Trade Deficit: ಅಕ್ಟೋಬರ್ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 27.14 ಬಿಲಿಯನ್ ಡಾಲರ್ಗೆ ಇಳಿಕೆ
India trade deficit in October: ಮರ್ಚಾಂಡೈಸ್ ಟ್ರೇಡ್ ಡೆಫಿಸಿಟ್ ಅಥವಾ ಸರಕು ವ್ಯಾಪಾರ ಕೊರತೆ ಅಕ್ಟೋಬರ್ನಲ್ಲಿ 27.14 ಬಿಲಿಯನ್ ಡಾಲರ್ನಷ್ಟು ಇದೆ. ಸರ್ವಿಸ್ನ ವ್ಯಾಪಾರ ಅಂತರ ಸಕಾರಾತ್ಮಕವಾಗಿದೆ. ಟ್ರೇಡ್ ಸರ್ಪ್ಲಸ್ ಇದೆ. ಸರಕು ಮತ್ತು ಸೇವೆಗಳೆರಡನ್ನೂ ಸೇರಿಸಿದರೆ ಭಾರತದ ಟ್ರೇಡ್ ಡೆಫಿಸಿಟ್ ಸುಮಾರು 10 ಬಿಲಿಯನ್ ಡಾಲರ್ಗೂ ತುಸು ಅಧಿಕ ಇದೆ.
ನವದೆಹಲಿ, ನವೆಂಬರ್ 14: ಸರಕು ವ್ಯಾಪಾರ ಅಂತರ ಅಕ್ಟೋಬರ್ ತಿಂಗಳಲ್ಲಿ 27.14 ಬಿಲಿಯನ್ ಡಾಲರ್ನಷ್ಟಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ 33.43 ಬಿಲಿಯನ್ ಡಾಲರ್ನಷ್ಟು ಟ್ರೇಡ್ ಡೆಫಿಸಿಟ್ ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಅಂತರ ತಗ್ಗಿದೆ. ಆದರೆ, ಹಿಂದಿನ ತಿಂಗಳಿಗೆ (2024ರ ಸೆಪ್ಟೆಂಬರ್) ಹೋಲಿಸಿದರೆ ಇದು 6-7 ಬಿಲಿಯನ್ ಡಾಲರ್ನಷ್ಟು ಹೆಚ್ಚಿದೆ. ಸೆಪ್ಟೆಂಬರ್ನಲ್ಲಿ ಟ್ರೇಡ್ ಡೆಫಿಸಿಟ್ 20.78 ಬಿಲಿಯನ್ ಡಾಲರ್ ಇತ್ತು. ರಾಯ್ಟರ್ಸ್ ಪೋಲ್ ನಡೆಸಿದ ಸಮೀಕ್ಷೆಯಲ್ಲಿ, ಅಕ್ಟೋಬರ್ನಲ್ಲಿ ಟ್ರೇಡ್ ಡೆಫಿಸಿಟ್ 22 ಬಿಲಿಯನ್ ಡಾಲರ್ ಇದ್ದಿರಬಹುದು ಎನ್ನುವ ಅಂದಾಜಿತ್ತು. ಈ ನಿರೀಕ್ಷೆಮೀರಿ, ವ್ಯಾಪಾರ ಕೊರತೆ ಹೆಚ್ಚಿದೆ.
ಟ್ರೇಡ್ ಡೆಫಿಸಿಟ್ ಹೆಚ್ಚಾಗಲು ಪ್ರಮುಖ ಕಾರಣವಾಗಿದ್ದು ಆಮದುಗಳ ಹೆಚ್ಚಳ. ರಫ್ತು ಹೆಚ್ಚಳವಾಗಿದ್ದರೂ ಆಮದು ಸಾಕಷ್ಟು ಮಟ್ಟದಲ್ಲಿ ಹೆಚ್ಚಾಗಿದ್ದರಿಂದ ವ್ಯಾಪಾರ ಅಂತರ ಬೆಳೆದಿದೆ.
ಟ್ರೇಡ್ ಡೆಫಿಸಿಟ್ ಎಂದರೆ ಏನು?
ಒಂದು ದೇಶದಿಂದ ಸರಕುಗಳ ರಫ್ತು ಮತ್ತು ಆಮದುಗಳ ನಡುವಿನ ಅಂತರವನ್ನು ಟ್ರೇಡ್ ಡೆಫಿಸಿಟ್ ಮತ್ತು ಟ್ರೇಡ್ ಸರ್ಪ್ಲಸ್ ಎಂದು ವರ್ಗೀಕರಿಸಲಾಗುತ್ತದೆ. ರಫ್ತಿಗಿಂತ ಆಮದು ಹೆಚ್ಚಾಗಿದ್ದರೆ ಅದು ಟ್ರೇಡ್ ಡೆಫಿಸಿಟ್ ಎನಿಸುತ್ತದೆ. ಆಮದಿಗಿಂತ ರಫ್ತು ಹೆಚ್ಚಾಗಿದ್ದರೆ ಅದು ಟ್ರೇಡ್ ಸರ್ಪ್ಲಸ್ ಆಗುತ್ತದೆ.
ಇದನ್ನೂ ಓದಿ: ಬಡ್ಡಿದರ ಕಡಿಮೆ ಮಾಡಬೇಕು: ಸಚಿವ ಪಿಯೂಶ್ ಗೋಯಲ್ ಒತ್ತಾಯಕ್ಕೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರಿಯಾಕ್ಷನ್ ಇದು…
ಅಕ್ಟೋಬರ್ ತಿಂಗಳಲ್ಲಿ ಭಾರತದ ಸರಕುಗಳ ರಫ್ತು 39.2 ಬಿಲಿಯನ್ ಡಾಲರ್ನಷ್ಟಿದೆ. ಅದೇ ವೇಳೆ ಆಮದುಗಳ ಮೊತ್ತ 66.34 ಬಿಲಿಯನ್ ಡಾಲರ್ನಷ್ಟಿದೆ. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ರಫ್ತಿನಲ್ಲಿ 4.5 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಆದರೆ, ಆಮದು 9 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ. ಹೀಗಾಗಿ, ಟ್ರೇಡ್ ಡೆಫಿಸಿಟ್ ಹಿಗ್ಗಿದೆ.
ಸರ್ವಿಸ್ ಸೆಕ್ಟರ್ನಲ್ಲಿ ಟ್ರೇಡ್ ಸರ್ಪ್ಲಸ್ ಹೆಚ್ಚಳ
ಸರಕುಗಳ ವ್ಯಾಪಾರದಲ್ಲಿ ಭಾರತ ಟ್ರೇಡ್ ಡೆಫಿಸಿಟ್ ಕಾಣುತ್ತದೆಯಾದರೂ, ಸರ್ವಿಸ್ ಸೆಕ್ಟರ್ಗೆ ಬಂದರೆ ಭಾರತ ಆಮದಿಗಿಂತ ರಫ್ತು ಹೆಚ್ಚು ಮಾಡುತ್ತದೆ. ಸೆಪ್ಟೆಂಬರ್ಗೆ ಹೋಲಿಸಿದರೆ ಭಾರತದ ಟ್ರೇಡ್ ಸರ್ಪ್ಲಸ್ ಹೆಚ್ಚು ಬೆಳೆದಿದೆ. ಸೆಪ್ಟೆಂಬರ್ನಲ್ಲಿ ಸರ್ವಿಸ್ ರಫ್ತು ಮತ್ತು ಆಮದು ಕ್ರಮವಾಗಿ 30.61 ಬಿಲಿಯನ್ ಡಾಲರ್ ಮತ್ತು 16.32 ಬಿಲಿಯನ್ ಡಾಲರ್ ಇತ್ತು. ಅಕ್ಟೋಬರ್ನಲ್ಲಿ ಇದು 34.02 ಬಿಲಿಯನ್ ಡಾಲರ್ ಮತ್ತು 17 ಬಿಲಿಯನ್ ಡಾಲರ್ ಆಗಿದೆ.
ಇದನ್ನೂ ಓದಿ: ಕಡಿಮೆ ಆಗಿದೆ ಮಧ್ಯಮ ವರ್ಗದವರ ತೆರಿಗೆ ಪಾವತಿ; ಹೆಚ್ಚು ಆದಾಯದ ಗುಂಪಿನವರಿಂದ ಹೆಚ್ಚು ತೆರಿಗೆ
ಸರಕು ಮತ್ತು ಸರ್ವಿಸ್ ಎರಡನ್ನೂ ಸೇರಿಸಿದರೆ ಭಾರತದ ರಫ್ತು 73.22 ಬಿಲಿಯನ್ ಡಾಲರ್ ಇದೆ. ಆಮದು ಪ್ರಮಾಣವು 83.34 ಬಿಲಿಯನ್ ಡಾಲರ್ ಆಗುತ್ತದೆ. ಒಟ್ಟಾರೆ ಟ್ರೇಡ್ ಡೆಫಿಸಿಟ್ ಸುಮಾರು 10 ಬಿಲಿಯನ್ ಡಾಲರ್ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ