
ನವದೆಹಲಿ, ಜುಲೈ 13: ಭಾರತದ ಯುಪಿಐ ಪೇಮೆಂಟ್ ಸಿಸ್ಟಂ (UPI) ಬಗ್ಗೆ ಐಎಂಎಫ್ ಹಾಡಿಹೊಗಳಿದೆ. ಭಾರತದಲ್ಲಿ ಅತ್ಯಂತ ವೇಗದ ಪೇಮೆಂಟ್ ಸಿಸ್ಟಂ ಇದೆ. ಪ್ರಪಂಚದಲ್ಲಿ ಬೇರಾವ ದೇಶದಲ್ಲೂ ಇಷ್ಟು ವೇಗದ ಪಾವತಿ ವ್ಯವಸ್ಥೆ ಇಲ್ಲ. ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಯುಪಿಐ ಗಣನೀಯವಾಗಿ ಬದಲಿಸಿದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.
ಯುಪಿಐ ಎಂದರೆ ಯೂನಿವರ್ಸಲ್ ಪೇಮೆಂಟ್ ಇಂಟರ್ಫೇಸ್. ಹೆಸರೇ ಸೂಚಿಸುವಂತೆ ಇದು ವಿವಿಧ ಪ್ಲಾಟ್ಫಾರ್ಮ್ಗಳಿಗೆ ಇರುವ ಕಾಮನ್ ಇಂಟರ್ಫೇಸ್ ಆಗಿರಬಲ್ಲುದು. ನೀವು ಫೋನ್ ಪೇ ಬಳಸಿ, ಗೂಗಲ್ ಬಳಸಿ, ಪೇಟಿಎಂ ಬಳಸಿ, ಅಥವಾ ವಾಟ್ಸಾಪ್ ಬಳಸಿ, ಯಾವುದೇ ಪ್ಲಾಟ್ಫಾರ್ಮ್ನಲ್ಲೂ ಯುಪಿಐ ಅನ್ನು ಅಳವಡಿಸಬಹುದು. ಇಂಟರ್ ಆಪರಾಬಿಲಿಟಿ ಎನ್ನುವುದೇ ಯುಪಿಐನ ಶಕ್ತಿ. ಭಾರತದ ಮೂಲೆಮೂಲೆಯಲ್ಲೂ ಜನರು ಯುಪಿಐ ಬಳಸುತ್ತಾರೆ. ಹೀಗಾಗಿ, ಭಾರತದ ಡಿಜಿಟಲ್ ಪೇಮೆಂಟ್ ಸಿಸ್ಟಂ ಬಹಳ ವ್ಯಾಪಕವಾಗಿ ಹೋಗಿದೆ.
ಅಮೆರಿಕದಲ್ಲಿ ಪೇಮೆಂಟ್ ಸಿಸ್ಟಂ ವಿವಿಧ ಖಾಸಗಿ ಸಂಸ್ಥೆಗಳ ಸುಪರ್ದಿಯಲ್ಲಿದೆ. ವೆನ್ಮೋ, ಝೆಲ್ಲೆ, ಕ್ಯಾಷ್ ಆ್ಯಪ್, ಆ್ಯಪಲ್ ಪೇ, ಪೇಪಾಲ್ ಮೊದಲಾದ ಆ್ಯಪ್ಗಳಿವೆ. ಇವುಗಳದ್ದು ಬಹಳ ಮುಂದುವರಿದ ಪೇಮೆಂಟ್ ವ್ಯವಸ್ಥೆ ಇದೆ. ಆದರೆ, ಇಂಟರಾಪರಾಬಿಲಿಟಿ ಇಲ್ಲ. ಅಂದರೆ, ಪೇಪಾಲ್ನಲ್ಲಿ ನೀವು ಹಣ ಕಳುಹಿಸಬೇಕೆಂದರೆ, ಸ್ವೀಕರಿಸುವವರೂ ಕೂಡ ಪೇಪಾಲ್ ನೊಂದಾಯಿಸಿಕೊಂಡಿರಬೇಕು.
ಇದನ್ನೂ ಓದಿ: Paytm New Features: ಪೇಟಿಎಂನಿಂದ ಹೊಸ ಐದು ಫೀಚರ್ಸ್ ಅಳವಡಿಕೆ; ನೀವು ಗಮನಿಸಿದ್ದೀರಾ?
ಮತ್ತೊಂದು ಸಂಗತಿ ಎಂದರೆ, ಅಮೆರಿಕದಲ್ಲಿ ಹೆಚ್ಚಿನ ಪೇಮೆಂಟ್ ಪ್ಲಾಟ್ಫಾರ್ಮ್ಗಳಲ್ಲಿ ರಿಯಲ್ ಟೈಮ್ ಪಾವತಿ ಆಗುವುದಿಲ್ಲ. ನೀವು ಹಣ ಕಳುಹಿಸಿದರೆ ಅದು ಅಂತಿಮವಾಗಿ ರವಾನೆಯಾಗಲು ಒಂದೆರಡು ದಿನವೇ ಬೇಕಾದೀತು. ಝೆಲ್ಲೆಯಂತಹ ಕೆಲ ಆ್ಯಪ್ಗಳು ರಿಯಲ್ಟೈಮ್ ಪೇಮೆಂಟ್ ಸೌಲಭ್ಯ ತರುತ್ತಿವೆಯಾದರೂ ಕೆಲ ಬೆಂಬಲಿತ ಬ್ಯಾಂಕುಗಳಿಗೆ ಮಾತ್ರ ಅದು ಸೀಮಿತವಾಗಿದೆ.
ಭಾರತದಲ್ಲಿ ಯುಪಿಐ ಹಣ ಪಾವತಿಗೆ ಶುಲ್ಕ ಇರುವುದಿಲ್ಲ. ಅಮೆರಿಕದಲ್ಲಿ ಕೆಲ ಆ್ಯಪ್ಗಳು ತತ್ಕ್ಷಣಕ್ಕೆ ಹಣ ವರ್ಗಾವಣೆ ಮಾಡಲು ನಿರ್ದಿಷ್ಟ ಶುಲ್ಕ ವಿಧಿಸುತ್ತವೆ.
ಮಾಸ್ಟರ್ ಕಾರ್ಡ್, ವೀಸಾ, ಪೇಪಾಲ್, ದಿ ಕ್ಲಿಯರಿಂಗ್ ಹೌಸ್ ಇತ್ಯಾದಿ ಸಂಸ್ಥೆಗಳು ಅಮೆರಿಕದ ಪೇಮೆಂಟ್ ಸಿಸ್ಟಂ ಅನ್ನು ನಿರ್ವಹಿಸುತ್ತಿವೆ. ಇವುಗಳಿಗೆ ಲಾಭದ ಉದ್ದೇಶ ಪ್ರಧಾನವಾಗಿದೆ. ಭಾರತದ ಯುಪಿಐ ಅನ್ನು ಸರ್ಕಾರ ನಿರ್ವಹಿಸುತ್ತಿದ್ದು, ಅದರ ಬಳಕೆ ಸರ್ವವ್ಯಾಪಿಯಾಗಿದೆ. ಆದರೆ, ಅಮೆರಿಕದಲ್ಲಿ ಎಲ್ಲವೂ ಖಾಸಗಿ ಅಂಕೆಯಲ್ಲಿರುವುದರಿಂದ ಚದುರಿ ಹೋಗಿದೆ.
ಅಲ್ಲಿ ಈಗಲೂ ಕೂಡ ಹೆಚ್ಚಿನ ಡಿಜಿಟಲ್ ಪೇಮೆಂಟ್ ಕ್ರೆಡಿಟ್ ಕಾರ್ಡ್ ಮೂಲಕ ಆಗುತ್ತದೆ.
ಇದನ್ನೂ ಓದಿ: ಕೆರಿಬಿಯನ್ ನಾಡಿಗೂ ಹರಡಿದ ಭಾರತದ ಯುಪಿಐ; ಟ್ರಿನಿಡಾಡ್ ಟೊಬಾಗೊದಲ್ಲಿ ಭೀಮ್ ಆ್ಯಪ್ ಅಳವಡಿಕೆ
ಭಾರತದಲ್ಲಿ ಯುಪಿಐ ಅತ್ಯಂತ ಯಶಸ್ವಿಯಾಗಿರುವುದು ಅದರ ಇಂಟರಾಪರಾಬಿಲಿಟಿ ಸಾಮರ್ಥ್ಯದಿಂದ. ಹಾಗೆಯೇ, ಬಹಳ ಸುಲಭ ಬಳಕೆಯೂ ಇದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಯುಪಿಐಗೆ ಜೋಡಿತವಾಗಿವೆ. ಜನರು ಬಹಳ ಸುಲಭವಾಗಿ ಯುಪಿಐಗೆ ನೊಂದಾಯಿಸಬಹುದು.
ಯುಪಿಐ ಅನ್ನು ಸರ್ಕಾರವೇ ನಿಭಾಯಿಸುತ್ತಿರುವುದರಿಂದ ಜನರಿಗೆ ಶುಲ್ಕದ ತಲೆನೋವು ಇಲ್ಲ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಇನ್ಫ್ರಾಸ್ಟ್ರಕ್ಚರ್ ಮೇಲೆ ಯುಪಿಐ ನೆಲೆ ನಿಂತಿರುವುದರಿಂದ ಸುರಕ್ಷಿತವೂ ಎನಿಸಿದೆ. ಎಲ್ಲವೂ ರಿಯಲ್ ಟೈಮ್ನಲ್ಲಿ ಸೆಟಲ್ಮೆಂಟ್ ಆಗುತ್ತದೆ.
ಭಾರತದ ಯುಪಿಐ ಬಗ್ಗೆ ವಿಶ್ವದ ಅನೇಕ ದೇಶಗಳು ಆಸಕ್ತಿ ತೋರಿವೆ. ಈಗಾಗಲೇ ಎಂಟು ದೇಶಗಳು ಯುಪಿಐ ಅನ್ನು ಅಳವಡಿಸಿಕೊಂಡಿವೆ. ಅಮೆರಿಕದಲ್ಲೂ ಹಲವು ಸೆಲಬ್ರಿಟಿಗಳು ಯುಪಿಐ ಮಾದರಿ ಪೇಮೆಂಟ್ ಸಿಸ್ಟಂ ತಮ್ಮ ದೇಶದಲ್ಲೂ ಬರಬೇಕು ಎಂದು ಒತ್ತಾಯಿಸುತ್ತಿರುವುದು ಉಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Sun, 13 July 25