ಬಡ್ಡಿದರ ಕಡಿಮೆ ಮಾಡಬೇಕು: ಸಚಿವ ಪಿಯೂಶ್ ಗೋಯಲ್ ಒತ್ತಾಯಕ್ಕೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರಿಯಾಕ್ಷನ್ ಇದು…
RBI rates and inflation: Piyush Goyal vs Shaktikanta Das: ಕಳೆದ ಹತ್ತು ವರ್ಷದಲ್ಲಿ ಸರಾಸರಿ ಹಣದುಬ್ಬರವು ಸ್ವಾತಂತ್ರ್ಯೋತ್ತರ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಕೇಂದ್ರ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಹಣದುಬ್ಬರ ಡಿಸೆಂಬರ್ನಲ್ಲೋ, ಫೆಬ್ರುವರಿಯಲ್ಲೋ ಇಳಿಯುತ್ತದೆ. ಆರ್ಬಿಐ ಡಿಸೆಂಬರ್ನಲ್ಲಿ ರಿಪೋ ರೇಟ್ ಇಳಿಸಲೇಬೇಕು ಎಂದಿದ್ದಾರೆ ಸಚಿವರು.
ನವದೆಹಲಿ, ನವೆಂಬರ್ 14: ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ನಿರೀಕ್ಷೆಮೀರಿ ಮೇಲ್ಮಟ್ಟದಲ್ಲಿ ಇರುವುದರಿಂದ ಎಲ್ಲರ ಗಮನ ಈಗ ರಿಪೋ ದರ ಇಳಿಯುತ್ತಾ ಇಲ್ಲವಾ ಎನ್ನುವುದರ ಮೇಲೆ ಹೋಗಿದೆ. ಎಸ್ಬಿಐ ರಿಸರ್ಚ್ ಪ್ರಕಾರ ಡಿಸೆಂಬರ್ ಮಾತ್ರವಲ್ಲ ಫೆಬ್ರುವರಿಯಲ್ಲೂ ಆರ್ಬಿಐ ಬಡ್ಡಿದರ ಇಳಿಸದೇ ಹೋಗಬಹುದು ಎಂದಿದೆ. ಇದೇ ವೇಳೆ, ಇಂದು ಗುರುವಾರ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಈ ಡಿಸೆಂಬರ್ನಲ್ಲಿ ಆರ್ಬಿಐ ಬಡ್ಡಿದರ ಇಳಿಕೆ ಮಾಡಲೇಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದರ ಗ್ಲೋಬಲ್ ಲೀಡರ್ಶಿಪ್ ಸಮಿಟ್ ಕಾರ್ಯಕ್ರಮದಲ್ಲಿ ಇಂದು ಗುರುವಾರ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ ಅವರು ಅಕ್ಟೋಬರ್ನಲ್ಲಿ ಹೆಚ್ಚಾಗಿರುವ ಹಣದುಬ್ಬರದ ಬಗ್ಗೆ ಪ್ರತಿಕ್ರಿಯಿಸಿ, ಆ ಏರಿಕೆ ನಿರೀಕ್ಷಿತವೇ ಆಗಿದೆ ಎಂದಿದ್ದಾರೆ.
‘ಆರ್ಬಿಐ ಮಾನಿಟರಿ ಪಾಲಿಸಿ ಕಮಿಟಿ ಕಳೆದ ಬಾರಿ ತಮ್ಮ ಶಿಫಾರಸುಗಳನ್ನು ನೀಡಿದ್ದಾಗ, ಈ ತಿಂಗಳು ಹಣದುಬ್ಬರ ಹೆಚ್ಚಬಹುದು ಎಂದು ಊಹಿಸಿತ್ತು. ಇದೇನೂ ಬ್ರಹ್ಮವಿದ್ಯೆ (ರಾಕೆಟ್ ಸೈನ್ಸ್) ಅಲ್ಲ,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಡಿಮೆ ಆಗಿದೆ ಮಧ್ಯಮ ವರ್ಗದವರ ತೆರಿಗೆ ಪಾವತಿ; ಹೆಚ್ಚು ಆದಾಯದ ಗುಂಪಿನವರಿಂದ ಹೆಚ್ಚು ತೆರಿಗೆ
‘ಅಕ್ಟೋಬರ್ ಹಣದುಬ್ಬರ ದರವೇನೂ ಅಚ್ಚರಿ ಅಲ್ಲ. ಡಿಸೆಂಬರ್ನಲ್ಲೋ ಅಥವಾ ಜನವರಿಯಲ್ಲೋ ಇದು ಮತ್ತೆ ಇಳಿಯುತ್ತದೆ. ಯಾಕೆ ಈ ವ್ಯತ್ಯಯ ಆಗುತ್ತಿದೆ ಅಂತ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ನಮಗಿದೆ. ಬೇಸ್ ಎಫೆಕ್ಟ್ ಏನು, ಯಾವ್ಯಾವ ಅಂಶಗಳು ಪರಿಣಾಮ ಬೀರುತ್ತವೆ, ಹಬ್ಬದ ಬೇಡಿಕೆ ಏನು ಇವೆಲ್ಲವೂ ತಿಳಿಯುತ್ತದೆ,’ ಎಂದು ಪೀಯೂಶ್ ಗೋಯಲ್ ತಿಳಿಸಿದ್ದಾರೆ.
ಕಳೆದ ಹತ್ತು ವರ್ಷದಲ್ಲಿ ಭಾರತದ ಸರಾಸರಿ ಹಣದುಬ್ಬರ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎನ್ನುವ ಸಂಗತಿಯನ್ನು ಪಿಯೂಶ್ ಗೋಯಲ್ ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 6.1ರಷ್ಟಿದೆ. ಇದು ಕಳೆದ 14 ತಿಂಗಳಲ್ಲೇ ಗರಿಷ್ಠ ಹಣದುಬ್ಬರ ಮಟ್ಟವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಮೊದಲ ಬಾರಿಗೆ ಹಣದುಬ್ಬರವು ಆರ್ಬಿಐ ನಿಗದಿ ಮಾಡಿಕೊಂಡಿದ್ದ ಶೇ. 2-6ರ ಶ್ರೇಣಿ ಮಿತಿಗಿಂತ ಹೊರಗೆ ಇದೆ.
ಇದನ್ನೂ ಓದಿ: ಇಸ್ರೋ ವೆಚ್ಚ ಅಪ್ರಯೋಜಕವಾಗಿಲ್ಲ; ಪ್ರತೀ ರುಪಾಯಿಯೂ ಎರಡೂವರೆ ಪಟ್ಟು ಲಾಭ ಕೊಟ್ಟಿದೆ ಎಂತಾರೆ ಎಸ್ ಸೋಮನಾಥ್
ಪಿಯೂಶ್ ಗೋಯಲ್ ಅಭಿಪ್ರಾಯಕ್ಕೆ ಆರ್ಬಿಐ ಗವರ್ನರ್ ಪ್ರತಿಕ್ರಿಯೆ ಇದು…
ಡಿಸೆಂಬರ್ನ ಎಂಪಿಸಿ ಸಭೆಯಲ್ಲಿ ಆರ್ಬಿಐ ಬಡ್ಡಿದರ ಕಡಿಮೆ ಮಾಡಲೇಬೇಕಾಗುತ್ತದೆ ಎನ್ನುವ ಪಿಯೂಶ್ ಗೋಯಲ್ ಹೇಳಿಕೆಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಕ್ರಿಯಿಸಿದ್ದಾರೆ. ‘ಡಿಸೆಂಬರ್ ಪಾಲಿಸಿಯಲ್ಲಿ ರೇಟ್ ಇಳಿಸಬೇಕೋ ಬೇಡವೋ ಎಂಬ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಕಾಯ್ದಿರಿಸಲು ಬಯಸುತ್ತೇನೆ,’ ಎಂದು ಶಕ್ತಿಕಾಂತ್ ದಾಸ್ ರಾಜತಾಂತ್ರಿಕ ರೀತಿಯ ಉತ್ತರ ನೀಡಿದ್ದಾರೆ. ಶಕ್ತಿಕಾಂತ ದಾಸ್ ಕೂಡ ಗ್ಲೋಬಲ್ ಲೀಡರ್ಶಿಪ್ ಸಮಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ