IMF vs India: ವಿಪರೀತ ಸಾಲ ಹುಷಾರ್..! ಭಾರತವನ್ನು ಎಚ್ಚರಿಸಿದ ಐಎಂಎಫ್; ಈ ಸಾಲದಿಂದ ಅಪಾಯ ಇಲ್ಲ ಎನ್ನುವ ಸರ್ಕಾರ
India Debt: ಭಾರತದ ಸಾಲ ವಿಪರೀತವಾಗುತ್ತಿದ್ದು, ಭವಿಷ್ಯದಲ್ಲಿ ಅದು ಜಿಡಿಪಿಗಿಂತ ಹೆಚ್ಚು ಮೊತ್ತಕ್ಕೆ ಏರಬಹುದು ಎಂದು ಐಎಂಎಫ್ ಆತಂಕ ವ್ಯಕ್ತಪಡಿಸಿದೆ. ಹಾಗೆಯೇ, ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದೂ ಹಣಕಾಸು ನಿಧಿ ಸಂಸ್ಥೆ ಹೇಳಿದೆ. ಐಎಂಎಫ್ನ ಈ ಎಲ್ಲಾ ಆತಂಕಗಳನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಸರ್ಕಾರಿ ಸಾಲದಿಂದ ಆಗುವ ಅಪಾಯ ಬಹಳ ಸೀಮಿತ ಮಟ್ಟದ್ದು ಎಂದು ವಾದಿಸಿದೆ.
ನವದೆಹಲಿ, ಡಿಸೆಂಬರ್ 22: ಭಾರತದ ಸಾಲ ಪ್ರಮಾಣದ ಬಗ್ಗೆ ಐಎಂಎಫ್ (IMF- International Monetary Fund) ಕಳವಳ ವ್ಯಕ್ತಪಡಿಸಿದೆ. ಸರ್ಕಾರದ ಸಾಲ ಪ್ರಮಾಣ ಮುಂದಿನ ದಿನಗಳಲ್ಲಿ ಜಿಡಿಪಿ ಮೊತ್ತದ ಮಟ್ಟವನ್ನು (Debt to GDP ratio) ಮೀರಿ ಹೋಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ. ಹಾಗೆಯೇ, ಹವಾಮಾನ ಬದಲಾವಣೆ ಸಮಸ್ಯೆ ಎದುರಿಸಲು ಸರ್ಕಾರ ಮಾಡಿರುವ ಹೂಡಿಕೆ ಸಾಕಷ್ಟಿಲ್ಲ ಎಂದೂ ಅದು ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಐಎಂಎಫ್ನ ಈ ವಾದಗಳನ್ನು ಭಾರತ ಒಪ್ಪಿಲ್ಲ. ಭಾರತಕ್ಕೆ ಸಾಲದ ಸಮಸ್ಯೆ ತಲೆದೋರುವುದಿಲ್ಲ ಎಂದು ಸರ್ಕಾರ ವಿವರಣೆ ನೀಡಿದೆ.
‘ಸರ್ಕಾರದ ಸಾಲಗಳು ಹೆಚ್ಚಾಗಿ ರೂಪಾಯಿ ಕರೆನ್ಸಿಯಲ್ಲಿ ಇವೆ. ಹೀಗಾಗಿ, ಇಂಥ ಸಾಲದಿಂದ ಆಗುವ ಅಪಾಯ ಬಹಳ ಸೀಮಿತ ಮಟ್ಟದ್ದು. ಕಳೆದ ಎರಡು ದಶಕದಲ್ಲಿ ಜಾಗತಿಕ ಆರ್ಥಿಕತೆಗೆ ಹಲವು ಆಘಾತವಾದರೂ ಭಾರತದ ಸಾರ್ವಜನಿಕ ಸಾಲ ಹೆಚ್ಚು ಏರಿಕೆ ಆಗಿಲ್ಲ. 2005-06ರಲ್ಲಿ ಜಿಡಿಪಿ ಮತ್ತು ಪಬ್ಲಿಕ್ ಡೆಟ್ ಅನುಪಾತ ಶೇ. 81ರಷ್ಟಿತ್ತು. 2021-22ರಲ್ಲಿ ಇದು ಶೇ. 81ಕ್ಕೆ ಏರಿತು. ಈಗ 2022-23ರಲ್ಲಿ ಈ ಪ್ರಮಾಣವು ಶೇ. 81ಕ್ಕೆ ಮತ್ತೆ ಇಳಿದಿದೆ,’ ಎಂದು ಐಎಂಎಫ್ನಲ್ಲಿ ಭಾರತದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಕೆ.ವಿ. ಸುಬ್ರಮಣಿಯನ್ ಅಂಕಿ ಅಂಶ ಸಮೇತ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: Poll Promises: ರಾಜಕೀಯ ಪಕ್ಷಗಳ ಚುನಾವಣಾ ಭರವಸೆ, ರಾಜ್ಯಗಳ ಆರೋಗ್ಯದ ಮೇಲೆ ಬೀರುವ ಪರಿಣಾಮವೇನು?
ಆರ್ಬಿಐ ತನ್ನ ವರದಿಯೊಂದರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆಯಾದರೂ ಕೆಲವಿಷ್ಟು ನ್ಯೂನತೆಗಳನ್ನು ಎತ್ತಿ ತೋರಿಸಿದೆ. ಅದರಲ್ಲಿ ಪ್ರಮುಖವಾದುದು ಕರೆನ್ಸಿ ವಿನಿಮಯ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಒಂದು. ಫ್ಲೋಟಿಂಗ್ ವ್ಯವಸ್ಥೆ ಬದಲು ಸರ್ಕಾರ ಬೆಲೆ ನಿಯಂತ್ರಣದ ಕ್ರಮ ಕೈಗೊಂಡಿದೆ ಎಂದು ಐಎಂಎಫ್ ಹೇಳಿದೆ. 2022ರ ಡಿಸೆಂಬರ್ನಿಂದ 2023ರ ಅಕ್ಟೋಬರ್ವರೆಗಿನ ಅವಧಿಯಲ್ಲಿನ ಫೋರೆಕ್ಸ್ ಮಾರುಕಟ್ಟೆಯನ್ನು ಅವಲೋಕಿಸಿ ಐಎಂಎಫ್ ಈ ಅಭಿಪ್ರಾಯಕ್ಕೆ ಬಂದಿದೆ.
ಐಎಂಎಫ್ನ ಈ ವಾದವನ್ನೂ ಭಾರತ ತಿರಸ್ಕರಿಸಿದೆ. ಇಷ್ಟು ಅಲ್ಪ ಅವಧಿಯನ್ನು ಮಾತ್ರ ಪರಿಗಣಿಸಿ ಅದು ಈ ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ. ವಿನಿಮಯ ದರದಲ್ಲಿ ಆಗುತ್ತಿದ್ದ ಕ್ಷಿಪ್ರ ಬದಲಾವಣೆಯನ್ನು ನಿಯಂತ್ರಿಸಲು ಮಾತ್ರವೇ ಸರ್ಕಾರ ಹಸ್ತಕ್ಷೇಪ ಮಾಡಿದೆ. ಐಎಂಎಫ್ ಹೆಚ್ಚಿನ ಅವಧಿಯ ಅಂಕಿ ಅಂಶವನ್ನು ತೆಗೆದುಕೊಂಡಿದ್ದರೆ ಬೇರೆಯೇ ಅಭಿಪ್ರಾಯ ಬಂದಿರುತ್ತಿತ್ತು ಎಂದು ಸರ್ಕಾರ ವಾದಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Fri, 22 December 23