Forex Rise: ಭಾರತದ ಫಾರೆಕ್ಸ್ ರಿಸರ್ವ್ಸ್ 616 ಬಿಲಿಯನ್ ಡಾಲರ್​ಗೆ ಏರಿಕೆ; ಕಳೆದ 20 ತಿಂಗಳ ಗರಿಷ್ಠ ಮಟ್ಟ

|

Updated on: Dec 24, 2023 | 10:16 AM

Foreign Exchange Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ಡಿಸೆಂಬರ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ 9.11 ಬಿಲಿಯನ್ ಡಾಲರ್​ನಷ್ಟು ಏರಿ 615.97 ಡಾಲರ್​ ಮಟ್ಟ ತಲುಪಿದೆ. ದೇಶದ ವಿದೇಶೀ ವಿನಿಮಯ ಮೀಸಲು ನಿಧಿ ಸತತ 5 ವಾರ ಕಾಲ ಏರಿಕೆ ಕಂಡಂತಾಗಿದೆ. ಹಿಂದಿನ ವಾರದಲ್ಲಿ 2.816 ಬಿಲಿಯನ್ ಡಾಲರ್​ನಷ್ಟು ಹೆಚ್ಚಿತ್ತು. 2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್​ನಷ್ಟು ಇತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ.

Forex Rise: ಭಾರತದ ಫಾರೆಕ್ಸ್ ರಿಸರ್ವ್ಸ್ 616 ಬಿಲಿಯನ್ ಡಾಲರ್​ಗೆ ಏರಿಕೆ; ಕಳೆದ 20 ತಿಂಗಳ ಗರಿಷ್ಠ ಮಟ್ಟ
ಫಾರೆಕ್ಸ್ ನಿಧಿ
Follow us on

ನವದೆಹಲಿ, ಡಿಸೆಂಬರ್ 24: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ (Forex Reserves of India) ಮೊತ್ತ ಸತತ ಐದನೇ ವಾರವೂ ಹೆಚ್ಚಳವಾಗಿದೆ. ಡಿಸೆಂಬರ್ 15ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 9.11 ಬಿಲಿಯನ್ ಡಾಲರ್​ನಷ್ಟು ಏರಿದೆ. ಇದರೊಂದಿಗೆ ದೇಶದ ಒಟ್ಟಾರೆ ವಿದೇಶ ವಿನಿಮಯ ಮೀಸಲು ನಿಧಿ 615.97 ಬಿಲಿಯನ್ ಡಾಲರ್​ನಷ್ಟಾಗಿದೆ. ಅದರ ಹಿಂದಿನ ವಾರದಲ್ಲಿ ಮೀಸಲು ನಿಧಿ 606.859 ಬಿಲಿಯನ್ ಡಾಲರ್​ನಷ್ಟು ಇತ್ತು. ಹಿಂದಿನ ನಾಲ್ಕು ವಾರ ಕೂಡ ಫಾರೆಕ್ಸ್ ರಿಸರ್ವ್ಸ್​ನಲ್ಲಿ ಏರಿಕೆ ಆಗಿತ್ತು. ಡಿಸೆಂಬರ್ 8ಕ್ಕೆ ಅಂತ್ಯಗೊಂಡ ವಾರದಲ್ಲಿ 2.816 ಬಿಲಿಯನ್ ಡಾಲರ್​ನಷ್ಟು ಏರಿತ್ತು.

ನಿನ್ನೆ (ಡಿ. 23) ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ ಹೆಚ್ಚಳವಾದ 9.11 ಬಿಲಿಯನ್ ಮೊತ್ತದ ಫಾರೆಕ್ಸ್ ಮೀಸಲು ನಿಧಿಯಲ್ಲಿ ಎಲ್ಲಾ ಭಾಗಗಳೂ ಹೆಚ್ಚಳ ಕಂಡಿವೆ. ಫಾರೆಕ್ಸ್​ನ ಪ್ರಮುಖ ಭಾಗವಾಗಿರುವ ವಿದೇಶೀ ಕರೆನ್ಸಿ ಆಸ್ತಿ 8.349 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ.

ಚಿನ್ನದ ಮೀಸಲು ನಿಧಿ 446 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಎಸ್​ಡಿಆರ್​ಗಳು (SDR- Special Drawing Rights) 135 ಬಿಲಿಯನ್ ಡಾಲರ್ ಏರಿಕೆ ಆಗಿವೆ. ಐಎಂಎಫ್​ನಲ್ಲಿ ಇರಿಸಿರುವ ನಿಧಿ (Reserve position with RBI) 181 ಮಿಲಿಯನ್​ನಷ್ಟು ಏರಿರುವುದು ಆರ್​ಬಿಐ ದತ್ತಾಂಶ ವರದಿಯಿಂದ ತಿಳಿದಬರುತ್ತದೆ.

ಇದನ್ನೂ ಓದಿ: IMF vs India: ವಿಪರೀತ ಸಾಲ ಹುಷಾರ್..! ಭಾರತವನ್ನು ಎಚ್ಚರಿಸಿದ ಐಎಂಎಫ್; ಈ ಸಾಲದಿಂದ ಅಪಾಯ ಇಲ್ಲ ಎನ್ನುವ ಸರ್ಕಾರ

ಡಿಸೆಂಬರ್ 15ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ ಏರಿಕೆ ವಿವರ

  • ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ: 615.97 ಬಿಲಿಯನ್ ಡಾಲರ್
  • ಒಂದು ವಾರದಲ್ಲಿ ಏರಿಕೆ ಆಗಿದ್ದು: 9.11 ಬಿಲಿಯನ್ ಡಾಲರ್
  • ಫಾರೀನ್ ಕರೆನ್ಸಿ ಆಸ್ತಿ: 545.048 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 8.349 ಬಿಲಿಯನ್ ಡಾಲರ್)
  • ಗೋಲ್ಡ್ ರಿಸರ್ವ್ಸ್: 47.577 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 47.577 ಮಿಲಿಯನ್)
  • ಎಸ್​ಡಿಆರ್: 18.323 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 135 ಮಿಲಿಯನ್)
  • ಐಎಂಎಂಫ್​ನಲ್ಲಿ ಇರಿಸಿರುವ ನಿಧಿ: 5.023 ಬಿಲಿಯನ್ ಡಾಲರ್ (ಏರಿಕೆ ಆಗಿದ್ದು 181 ಮಿಲಿಯನ್ ಡಾಲರ್).

ವಿದೇಶೀ ಕರೆನ್ಸಿಗಳ ಆಸ್ತಿ

ಇನ್ನು, ಫಾರೀನ್ ಕರೆನ್ಸಿಗಳ ಬುಟ್ಟಿಯಲ್ಲಿ ಅಮೆರಿಕನ್ ಡಾಲರ್ ಅಲ್ಲದ ಇತರ ವಿದೇಶೀ ಕರೆನ್ಸಿ ಯೂನಿಟ್​ಗಳೆನಿಸಿದ ಯೂರೋ, ಪೌಂಡ್, ಯೆನ್ ಇತ್ಯಾದಿಗಳ ಮೌಲ್ಯಗಳಲ್ಲಿ ಆಗುವ ವ್ಯತ್ಯಯವು ವಿದೇಶೀ ಕರೆನ್ಸಿ ಆಸ್ತಿಯ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವಾರದಲ್ಲಿ ಈ ಕರೆನ್ಸಿಗಳ ಮೌಲ್ಯ ಹೆಚ್ಚಾಗಿದ್ದು, ಭಾರತದ ವಿದೇಶೀ ಕರೆನ್ಸಿ ಆಸ್ತಿಯ ತೂಕ ಹೆಚ್ಚಲು ಕಾರಣವಾಗಿತ್ತು.

ಇದನ್ನೂ ಓದಿ: Poll Promises: ರಾಜಕೀಯ ಪಕ್ಷಗಳ ಚುನಾವಣಾ ಭರವಸೆ, ರಾಜ್ಯಗಳ ಆರೋಗ್ಯದ ಮೇಲೆ ಬೀರುವ ಪರಿಣಾಮವೇನು?

ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ಫಾರೆಕ್ಸ್ ನಿಧಿ

2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 645 ಬಿಲಿಯನ್ ಡಾಲರ್​ನಷ್ಟಿತ್ತು. ಅದು ಭಾರತದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಜಾಗತಿಕ ಹಿಂಜರಿತ ಇತ್ಯಾದಿ ವಿದ್ಯಮಾನಗಳ ಹಿನ್ನೆಲೆಯಲ್ಲಿ ರುಪಾಯಿ ಮೌಲ್ಯ ಗಣನೀಯವಾಗಿ ಕುಸಿಯುವುದನ್ನು ತಡೆಯಲು ಆರ್​ಬಿಐ ಒಂದಷ್ಟು ಕರೆನ್ಸಿ ಆಸ್ತಿಗಳನ್ನು ಮಾರಿತ್ತು. ಅದರ ಪರಿಣಾಮವಾಗಿ ಪಾರೆಕ್ಸ್ ನಿಧಿ 600 ಬಿಲಿಯನ್ ಡಾಲರ್​ಗಿಂತ ಕೆಳಗೆ ಇಳಿದುಹೋಗಿತ್ತು. ಈಗ ಸತತ ಐದು ವಾರ ಕಾಲ ನಿಧಿಯಲ್ಲಿ ಹೆಚ್ಚಳ ಕಂಡುಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:12 am, Sun, 24 December 23