India’s PMI Growth: ಮೂರು ತಿಂಗಳ ಗರಿಷ್ಠ ಮಟ್ಟದಲ್ಲಿ ಉತ್ಪಾದನಾ ಚಟುವಟಿಕೆ; ಸಮೀಕ್ಷಾ ವರದಿ
ಬೇಡಿಕೆಯ ಸ್ಥಿರತೆಯ ಕಾರಣ ಉತ್ಪಾದಕರು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿದ್ದರು. ರಫ್ತಿನ ಪ್ರಮಾಣವೂ ಹೆಚ್ಚಾಗಿದ್ದು ಉತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಪುಷ್ಟಿ ನೀಡಿತು ಎಂದು ಎಸ್ಆ್ಯಂಡ್ಪಿ ಗ್ಲೋಬಲ್ ತಿಳಿಸಿದೆ.
ನವದೆಹಲಿ: ಜಿಡಿಪಿ ಬೆಳವಣಿಗೆ (GDP growth) ದರ ಭಾರೀ ಪ್ರಮಾಣದಲ್ಲಿ ಕುಸಿತವಾಗಿರುವ ಬೆನ್ನಲ್ಲೇ ದೇಶದ ಉತ್ಪಾದನಾ ಚಟುವಟಿಕೆಗಳು ಮೂರು ತಿಂಗಳ ಗರಿಷ್ಠ ಮಟ್ಟ ದಾಖಲಿಸಿರುವುದು ಎಸ್ಆ್ಯಂಡ್ಪಿ ಗ್ಲೋಬಲ್ ಇಂಡಿಯಾ(S&P Global India) ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ. ಬೇಡಿಕೆಯಲ್ಲಿ ಸ್ಥಿರತೆ, ವೆಚ್ಚದ ಒತ್ತಡದಲ್ಲಿ ಇಳಿಕೆ ಹಾಗೂ ರಫ್ತು ಹೆಚ್ಚಳದ ಪರಿಣಾಮ ಉತ್ಪಾದನಾ ಚಟುವಟಿಕೆಗಳು ಹೆಚ್ಚಿವೆ. ದೇಶದ ಉತ್ಪಾದನಾ ಖರೀದಿ ವ್ಯವಸ್ಥಾಪನಾ ಸೂಚ್ಯಂಕ ಅಥವಾ ಪಿಎಂಐ (PMI) ನವೆಂಬರ್ನಲ್ಲಿ ಶೇಕಡಾ 55.7 ರಷ್ಟಿದೆ ಎಂದು ವರದಿ ತಿಳಿಸಿದೆ.
ನವೆಂಬರ್ ತಿಂಗಳ ಪಿಎಂಐ ದತ್ತಾಂಶವು ಒಟ್ಟಾರೆ ಬೆಳವಣಿಗೆಯಲ್ಲಿ ಸತತ 17 ತಿಂಗಳುಗಳಿಂದ ಸುಧಾರಣೆ ಆಗುತ್ತಿರುವುದನ್ನು ಸೂಚಿಸುತ್ತಿದೆ. ಪಿಎಂಐ ಸೂಚ್ಯಂಕದಲ್ಲಿ 50ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಉತ್ತಮ ಹಾಗೂ 50ಕ್ಕಿಂತ ಕೆಳಗಿದ್ದರೆ ಉತ್ತಮವಲ್ಲ ಎಂದು ಪರಿಗಣಿಸಲಾಗುತ್ತಿದೆ. ಹಣದುಬ್ಬರ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದು, ಉತ್ಪಾದನಾ ವಲಯ ಚೇತರಿಸುತ್ತಿರುವುದು ಪಿಎಂಐ ಸುಧಾರಣೆಗೆ ಕಾರಣ ಎಂದೂ ವರದಿ ತಿಳಿಸಿದೆ.
ಬೇಡಿಕೆಯ ಸ್ಥಿರತೆಯ ಕಾರಣ ಉತ್ಪಾದಕರು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿದ್ದರು. ರಫ್ತಿನ ಪ್ರಮಾಣವೂ ಹೆಚ್ಚಾಗಿದ್ದು ಉತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಪುಷ್ಟಿ ನೀಡಿತು ಎಂದು ಎಸ್ಆ್ಯಂಡ್ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ನ ಎಕನಾಮಿಕ್ಸ್ ಅಸೋಸಿಯೇಟ್ ಡೈರೆಕ್ಟರ್ ಪೊಲಿಯನ್ನಾ ಡೆ ಲಿಮಾ ಹೇಳಿದ್ದಾರೆ.
ಇದನ್ನೂ ಓದಿ: India’s GDP Growth: ಜಿಡಿಪಿ ಕುಸಿತದ ಹೊರತಾಗಿಯೂ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಆರ್ಥಿಕತೆ; ಕೇಂದ್ರ
ಎಲ್ಲದಕ್ಕಿಂತ ಹೆಚ್ಚಾಗಿ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ನಿರೀಕ್ಷೆಗಳು ಕಂಪನಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಸಿದೆ. ಖರೀದಿಯ ಸಾಮರ್ಥ್ಯದಲ್ಲಿ ವಿಸ್ತರಣೆ ಕೂಡ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಖರೀದಿ ಸಾಮರ್ಥ್ಯ ಮತ್ತು ಬೇಡಿಕೆ ಬಗ್ಗೆ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಉದ್ಯಮಗಳು ಬಲವಾದ ವಿಶ್ವಾಸ ವ್ಯಕ್ತಪಡಿಸಿವೆ. ತಾವು ಉತ್ಪಾದಿಸಿದ ವಸ್ತುಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗುವ ಹಾಗೂ ಮಾರಾಟವಾಗುವ ವಿಶ್ವಾಸ ವ್ಯಕ್ತಪಡಿಸಿವೆ. 2023ರಲ್ಲಿ ಉತ್ಪಾದನೆ ಇನ್ನಷ್ಟು ಹೆಚ್ಚಳವಾಗಲಿವೆ ಎಂದು ತಿಳಿಸಿವೆ ಎಂದು ಲಿಮಾ ತಿಳಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇಕಡಾ 6.3ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸಾಖ್ಯಿಕ ಇಲಾಖೆ ಬುಧವಾರ ತಿಳಿಸಿತ್ತು. ಅದಕ್ಕಿಂತ ಹಿಂದಿನ ಮೂರು ತಿಂಗಳ ಅವಧಿಯಲ್ಲಿ ಶೇಕಡಾ 13.5ರಷ್ಟಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ