ಕೃಷಿ ಉತ್ಪಾದನೆ ಭರ್ಜರಿ ಹೆಚ್ಚಳ; ಹಣ್ಣುಗಳ ರಾಜನನ್ನು ಮೀರಿಸಿದ ಬಾಳೆ; ತರಕಾರಿಯಲ್ಲಿ ಆಲೂ ನಂ. 1
Ministry of Statistics and Programme Implementation report on India's Agriculture output: ಭಾರತದಲ್ಲಿ ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿನ ಒಟ್ಟು ಕೃಷಿ ಉತ್ಪಾದನೆ (ಜಿವಿಒ) ಕಳೆದ 12 ವರ್ಷದಲ್ಲಿ ಶೇ. 55ರಷ್ಟು ಹೆಚ್ಚಾಗಿದೆ. ಒಟ್ಟು ಕೃಷಿ ಮೌಲ್ಯ ವರ್ಧನೆ ಅಥವಾ ಜಿವಿಎ ಮೂರು ಪಟ್ಟು ಹೆಚ್ಚಾಗಿದೆ. 2023-24ರಲ್ಲಿ ಬೆಳೆಯಲಾದ ಹಣ್ಣುಗಳ ಪೈಕಿ ಮಾವನ್ನು ಬಾಳೆ ಹಿಂದಿಕ್ಕಿದೆ. ಆಲೂಗಡ್ಡೆ ಅತಿಹೆಚ್ಚು ಬೆಳೆಯುವ ತರಕಾರಿಯಾಗಿದೆ.

ನವದೆಹಲಿ, ಜೂನ್ 30: ಭಾರತದ ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿನ (Agriculture and Allied sectors) ಒಟ್ಟು ಕೃಷಿ ಉತ್ಪಾದನೆಯ ಮೌಲ್ಯ ವರ್ಧನೆ ಅಥವಾ ಜಿವಿಎ (GVA- Gross Value Added) ಕಳೆದ 12 ವರ್ಷದಲ್ಲಿ ಕನಿಷ್ಠ ಮೂರು ಪಟ್ಟು ಹೆಚ್ಚಾಗಿರುವುದು ತಿಳಿದುಬಂದಿದೆ. ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಇಂದು ಸೋಮವಾರ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, 2011-12ರಲ್ಲಿ ಕೃಷಿ ಜಿವಿಎ 15 ಲಕ್ಷ ಕೋಟಿ ರೂ ಇತ್ತು. 2023-24ರ ವರ್ಷದಲ್ಲಿ ಇದು 48 ಲಕ್ಷ ಕೋಟಿ ರೂ ಆಗಿದೆ.
ಕೃಷಿ ಮತ್ತು ಮಾರುಕಟ್ಟೆ ವಲಯದಲ್ಲಿ ಸರ್ಕಾರ ತಂದಿರುವ ಸುಧಾರಣೆ ಹಾಗು ಅಧಿಕಗೊಂಡಿರುವ ಕೃಷಿ ಉತ್ಪನ್ನಶೀಲತೆ ಈ ಮೊದಲಾದ ಅಂಶಗಳು ಕೃಷಿ ಉತ್ಪಾದನೆ ಒಟ್ಟು ಮೌಲ್ಯ ವರ್ಧನೆಯ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.
ಇದು ಕೃಷಿ ಜಿವಿಎ ಆದರೆ, ಕೃಷಿ ಉತ್ಪಾದನೆ ಅಥವಾ ಜಿವಿಓ (GVO – Gross Value Output) ಈ 12 ವರ್ಷದಲ್ಲಿ ಶೇ. 55ರಷ್ಟು ಹೆಚ್ಚಾಗಿದೆ. 2011-12ರಲ್ಲಿ 19.08 ಲಕ್ಷ ಕೋಟಿ ರೂ ಜಿವಿಒ ಹೊಂದಿದ್ದ ಕೃಷಿ ವಲಯ, 2023-24ರಲ್ಲಿ 29.49 ಲಕ್ಷ ಕೋಟಿ ರೂ ಆಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: Adani Green: ಭಾರತದ ಇತಿಹಾಸದಲ್ಲೇ ಅತಿಹೆಚ್ಚು ನವೀಕರಣ ಇಂಧನ ಉತ್ಪಾದನೆ: ಅದಾನಿ ಕಂಪನಿ ದಾಖಲೆ
ಜಿವಿಎ ಮತ್ತು ಜಿವಿಒ ಮಧ್ಯೆ ಏನು ವ್ಯತ್ಯಾಸ?
ಜಿವಿಒ ಎಂದರೆ ಗ್ರಾಸ್ ವ್ಯಾಲ್ಯೂ ಔಟ್ಪುಟ್. ಕೃಷಿ ಜಿವಿಒ ಎಂಬುದು ಕೃಷಿ ಹಾಗು ಸಂಬಂಧಿಕ ಕ್ಷೇತ್ರಗಳ ಸಮಗ್ರ ಉತ್ಪನ್ನಗಳ ಮೌಲ್ಯವಾಗಿದೆ.
ಇನ್ನು, ಜಿವಿಎ ಎಂಬುದು ವೆಚ್ಚಗಳ ನಂತರ ಉಳಿಯುವ ಉತ್ಪನ್ನ ಮೌಲ್ಯ. ಅಂದರೆ, ರೈತನೊಬ್ಬ ಒಂದು ಎಕರೆ ಪ್ರದೇಶದಲ್ಲಿ ಹಣ್ಣು, ತರಕಾರಿಗಳನ್ನು ಬೆಳೆದು ಕಟಾವು ಮಾಡಿ ಮಾರಿ 5 ಲಕ್ಷ ರೂ ಗಳಿಸುತ್ತಾನೆ. ಆದರೆ, ಅದನ್ನು ಬೆಳೆಯಲು ಗೊಬ್ಬರ, ಕೂಲಿ, ಸಾಗಣೆ ಇತ್ಯಾದಿ ವೆಚ್ಚಗಳನ್ನು ಕಳೆದು ಉಳಿಯುವ ಹಣವನ್ನು ಜಿವಿಎ ಎನ್ನಬಹುದು.
ಪಿಎಂ ಕಿಸಾನ್ ಯೋಜನೆ, ಬೆಳೆ ವಿಮೆ ಇತ್ಯಾದಿ ಸರ್ಕಾರಿ ಯೋಜನೆಗಳು ರೈತರಿಗೆ ಸಹಾಯಕವಾಗಿವೆ. ಹಾಗೆಯೇ, ಉತ್ತಮ ಮಳೆ, ನೀರಾವರಿ ವ್ಯವಸ್ಥೆಯೂ ಉತ್ತಮ ಇಳುವರಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕೃಷಿ ಉತ್ಪನ್ನಗಳಲ್ಲಿ ಬೆಳೆಗಳೇ ಅಧಿಕ
ದೇಶದ ಒಟ್ಟು ಕೃಷಿ ಉತ್ಪನ್ನಗಳಲ್ಲಿ ಬೆಳೆ ಉತ್ಪಾದನೆ ಶೇ. 54ರಷ್ಟಿದೆ. ಈ ಬೆಳೆಗಳ ಪೈಕಿ ಬೇಳೆ ಕಾಳು, ಹಣ್ಣು ಮತ್ತು ತರಕಾರಿಗಳ ಪಾಲು ಅರ್ಧದಷ್ಟಿದೆ. ಇನ್ನು ಬೇಳೆ ಕಾಳುಗಳ ಪೈಕಿ ಭತ್ತ ಹಾಗೂ ಗೋಧಿಯೇ ಶೇ. 85ರಷ್ಟಿದೆ.
ಇದನ್ನೂ ಓದಿ: ಫ್ಯಾಷನ್ ಶೋನಲ್ಲಿ ಮಾಡಲ್ಸ್ ಧರಿಸಿದ್ದು ಕೊಲ್ಹಾಪುರಿ ಚಪ್ಪಲಿ: ಸತ್ಯ ಒಪ್ಪಿಕೊಂಡ ಫ್ರಾನ್ಸ್ನ ಪ್ರಾದ ಕಂಪನಿ
ಹಣ್ಣುಗಳ ರಾಜನನ್ನು ಹಿಂದಿಕ್ಕಿದ ಬಾಳೆ
ಭಾರತದಲ್ಲಿ ಮಾವನ್ನು ಹಣ್ಣುಗಳ ರಾಜ ಎನ್ನುತ್ತಾರೆ. ಇದನ್ನು ಅತ್ಯಧಿಕ ಬೆಳೆಯಲಾಗುತ್ತಿತ್ತು. ಆದರೆ, 2023-24ರಲ್ಲಿ ಆಗಿರುವ ಉತ್ಪಾದನೆಯನ್ನು ಗಣನೆಗೆ ತೆಗೆದುಕೊಂಡರೆ ಮಾವಿನ ಹಣ್ಣಿಗಿಂತ ಬಾಳೆ ಹಣ್ಣು ಹೆಚ್ಚು ಮೌಲ್ಯ ತಂದುಕೊಟ್ಟಿದೆಯಂತೆ. ಬಾಳೆ ಹಣ್ಣಿನ ಜಿವಿಒ ಅಥವಾ ಉತ್ಪನ್ನ ಮೌಲ್ಯ 47,000 ಕೋಟಿ ರೂ ಇದೆ. ಮಾವಿನ ಹಣ್ಣಿನ ಜಿವಿಒ 46,100 ಕೋಟಿ ರೂ ಇದೆ.
ಇನ್ನು, ತರಕಾರಿಗಳ ಪೈಕಿ ನಂಬರ್ ಒನ್ ಜಿವಿಒ ಎಂದರೆ ಆಲೂಗಡ್ಡೆ.
ಉತ್ತರಪ್ರದೇಶದಲ್ಲಿ ಅತಿಹೆಚ್ಚು ಕೃಷಿ ಉತ್ಪಾದನೆ
ದೇಶದ ಒಟ್ಟು ಕೃಷಿ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದೆ. ದೇಶದ ಶೇ 17 ಕೃಷಿ ಜಿವಿಒ ಉತ್ತರಪ್ರದೇಶದ ಕೊಡುಗೆಯಾಗಿದೆ. ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ಮತ್ತು ಹರ್ಯಾಣ ರಾಜ್ಯಗಳು ಟಾಪ್-5ನಲ್ಲಿದ್ದು, ಈ ಪಂಚರಾಜ್ಯಗಳು ದೇಶದ 53 ಕೃಷಿ ಉತ್ಪನ್ನಗಳನ್ನು ತಂದುಕೊಟ್ಟಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




