ಬೆಂಗಳೂರು: ಮಂಗೋಲಿಯಾದಲ್ಲಿ (Mongolia) ಮೊತ್ತ ಮೊದಲ ಗ್ರೀನ್ಫೀಲ್ಡ್ ತೈಲ ಸಂಸ್ಕರಣಾಗಾರ (Greenfield Oil Refinery) ನಿರ್ಮಿಸಲು ಅಲ್ಲಿನ ಮಂಗೋಲ್ ರಿಫೈನರಿ ಪ್ರಾಜೆಕ್ಟ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕುರಿತ ದೃಢೀಕರಣ ಪತ್ರ ದೊರೆತಿದೆ ಎಂದು ಭಾರತೀಯ ಕಂಪನಿ ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಗುರುವಾರ ತಿಳಿಸಿದೆ. 79 ಕೋಟಿ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮಂಗೋಲಿಯಾದಲ್ಲಿ ಇಪಿಸಿ-2 (ಓಪನ್ ಆರ್ಟ್ ಯೂನಿಟ್ಸ್, ಯುಟಿಲಿಟೀಸ್, ಆಫ್ಸೈಟ್ಸ್, ಪ್ಲಾಂಟ್ ಬ್ಯುಲ್ಡಿಂಗ್ಸ್) ಹಾಗೂ ಎಪಿಸಿ-3 (ಕ್ಯಾಪ್ಟಿವ್ ಪವರ್ ಪ್ಲಾಂಟ್ಸ್) ನಿರ್ಮಾಣ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಭಿವೃದ್ಧಿ ಆಡಳಿತ ಪಾಲುದಾರಿಕೆ ಉಪಕ್ರಮ ಭಾಗವಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಭಾರತದ ಸರ್ಕಾರವು ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಲಿದೆ. ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಯೋಜನಾ ನಿರ್ವಹಣೆ ಸಲಹೆಗಾರನಾಗಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂಬರುವ ವರ್ಷಗಳಲ್ಲಿ ಸಂಸ್ಕರಣಾಗಾರವು ಅನೇಕ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ನೆರವಾಗಲಿದೆ. ಜತೆಗೆ, ಮಂಗೋಲಿಯಾದ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಕಂಪನಿ ಹೇಳಿದೆ.
ಭಾರತ ಹಾಗೂ ಮಂಗೋಲಿಯಾ ನಡುವಣ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಈ ಯೋಜನೆ ಬಹಳ ಮಹತ್ವದ್ದಾಗಿರಲಿದೆ. ಹೈಡ್ರೋಕಾರ್ಬನ್ಸ್ ಸೆಕ್ಟರ್ನಲ್ಲಿಯೂ ನಮ್ಮ ಚಟುವಟಿಕೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಇದರಿಂದ ಮಂಗೋಲಿಯಾವು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಲಿದೆ ಎಂದು ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫಾಸ್ಟ್ರಕ್ಚರ್ಸ್ ವಕ್ತಾರರು ತಿಳಿಸಿದ್ದಾರೆ.
ಸದ್ಯ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಮಂಗೋಲಿಯಾ, ತನ್ನ ಮೊದಲ ಗ್ರೀನ್ಫೀಲ್ಡ್ ತೈಲ ಸಂಸ್ಕರಣಾಗಾರ ನಿರ್ಮಿಸಲು ಮುಂದಾಗಿದೆ. ಭಾರತದ ಪ್ರಮುಖ ಮೂಲಸೌಕರ್ಯ ಕಂಪನಿಗಳಲ್ಲಿ ಒಂದಾಗಿರುವ, 1989ರಲ್ಲಿ ಸ್ಥಾಪನೆಯಾಗಿರುವ ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫಾಸ್ಟ್ರಕ್ಚರ್ಸ್ ಲಿಮಿಡೆಟ್ ಮಂಗೋಲಿಯಾದ ಯೋಜನೆಯನ್ನು ಸಾಕಾರಗೊಳಿಸಲು ಒಪ್ಪಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ