPS Vatsalya scheme: ಮಕ್ಕಳಿಗೆಂದು ಇರುವ ಸ್ಕೀಮ್ಗಳಲ್ಲಿ ಎನ್ಪಿಎಸ್ ವಾತ್ಸಲ್ಯ ಒಂದು. 18 ವರ್ಷ ವಯಸ್ಸಿನೊಳಗಿನ ಯಾವುದೇ ಮಗುವಿನ ಹೆಸರಿನಲ್ಲಿ ಈ ಯೋಜನೆ ಆರಂಭಿಸಬಹುದು. ಮಗುವಿನ ವಯಸ್ಸು 18 ವರ್ಷ ಆಗುವವರೆಗೂ ಪೋಷಕರಿಂದಲೇ ಖಾತೆ ನಿರ್ವಹಣೆ ಆಗುತ್ತದೆ. ತಿಂಗಳಿಗೆ ಕನಿಷ್ಠ ಹೂಡಿಕೆ ಒಂದು ಸಾವಿರ ರೂ ಇರುತ್ತದೆ. ಗರಿಷ್ಠಕ್ಕೆ ಮಿತಿ ಇಲ್ಲ. 18 ವರ್ಷ ವಯಸ್ಸಿನ ಬಳಿಕ ಸ್ಕೀಮ್ ಮುಂದುವರಿಸುವುದು ಐಚ್ಛಿಕ.

ನ್ಯಾಷನಲ್ ಪೆನ್ಷನ್ ಸಿಸ್ಟಂ (ಎನ್ಪಿಎಸ್) ಈಗೀಗ ಉತ್ತಮ ಜನಪ್ರಿಯತೆ ಪಡೆಯುತ್ತಿದೆ. ನಿವೃತ್ತಿ ಕಾಲಕ್ಕೆ ಹಣಕಾಸು ಭದ್ರತೆ ಪಡೆಯಲು ಈ ಸ್ಕೀಮ್ ನೆರವಾಗುತ್ತದೆ. ಮೊದಲಿಗೆ ಉದ್ಯೋಗಿಗಳಿಗೆ ಇದು ಸೀಮಿತವಾಗಿತ್ತು. ಈಗ ಎಲ್ಲರಿಗೂ ಈ ಯೋಜನೆ ವಿಸ್ತರಣೆ ಆಗಿದೆ. ಎನ್ಪಿಎಸ್ ವಾತ್ಸಲ್ಯ ಎನ್ನುವ ಉಪಸ್ಕೀಮ್ ಅನ್ನೂ ಆರಂಭಿಸಲಾಗಿದೆ. ಎನ್ಪಿಎಸ್ ವಾತ್ಸಲ್ಯ ಎಂಬುದು ಮಕ್ಕಳ ಹಣಕಾಸು ಭದ್ರತೆಗೆ ನೆರವಾಗುವ ಯೋಜನೆ. ಭಾರತೀಯ ಪಿಂಚಣಿ ನಿಧಿ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾದ ಪಿಎಫ್ಆರ್ಡಿಎ ಈ ಯೋಜನೆಯನ್ನು ನಿರ್ವಹಿಸುತ್ತದೆ.
ಎನ್ಪಿಎಸ್ ವಾತ್ಸಲ್ಯ; 18 ವರ್ಷದೊಳಗಿನವರಿಗೆ…
ಎನ್ಪಿಎಸ್ ವಾತ್ಸಲ್ಯ ಸ್ಕೀಮ್ ಅನ್ನು 18 ವರ್ಷ ವಯೋಮಾನದ ಕೆಳಗಿನ ಯಾವುದೇ ವಯಸ್ಸಿನ ಮಗುವಿನ ಹೆಸರಿನಲ್ಲಿ ಪೋಷಕರು ಆರಂಭಿಸಬಹುದು. ತಿಂಗಳಿಗೆ ಕನಿಷ್ಠ ಹೂಡಿಕೆ 1,000 ರೂ ಇದೆ. ಗರಿಷ್ಠ ಎಷ್ಟು ಬೇಕಾದರೂ ಪಾವತಿಸಬಹುದು.
ಎನ್ಪಿಎಸ್ ವಾತ್ಸಲ್ಯ ಸ್ಕೀಮ್ನಲ್ಲಿ ಮಗುವಿನ ಹೆಸರಿನಲ್ಲಿ ಕಾರ್ಡ್ ನೀಡಲಾಗುತ್ತದೆ. ಪೋಷಕರು ಈ ಖಾತೆಯನ್ನು ನಿರ್ವಹಿಸಬಹುದು. ಮಗುವಿನ ವಯಸ್ಸು 18 ವರ್ಷ ಆಗುವವರೆಗೂ ಪೋಷಕರು ಹಣ ಪಾವತಿಸಬಹುದು. ಆ ಬಳಿಕ ಸ್ಕೀಮ್ ಮುಂದುವರಿಸಬಹುದು ಅಥವಾ ನಿಲ್ಲಿಸಬಹುದು. ಈ ಎರಡು ಆಯ್ಕೆಗಳಿರುತ್ತವೆ.
ಸ್ಕೀಮ್ ನಿಲ್ಲಿಸುವುದಾದರೆ ನಿಧಿಯಲ್ಲಿರುವ ಶೇ. 80ರಷ್ಟು ಹಣವನ್ನು ಯಾವುದಾದರೂ ಆ್ಯನುಟಿ ಸ್ಕೀಮ್ ಖರೀದಿಸಲು ಬಳಸಬೇಕು. ಉಳಿದ ಹಣವನ್ನು ಲಂಪ್ಸಮ್ ಆಗಿ ಹಿಂಪಡೆಯಬಹುದು. ನಿಧಿಯಲ್ಲಿ ಎರಡೂವರೆ ಲಕ್ಷ ರೂಗಿಂತ ಕಡಿಮೆ ಹಣ ಇದ್ದಲ್ಲಿ ಅಷ್ಟನ್ನೂ ಹಿಂಪಡೆಯುವ ಅವಕಾಶ ಇರುತ್ತದೆ.
ಇದನ್ನೂ ಓದಿ: Tax Savings Options: ಹೊಸ ಟ್ಯಾಕ್ಸ್ ರಿಜೈಮ್ನಲ್ಲಿ ಏನೇನೆಲ್ಲಾ ತೆರಿಗೆ ಉಳಿತಾಯದ ಅವಕಾಶಗಳಿವೆ? ಇಲ್ಲಿದೆ ಡೀಟೇಲ್ಸ್
ಒಂದು ವೇಳೆ ಮಗುವಿನ ವಯಸ್ಸು 18 ವರ್ಷ ಆದ ಬಳಿಕ ಸ್ಕೀಮ್ ಅನ್ನು ಮುಂದುವರಿಸಬೇಕೆಂದು ನಿರ್ಧರಿಸಿದರೆ ಮಗುವಿನ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು. ವಯಸ್ಸು 18 ವರ್ಷ ದಾಟಿ ಮೂರು ತಿಂಗಳೊಳಗೆ ಈ ಕೆಲಸ ಆಗಬೇಕು. ಆಗ ಎನ್ಪಿಎಸ್ ವಾತ್ಸಲ್ಯ ಅಕೌಂಟ್ ರೆಗ್ಯುಲರ್ ಅಕೌಂಟ್ ಆಗಿ ಬದಲಾಗುತ್ತದೆ. ನಂತರ ಆ ಮಗು ಈ ಅಕೌಂಟ್ ಅನ್ನು 60 ವರ್ಷ ವಯಸ್ಸಿನವರೆಗೂ ನಿರ್ವಹಿಸಿಕೊಂಡು ಹೋಗಬಹುದು.
ಎನ್ಪಿಎಸ್ ವಾತ್ಸಲ್ಯ ಸ್ಕೀಮ್ ಆರಂಭಿಸಲು ಈ ಮುಂದಿನ ಲಿಂಕ್ ಸಂಪರ್ಕಿಸಬಹುದು: npstrust.org.in/open-nps-vatsalya
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ