ನವದೆಹಲಿ, ಮಾರ್ಚ್ 18: ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ (Semiconductor Market) ಮುಂದಿನ ನಾಲ್ಕು ವರ್ಷದಲ್ಲಿ ಮೂರು ಪಟ್ಟು ಬೆಳೆಯುವ ನಿರೀಕ್ಷೆ ಇದೆ. 2030ರೊಳಗೆ ಈ ಚಿಪ್ ಉದ್ಯಮ 120 ಬಿಲಿಯನ್ ಡಾಲರ್ನಷ್ಟಾಗಬಹುದು. 2035ರೊಳಗೆ ಇದು ಬರೋಬ್ಬರಿ 300 ಬಿಲಿಯನ್ ಡಾಲರ್ ಮಾರುಕಟ್ಟೆಯಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಟೊಮೋಟಿವ್ ಗ್ರೋತ್, ಡಾಟಾ ಸೆಂಟರ್ ವಿಸ್ತರಣೆ ಇತ್ಯಾದಿ ಬಳಕೆ ಹೆಚ್ಚುವುದರಿಂದ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಗಣನೀಯವಾಗಿ ಹಿಗ್ಗಬಹುದು ಎಂದು ಡುಲಾಯ್ಟ್ (Deloitte) ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಭಾರತದಲ್ಲಿ ಸದ್ಯಕ್ಕೆ ಅದಕ್ಕೆ ಇರುವ ಸೆಮಿಕಂಡಕ್ಟರ್ ಅಗತ್ಯದಲ್ಲಿ ಶೇ. 90ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನತ್ತು ವರ್ಷದೊಳಗೆ ಭಾರತಕ್ಕೆ ಬೇಕಾದ ಸೆಮಿಕಂಡಕ್ಟರ್ ಅಗತ್ಯಗಳಲ್ಲಿ ಶೇ. 60ರಷ್ಟವು ಸ್ಥಳೀಯವಾಗಿ ಪೂರೈಕೆ ಆಗುತ್ತಿರುತ್ತದೆ ಎಂದು ಈ ವರದಿಯಲ್ಲಿ ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: ಫ್ಲೈಟ್ನಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು
ಸದ್ಯ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 2024-25ರ ಹಣಕಾಸು ವರ್ಷದಲ್ಲಿ 45-50 ಬಿಲಿಯನ್ ಡಾಲರ್ನಷ್ಟು ಇದೆ. ಕಳೆದ ಮೂರು ವರ್ಷಗಳಿಂದ ಈ ಉದ್ಯಮದ ಗಾತ್ರ ಶೇ 20ರ ಸಿಎಜಿಆರ್ನಲ್ಲಿ ಬೆಳೆಯುತ್ತಿದೆ ಎಂಬುದನ್ನು ಡುಲಾಯ್ಟ್ ವರದಿಯಲ್ಲಿ ಗಮನಿಸಲಾಗಿದೆ.
‘2035ರೊಳಗೆ ಭಾರತದಲ್ಲಿ 4-5 ಸಿಲಿಕಾನ್ ಫ್ಯಾಬ್ ಘಟಕಗಳು, 8-10 ಕಾಂಪೌಂಡ್ ಫ್ಯಾಬ್ಗಳು, 1-2 ಡಿಸ್ಪ್ಲೇ ಫ್ಯಾಬ್ರಿಕೇಶನ್ಗಳು, ಮತ್ತು 20-25 ಒಸಾಟ್ ಫೆಸಿಲಿಟಿಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಈ ಸ್ಥಳೀಯ ಉತ್ಪಾದನೆಯು ದೇಶದ ಶೇ. 60 ರಷ್ಟು ಸೆಮಿಕಂಡಕ್ಟರ್ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ.
ಮೊಬೈಲ್ ಫೋನ್, ಆಟೊಮೋಟಿವ್, ಕಂಪ್ಯೂಟಿಂಗ್, ಡಾಟಾ ಸೆಂಟರ್ ಇತ್ಯಾದಿ ಸೆಗ್ಮೆಂಟ್ಗಳಿಗೆ ಹೆಚ್ಚಿನ ಸೆಮಿಕಂಡಕ್ಟರ್ ಬೇಕಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ
ಭಾರತದ ಸೆಮಿಕಂಡಕ್ಟರ್ ಮಿಷನ್ನಿಂದಾಗಿ ಈ ಕ್ಷೇತ್ರದಲ್ಲಿ ಮ್ಯಾನುಫ್ಯಾಕ್ಚರಿಂಗ್ಗೆ 19 ಬಿಲಿಯನ್ ಡಾಲರ್ಗೂ ಅಧಿಕ ಮೌಲ್ಯದ ಹೂಡಿಕೆಗಳು ಹರಿದುಬಂದಿವೆ. ಎಂಟು ಒಸಾಟ್, ಒಂದು ಕಾಂಪೌಂಡ್ ಫ್ಯಾಬ್ ಮತ್ತು ಒಂದು ಸೆಮಿಕಂಡಕ್ಟರ್ ಫ್ಯಾಬ್ ಘಟಕ ಸ್ಥಾಪನೆ ಸೇರಿ 10 ಪ್ರಾಜೆಕ್ಟ್ಗಳು ಜಾರಿಗೆ ಬರುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ