ನವದೆಹಲಿ, ಆಗಸ್ಟ್ 16: ಜಾಗತಿಕ ಉತ್ಪಾದನಾ ವಲಯಕ್ಕೆ ಅಗತ್ಯವಾಗಿರುವ ಖನಿಜಗಳನ್ನು ಹುಡುಕಿ ಹೊರತೆಗೆಯುವ ಕೇಂದ್ರ ಸರ್ಕಾರದ ಮಹಾಯೋಜನೆಯ ಭಾಗವಾಗಿ ಲಿಥಿಯಮ್ ಗಣಿಗಾರಿಕೆ ಆರಂಭವಾಗಿದೆ. ಛತ್ತೀಸ್ಗಡದ ಕೋರ್ಬಾ ಜಿಲ್ಲೆಯಲ್ಲಿ ಲಿಥಿಯಮ್ ಮೈನಿಂಗ್ ಶುರುವಾಗುತ್ತಿರುವುದು ತಿಳಿದುಬಂದಿದೆ. ಬಿಳಿ ಚಿನ್ನ ಎಂದೇ ಕರೆಯಲಾಗುವ ಲಿಥಿಯಮ್ನ ಗಣಿಗಾರಿಕೆ ಭಾರತದಲ್ಲಿ ಆಗುತ್ತಿರುವುದು ಇದೇ ಮೊದಲು. ಕುತೂಹಲ ಎಂದರೆ ಕರ್ನಾಟಕವೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಕಷ್ಟು ಲಿಥಿಯಮ್ ನಿಕ್ಷೇಪಗಳನ್ನು ಪತ್ತೆ ಮಾಡಲಾಗಿದೆ.
ಲಿಥಿಯಮ್ ಅನ್ನು ಬ್ಯಾಟರಿಗಳ ತಯಾರಿಕೆಗೆ ಬಳಸಲಾಗುತ್ತದೆ. ಜಾಗತಿಕವಾಗಿ ಹೆಚ್ಚಿನ ಬ್ಯಾಟರಿಗಳು ಲಿಥಿಯಮ್ ಅಯಾನ್ನಿಂದ ತಯಾರಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನ, ಲ್ಯಾಪ್ಟಾಪ್, ಮೊಬೈಲ್ ಫೋನ್ ಮೊದಲಾದ ಬಹುತೇಕ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಗೆ ಈ ಲಿಥಿಯಮ್ ಅಗತ್ಯ. ಎಲ್ಲಿಲ್ಲದ ಬೇಡಿಕೆ ಲಿಥಿಯಮ್ಗೆ ಇದೆ. ಚಿನ್ನದಷ್ಟೇ ಇದೂ ಕೂಡ ದುರ್ಲಭ. ಅದಕ್ಕೆ ಲಿಥಿಯಮ್ ಅನ್ನು ಬಿಳಿ ಚಿನ್ನ ಎಂದು ಕರೆಯುತ್ತಾರೆ.
ಇದನ್ನೂ ಓದಿ: ಹಿಂದೂಸ್ತಾನ್ ಜಿಂಕ್ ಕಂಪನಿಯ ಷೇರುದಾರರಿಗೆ ಸುಗ್ಗಿ; ಸಿಗಲಿದೆ ಬರೋಬ್ಬರಿ 14,000 ಕೋಟಿ ರೂ ಮೊತ್ತದಷ್ಟು ಲಾಭಾಂಶ
ಭಾರತ ಈಗೀಗ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹೆಚ್ಚಿಸುತ್ತಿದೆ. ಭಾರತ ತನಗೆ ಬೇಕಿರುವ ಲಿಥಿಯಮ್ ಅನ್ನು ಪೂರ್ಣವಾಗಿ ಆಮದು ಮಾಡಿಕೊಳ್ಳುತ್ತಿದೆ. ಚೀನಾದಲ್ಲಿ ಒಂದು ಟನ್ ಲಿಥಿಯಮ್ ಬೆಲೆ 50 ಲಕ್ಷ ರೂಗೂ ಹೆಚ್ಚಿದೆ. ಒಂದು ವರ್ಷದಲ್ಲಿ ಒಂದು ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಲಿಥಿಯಮ್ ಅನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಈಗ ಭಾರತದಲ್ಲೇ ಲಿಥಿಯಮ್ ಅನ್ನು ಹೆಕ್ಕಿ ತೆಗೆಯುತ್ತಿರುವಾಗ ಅದರ ಆಮದು ಕಡಿಮೆ ಆಗುತ್ತದೆ. ಇದರಿಂದ ಆಮದು ಮತ್ತು ರಫ್ತು ನಡುವಿನ ಅಂತರ ಅಥವಾ ಟ್ರೇಡ್ ಡೆಫಿಸಿಟ್ ಕಡಿಮೆ ಆಗುತ್ತದೆ. ಭಾರತಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ.
ಛತ್ತೀಸ್ಗಡ, ಕರ್ನಾಟಕ, ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರದಲ್ಲಿ ಬಹಳಷ್ಟು ಲಿಥಿಯಮ್ ನಿಕ್ಷೇಪಗಳಿರುವುದನ್ನು ಭೂ ಸರ್ವೇಕ್ಷಣಾ ಇಲಾಖೆ ಪತ್ತೆ ಮಾಡಿದೆ. ಬಿಹಾರ, ಆಂಧ್ರ, ಒಡಿಶಾ ಮತ್ತು ಗುಜರಾತ್ನಲ್ಲೂ ಲಿಥಿಯಮ್ ನಿಕ್ಷೇಪಗಳಿರುವುದು ಗೊತ್ತಾಗಿದೆ. ಕರ್ನಾಟಕದ ಮಂಡ್ಯದಲ್ಲಿ ಪತ್ತೆಯಾಗಿರುವ ನಿಕ್ಷೇಪದಲ್ಲಿ 14,000 ಟನ್ಗಳಷ್ಟು ಲಿಥಿಯಮ್ ಇರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಭಾರತೀಯ ತಳಿಯ ಮಾವಿನಹಣ್ಣು ಬೆಳೆದು ಭಾರತಕ್ಕಿಂತಲೂ ಹೆಚ್ಚು ರಫ್ತು ಮಾಡುತ್ತಿದೆ ಚೀನಾ
ಜಾಗತಿಕವಾಗಿ ಚೀನಾ ಅತಿಹೆಚ್ಚು ಲಿಥಿಯಮ್ ಅಯಾನ್ ಬ್ಯಾಟರಿಗಳನ್ನು ತಯಾರಿಸುತ್ತದೆ. ಇದರ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಶೇ. 77ರಷ್ಟು ಪಾರಮ್ಯ ಹೊಂದಿದೆ. ಚಿಲಿ, ಆಸ್ಟ್ರೇಲಿಯಾ, ಅರ್ಜೆಂಟೀನಾ ದೇಶಗಳಲ್ಲಿ ಲಿಥಿಯಮ್ ಉತ್ಪಾದನೆ ಅಧಿಕ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ