ಮೊದಲ ಮೇಡ್ ಇನ್ ಇಂಡಿಯಾ ಎಂಆರ್ಐ ಸ್ಕ್ಯಾನರ್, ಲಿನಿಯರ್ ಆಕ್ಸಲರೇಟರ್; ವೈದ್ಯಕೀಯ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ಭಾರತ
India's First Indigenously made MRI machine: ಭಾರತದಲ್ಲಿ ಮೊದಲ ಬಾರಿಗೆ ಎಂಆರ್ಐ ಹಾಗೂ ಲಿನಿಯರ್ ಆಕ್ಸಲರೇಟರ್ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಇಲಾಖೆ ನಿರ್ವಹಿಸುವ ಆರ್ ಅಂಡ್ ಡಿ ಲ್ಯಾಬೋರೇಟರಿ, ದೆಹಲಿಯ ಏಮ್ಸ್ ಆಸ್ಪತ್ರೆ, ಸಿಡಾಕ್, ದಯಾನಂದ್ ಸಾಗರ್ ಶಿಕ್ಷಣಸಂಸ್ಥೆ ಮೊದಲಾದವು ಸೇರಿ ಈ ಯಂತ್ರಗಳನ್ನು ಅಭಿವೃದ್ಧಿಪಡಿಸಿವೆ.

ನವದೆಹಲಿ, ಮಾರ್ಚ್ 26: ಭಾರತದಲ್ಲಿ ವಿವಿಧ ವಲಯಗಳಲ್ಲಿ ನಡೆಯುತ್ತಿರುವ ಮ್ಯಾನುಫ್ಯಾಕ್ಚರಿಂಗ್ ಕಾರ್ಯಗಳು ಈಗ ವೈದ್ಯಕೀಯ ತಂತ್ರಜ್ಞಾನಕ್ಕೂ ಅಡಿ ಇಟ್ಟಿದೆ. ಸಂಪೂರ್ಣ ದೇಶೀಯವಾಗಿಯೇ ಎಂಆರ್ಐ ಮೆಷೀನ್ ಅನ್ನು ನಿರ್ಮಿಸಲಾಗಿದೆ. ವೈದ್ಯಕೀಯ ತಂತ್ರಜ್ಞಾನ (Medical Technology) ಕ್ಷೇತ್ರದಲ್ಲಿ ಭಾರತಕ್ಕೆ ಇದು ಅಂಬೆಗಾಲಾದರೂ ಮಹತ್ವದ ಹೆಜ್ಜೆ ಎನಿಸಿದೆ. ಈ ಮೊದಲ ಮೇಡ್ ಇನ್ ಇಂಡಿಯಾ ಎಂಆರ್ಐ ಸ್ಕ್ಯಾನಿಂಗ್ ಯಂತ್ರವನ್ನು (MRI scanning machine) ಅಕ್ಟೋಬರ್ ತಿಂಗಳಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಿ, ಬಳಿಕ ಪ್ರಯೋಗಗಳನ್ನು ನಡೆಸಲಾಗುತ್ತದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಇಲಾಖೆ ಅಡಿಯಲ್ಲಿ ಮುಂಬೈನಲ್ಲಿ ಸ್ವಾಯತ್ತ ಆರ್ ಅಂಡ್ ಡಿ ಲ್ಯಾಬೊರೇಟರಿಯಾದ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಅಂಡ್ ರಿಸರ್ಚ್ (SAMEER) ಹಾಗೂ ಏಮ್ಸ್ ಆಸ್ಪತ್ರೆ ಜಂಟಿಯಾಗಿ 1.5 ಟೆಸ್ಲಾ ಎಂಆರ್ಐ ಸ್ಕ್ಯಾನರ್ ಅನ್ನು ಅಭಿವೃದ್ಧಿಪಡಿಸಿದೆ.
ಏನಿದು ಟೆಸ್ಲಾ ಸ್ಕ್ಯಾನರ್?
ಎಂಆರ್ಐ ಎಂದರೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್. ಇದು ಅಯಸ್ಕಾಂತ ಶಕ್ತಿ ಮತ್ತು ರೇಡಿಯೋ ತರಂಗಾರಗಳನ್ನು ಬಳಸಿ ದೇಹದ ಆಂತರಿಕ ರಚನೆಯ ಸೂಕ್ಷ್ಮ ವಿವರಗಳಿರುವ ಚಿತ್ರಗಳನ್ನು ನಿರ್ಮಿಸುತ್ತದೆ. ಈ ಯಂತ್ರದ ಮ್ಯಾಗ್ನೆಟಿಕ್ ಶಕ್ತಿಯನ್ನು ಅಳೆಯಲು ಟೆಸ್ಲಾ ಯುನಿಟ್ ಬಳಸಲಾಗುತ್ತದೆ. ನಿಕೋಲಾ ಟೆಸ್ಲಾ ಎನ್ನುವ ಸರ್ಬಿಯನ್ ವಿಜ್ಞಾನಿಯ ಹೆಸರನ್ನು ಇದಕ್ಕೆ ಇಡಲಾಗಿದೆ.
ಇದನ್ನೂ ಓದಿ: ಅಪಘಾತಗೊಂಡವರಿಗೆ ಸಹಾಯ ಮಾಡಿದರೆ 25,000 ರೂ ಬಹುಮಾನ: ನಿತಿನ್ ಗಡ್ಕರಿ
ಸಾಮಾನ್ಯವಾಗಿ ಎಂಆರ್ಐ ಸ್ಕ್ಯಾನರ್ಗಳು 1.5 ಅಥವಾ 3.0 ಟೆಸ್ಲಾ ಸ್ಕ್ಯಾನರ್ಗಳಾಗಿವೆ. 3.0 ಟೆಸ್ಲಾ ಎಂಆರ್ಐ ಸ್ಕ್ಯಾನರ್ಗಳು ಹೆಚ್ಚು ಶಕ್ತಿಯುತವಾಗಿದ್ದು, ಹೆಚ್ಚಿನ ಸೂಕ್ಷ್ಮ ಕಾರ್ಯಗಳಿಗೆ ಬಳಸಲಾಗುತ್ತದೆ. ಭಾರತದಲ್ಲಿ ಇವುಗಳ ಬೆಲೆ ಸುಮಾರು 2ರಿಂದ 4 ಕೋಟಿ ರೂ ಆಗುತ್ತದೆ.
ಭಾರತಕ್ಕೆ ಅಗತ್ಯವಾದ ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ತೀವ್ರ ನಿಗಾ ಘಟಕಗಳಲ್ಲಿ ಬಳಸುವ ಯಂತ್ರೋಪಕರಣಗಳು, ರೋಬೋಟಿಕ್ಸ್, ಎಂಆರ್ಐ ಇತ್ಯಾದಿ ಪ್ರಮುಖ ಉಪಕರಣಗಳಿಗೆ ವಿದೇಶಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಎಂಆರ್ಐ ಮೆಷೀನ್ಗಳನ್ನು ಅಮೆರಿಕದಿಂದ ಅತಿಹೆಚ್ಚು ತರಿಸಿಕೊಳ್ಳಲಾಗುತ್ತಿದೆ. ಜರ್ಮನಿ, ನೆದರ್ಲ್ಯಾಂಡ್ಸ್ ದೇಶಗಳಿಂದಲೂ ಸಾಕಷ್ಟು ಆಮದು ಮಾಡಿಕೊಳ್ಳಲಾಗುತ್ತದೆ.
ಎಂಆರ್ಐ ಸ್ಕ್ಯಾನ್ ವೆಚ್ಚ ಕಡಿಮೆ ಆಗುವುದಾ?
ಭಾರತದಲ್ಲೇ ಈಗ ಎಂಆರ್ಐ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯಂತ್ರವು ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಹೆಚ್ಚಿದೆ. 1.5 ಟೆಸ್ಲಾ ಎಂಆರ್ಐ ಯಂತ್ರ ಮಾತ್ರವಲ್ಲ, 6 ಎಂಇವಿ ಲಿನಿಯರ್ ಆಕ್ಸಲರೇಟರ್ ಯಂತ್ರವನ್ನೂ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸಿಡ್ಯಾಕ್, ಇಂಟರ್ ಯೂನಿವರ್ಸಿಟಿ ಆಕ್ಸರೇಟರ್ ಸೆಂಟರ್, ದಯಾನಂದ್ ಸಾಗರ್ ಶಿಕ್ಷಣ ಸಂಸ್ಥೆ ಇವುಗಳೂ ಕೂಡ ಎಂಆರ್ಐ ಯಂತ್ರ ಮತ್ತು ಲಿನಿಯರ್ ಆಕ್ಸಲರೇಟರ್ ಅಭಿವೃದ್ಧಿಗೆ ನೆರವಾಗಿವೆ.
ಲಿನಿಯರ್ ಆಕ್ಸಲರೇಟರ್ (LINAC) ಎಂಬುದು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಯಂತ್ರವಾಗಿದೆ. ಇದು ಅಧಿಕ ಶಕ್ತಿಯ ಎಕ್ಸ್ ರೇಯನ್ನು ಬಳಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ