Rakesh Jhunjhunwala: ಹೊಸ ತಲೆಮಾರಿನ ಐಪಿಒಗಳ ಬಗ್ಗೆ ಬಿಗ್​ ಬುಲ್ ರಾಕೇಶ್​ ಜುಂಜುನ್​ವಾಲಾ ಹೇಳೋದೇನು?

ಹೊಸ ತಲೆಮಾರಿನ ಕಂಪೆನಿಗಳ ಐಪಿಒ ಬಗ್ಗೆ ಭಾರತದ ವಾರೆನ್ ಬಫೆಟ್ ಎನಿಸಿಕೊಂಡಿರುವ ರಾಕೇಶ್ ಜುಂಜುನ್​ವಾಲಾ ಅವರು ಮಾತನಾಡಿದ್ದಾರೆ.

Rakesh Jhunjhunwala: ಹೊಸ ತಲೆಮಾರಿನ ಐಪಿಒಗಳ ಬಗ್ಗೆ ಬಿಗ್​ ಬುಲ್ ರಾಕೇಶ್​ ಜುಂಜುನ್​ವಾಲಾ ಹೇಳೋದೇನು?
ರಾಕೇಶ್ ಜುಂಜುನ್​ವಾಲಾ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Jul 17, 2021 | 7:47 PM

ಅನುಭವಿ- ಹಿರಿಯ ಈಕ್ವಿಟಿ ಹೂಡಿಕೆದಾರರಾದ ರಾಕೇಶ್ ಜುಂಜುನ್​ವಾಲಾ ಅವರು ಹೊಸ ತಲೆಮಾರಿನ ಐಪಿಒಗಳಿಂದ ಅಷ್ಟೇನೂ ಪ್ರಭಾವಿತರಾಗಿಲ್ಲ. ಅದೇ ವಿಚಾರ ಇಟ್ಟುಕೊಂಡು ಜುಂಜುನ್​ವಾಲಾ ಮಾತನಾಡುವಾಗ ತುಂಬ ಸ್ಪಷ್ಟವಾಗಿ ಈ ಅಂಶ ಗೊತ್ತಾಗುತ್ತದೆ. ಮೋತಿಲಾಲ್ ಓಸ್ವಾಲ್ ಬ್ರೋಕಿಂಗ್​ನ ರಾಮದೇವ್ ಅಗರ್​ವಾಲ್ ಮತ್ತು ನವೀನ್ ಅಗರ್​ವಾಲ್ ಅವರೊಂದಿಗಿನ ಸಂವಾದದಲ್ಲಿ ಜುಂಜುನ್​ವಾಲಾ ಮಾತನಾಡಿ, ಅಂತಹ (ಹೊಸ ತಲೆಮಾರಿನ) ಕಂಪೆನಿಗಳಲ್ಲಿ ಹಣವನ್ನು ಹಾಕುವ ಬದಲು ಲೋಹಗಳು ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ಹೊಸ ತಲೆಮಾರಿನ ಸಂಸ್ಥೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದು ನನ್ನ ಪಾರ್ಟಿಯಲ್ಲ ಮತ್ತು ನಾನು ಅಲ್ಲಿಗೆ ಹೋಗುವುದಿಲ್ಲ. ಝೊಮ್ಯಾಟೋ ಐಪಿಒ ಮೌಲ್ಯಮಾಪನವು ಸುಮಾರು 60,000 ಕೋಟಿ ರೂಪಾಯಿಗಳಲ್ಲಿ ಶೇ 15ರಿಂದ ಶೇ 20 ಮೇಲ್​ಸ್ತರ ಹೊಂದಿರಬಹುದು. ಆದರೆ ಶೇ 60ರಷ್ಟು ಕೆಳಗೆ ಇಳಿಯಬಹುದು. ನನಗೆ ಅಸಮಾಧಾನ ಇರುವುದು ಮೌಲ್ಯಮಾಪನದಲ್ಲಿ,” ಎಂದಿದ್ದಾರೆ.

ಆನ್‌ಲೈನ್ ಆಹಾರ ವಿತರಣೆ ಕಂಪೆನಿ ಝೊಮ್ಯಾಟೋ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಜುಲೈ 16ರಂದು ಬಿಡ್ಡಿಂಗ್ ಪ್ರಕ್ರಿಯೆಯ ಕೊನೆಯ ದಿನದಂದು 38 ಪಟ್ಟಿಗೂ ಹೆಚ್ಚು ಬಾರಿ ಸಬ್​ಸ್ಕ್ರೈಬ್ ಆಗಿದೆ. ಈ ಮಧ್ಯೆ, ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವಾ ಸಂಸ್ಥೆ ಪೇಟಿಎಂ ತನ್ನ ಉದ್ದೇಶಿತ 16,600 ಕೋಟಿ ರೂಪಾಯಿಯ ಐಪಿಒಗೆ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅನ್ನು ಮಾರುಕಟ್ಟೆ ನಿಯಂತ್ರಕ ಸೆಕ್ಯೂರಿಟೀಸ್ ಮತ್ತು ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಜತೆ ಸಲ್ಲಿಸಿದೆ.

ಭಾರತೀಯ ಮಾರುಕಟ್ಟೆಗಳ ಬಗ್ಗೆ ಹೇಳಿದ್ದೇನು? ಒಟ್ಟಾರೆಯಾಗಿ ದೇಶದ ಬಲವಾದ ಮೂಲಭೂತ ಕಾರಣಗಳಿಂದಾಗಿ ದೇಶೀಯ ಷೇರು ಮಾರುಕಟ್ಟೆ ಬಗ್ಗೆ ಜುಂಜುನ್​ವಾಲಾ ಸಕಾರಾತ್ಮಕವಾಗಿದ್ದಾರೆ. ಪ್ರಸ್ತುತ, ಇದು ಎಸ್ಟಾಬ್ಲಿಷ್ಡ್ ಸಾಫ್ಟ್‌ವೇರ್ ರಫ್ತುದಾರರಾಗಿರುವ ದೇಶಕ್ಕೆ ಆರಂಭಿಕ ಹಂತವಾಗಿದೆ. “ಮುಂದಿನ 4-5 ವರ್ಷಗಳಲ್ಲಿ ಸಾಫ್ಟ್‌ವೇರ್ ರಫ್ತು 4ರಿಂದ 5 ಬಿಲಿಯನ್ ಡಾಲರ್ ತಲುಪಲಿದೆ. ಇದಲ್ಲದೆ, ಭಾರತವು ವಿಶ್ವದ ಫಾರ್ಮಸಿ ರಾಜಧಾನಿಯಾಗುವ ಸ್ಥಿತಿಯಲ್ಲಿದೆ,” ಎಂದು ಮೋತಿಲಾಲ್ ಓಸ್ವಾಲ್ ಜಾಗತಿಕ ಪಾಲುದಾರ ಶೃಂಗಸಭೆಯಲ್ಲಿ ಅವರು ಹೇಳಿದ್ದಾರೆ.

ಭಾರತದ ಮೂಲಭೂತ ಅಂಶವು 1991ಕ್ಕೆ ಹೋಲಿಸಿದರೆ ಇಂದು ತುಂಬಾ ಪ್ರಬಲವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿಯಂತಹ ಅನೇಕ ಸುಧಾರಣೆಗಳನ್ನು ದೇಶ ಕಂಡಿದೆ. “ವಿದ್ಯುತ್ ಮಸೂದೆ ಅಂಗೀಕಾರವಾದರೆ ಅದು ಪ್ರಮುಖ ಸುಧಾರಣೆಗಳಲ್ಲಿ ಒಂದಾಗಲಿದೆ. ಭಾರತೀಯ ಆರ್ಥಿಕತೆ ಹಿಂದೆಂದಿಗಿಂತಲೂ ಉತ್ತಮ ಸ್ಥಾನದಲ್ಲಿದೆ. ನಮ್ಮ ಕಾರ್ಪೊರೇಟ್ ವಲಯವೂ ಇದ್ದು, ಅದು ಕನಿಷ್ಠ ಹತೋಟಿ ಹೊಂದಿದೆ. ಸುಧಾರಣೆಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಜಾರಿಗೆ ತರುವಂಥ ಸರ್ಕಾರ ಮತ್ತು ಪ್ರಧಾನ ಮಂತ್ರಿ ನಮ್ಮಲ್ಲಿದ್ದಾರೆ,” ಎಂದು ಜುಂಜುನ್​ವಾಲಾ ಹೇಳಿದ್ದಾರೆ.

ಪಿಎಸ್​ಯು ಹಿಂತೆಗೆತ ಮತ್ತು ಉತ್ತಮ ಮೂಲಸೌಕರ್ಯದಿಂದ ಭಾರತವು ನಿಧಾನವಾಗಿ ಶೇ 10ರಷ್ಟು ಬೆಳವಣಿಗೆಯತ್ತ ಸಾಗುತ್ತಿದೆ ಎಂದು ಖಚಿತಪಡಿಸುತ್ತದೆ. ಇದು ಕನಿಷ್ಠ ಎರಡು ದಶಕಗಳವರೆಗೆ ಉಳಿಯುತ್ತದೆ ಎಂದು ಜುಂಜುನ್​ವಾಲಾ ಹೇಳಿದ್ದಾರೆ. “ಭಾರತದಲ್ಲಿ ಎಲ್ಲವೂ ತಳಮಟ್ಟದಲ್ಲಿದೆ, ಏನೂ ಅಗ್ರಸ್ಥಾನದಲ್ಲಿ ಇಲ್ಲ” ಎಂದು ಜುಂಜುನ್​ವಾಲಾ ಹೇಳಿದ್ದು, ಈಗಿನ ಬುಲ್ ಮಾರುಕಟ್ಟೆ (ಗೂಳಿ ಮಾರ್ಕೆಟ್) ಶೀಘ್ರದಲ್ಲೇ ಕಣ್ಮರೆಯಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. “ನಾವು ಬಹಳ ದೀರ್ಘವಾದ ಬುಲ್ ಮಾರುಕಟ್ಟೆಯಲ್ಲಿದ್ದೇವೆ ಮತ್ತು ಇದು ಬಾಂಬೆಯಿಂದ ಲಂಡನ್‌ಗೆ ಕಾರನ್ನು ಓಡಿಸಿದಂತಿದೆ,” ಎಂದು ಅವರು ಹೇಳಿದ್ದಾರೆ. ಈ ವರ್ಷದ ತೆರಿಗೆ ಸಂಗ್ರಹವು ಸರ್ಕಾರವನ್ನು ಆಶ್ಚರ್ಯಗೊಳಿಸಲಿದೆ ಎಂದು ಭಾರತದ ವಾರೆನ್ ಬಫೆಟ್ ಎಂದೂ ಕರೆಯಲ್ಪಡುವ ಜುಂಜುನ್​ವಾಲಾ ಅಭಿಪ್ರಾಯಪಟ್ಟಿದ್ದಾರೆ.

ಇತರ ವಲಯಗಳು ಕಡಿಮೆ ಬಡ್ಡಿದರಗಳು ಮತ್ತು ಕೈಗೆಟುಕುವ ದರದಿಂದಾಗಿ ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದ ಬಗ್ಗೆ ಜುಂಜುನ್​ವಾಲಾ ಅವರು ಸಕಾರಾತ್ಮಕವಾಗಿದ್ದಾರೆ. ಡೆವಲಪರ್ಸ್​ಗಳು ಇದನ್ನು ಅನುಮೋದಿಸುತ್ತಾರೆ ಎಂದು ಭಾವಿಸುವುದಾಗಿ ಅವರು ಹೇಳಿದ್ದಾರೆ. ಸಾರ್ವಜನಿಕ ವಲಯದ ಉದ್ಯಮಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಅವರು, ಪಿಎಸ್​ಯುಗಳು ಮಾರುಕಟ್ಟೆಯನ್ನು ಮೀರಿಸುತ್ತವೆ ಮತ್ತು ಬಂಡವಾಳ ಹಿಂತೆಗೆತದ ನಂತರ ಬೆಲೆಗಳು ಹೆಚ್ಚಾಗುತ್ತವೆ ಎಂದು ಆಲೋಚಿಸಿದ್ದು, 8ರಿಂದ 10 ವರ್ಷಗಳಲ್ಲಿ ಕಮಾಡಿಟಿಯಲ್ಲಿ ಬುಲ್ ಮಾರುಕಟ್ಟೆ ಕಂಡುಬರಲಿದೆ ಎಂದಿದ್ದಾರೆ.

ಹೂಡಿಕೆದಾರರಿಗೆ ಸಲಹೆ ಹಣಕಾಸು ತಜ್ಞರಿಂದ ಸರಿಯಾದ ಸಲಹೆ ಪಡೆಯಲು ಹೊಸ ಹೂಡಿಕೆದಾರರಿಗೆ ಜುಂಜುನ್​ವಾಲಾ ಹೇಳಿದ್ದು, “ಇದು ನಿಮಗೆ ಶೇ 15ರಿಂದ 20ರಷ್ಟು ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ. ಸರಿಯಾದ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದು ಮತ್ತು ಎಸ್‌ಐಪಿಗಳ ಮೂಲಕ ಹೂಡಿಕೆ ಮಾಡುವುದು ಉತ್ತಮ ರೂಪವಾಗಿದೆ,” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rakesh Jhunjunwala: 5000 ರೂ.ನಿಂದ 34 ಸಾವಿರ ಕೋಟಿಯ ಸಾಮ್ರಾಜ್ಯ ಕಟ್ಟಿದ ರಾಕೇಶ್​ ಜುಂಜುನ್​ವಾಲಾಗೆ ಜುಲೈ 5 ಜನ್ಮದಿನ

(India’s big bull and ace equity investor Rakesh Jhunjhunwala speaks about new age IPO. Here is the details)