ಬೆಂಗಳೂರು, ಮಾರ್ಚ್ 18: ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ಫೈಲಿಂಗ್ನಲ್ಲಿ (exchange filing) ಈ ವಿಷಯವನ್ನು ನಮೂದಿಸಿದ್ದಾರೆ. ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿಯ ಮಗ ಏಕಾಗ್ರ ರೋಹನ್ ಮೂರ್ತಿಗೆ (Ekagrah Rohan Murthy) ನಾರಾಯಣಮೂರ್ತಿ ಅವರು ತಮ್ಮ ಪಾಲಿನ 15 ಲಕ್ಷ ಷೇರುಗಳನ್ನು ನೀಡಿದ್ದಾರೆ.
ಇದರೊಂದಿಗೆ ನಾಲ್ಕು ತಿಂಗಳ ಮಗುವಾಗಿರುವ ಏಕಾಗ್ರಃ ಇನ್ಫೋಸಿಸ್ನಲ್ಲಿ ಶೇ. 0.04ರಷ್ಟು ಪಾಲು ಹೊಂದಿದಂತಾಗುತ್ತದೆ. ಈ ಮೂಲಕ ಅತಿ ಕಿರಿಯ ವಯಸ್ಸಿನ ಕೋಟ್ಯಾಧಿಪತಿ ಎಂಬ ದಾಖಲೆ ಈ ಹುಡುಗನ ಹೆಸರಿಗೆ ಬಂದಿರಬಹುದು.
ಇದನ್ನೂ ಓದಿ: ಹಣ ಮಾಡುವ ಆಸೆಯಿಂದ ಉದ್ದಿಮೆ ಸ್ಥಾಪಿಸಿದರೆ ಸೋಲುತ್ತೀರಿ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್
ಇನ್ಫೋಸಿಸ್ನ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಈಗ ಅದರ ಆಡಳಿತ ನಿರ್ವಹಣೆಯಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಅದರ ಪ್ರಮುಖ ಷೇರುಪಾಲುದಾರರಲ್ಲಿ ಒಬ್ಬರಾಗಿದ್ದಾರೆ. ಇನ್ಫೋಸಿಸ್ನಲ್ಲಿ ಮೂರ್ತಿ ಅವರ ಬಳಿ 1.51 ಕೋಟಿ ಷೇರುಗಳಿದ್ದವು. ಈಗ ಮೊಮ್ಮಗನಿಗೆ 15 ಲಕ್ಷ ಷೇರುಗಳನ್ನು ಕೊಟ್ಟ ಬಳಿಕ ಅವರ ಬಳಿ ಉಳಿರುವ ಷೇರುಗಳ ಸಂಖ್ಯೆ 1.36 ಕೋಟಿ ಷೇರುಗಳು ಮಾತ್ರ. ಇನ್ಫೋಸಿಸ್ನಲ್ಲಿ ಅವರು ಹೊಂದಿದ್ದ ಶೇ. 0.40ರಷ್ಟು ಷೇರುಪಾಲು ಶೇ. 0.36ಕ್ಕೆ ಇಳಿದಿದೆ.
ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಇನ್ಫೋಸಿಸ್ನಲ್ಲಿ 0.83ರಷ್ಟು ಷೇರುಪಾಲು ಹೊಂದಿದ್ದಾರೆ. ರಾಜ್ಯಸಭಾ ಸದಸ್ಯೆಯಾಗಿರುವ ಅವರ ಒಟ್ಟು ಷೇರುಸಂಪತ್ತು 5,600 ಕೋಟಿ ರೂ ಆಗಿದೆ. ಈ ದಂಪತಿಯ ಇಬ್ಬರು ಮಕ್ಕಳಾದ ರೋಹನ್ ಮೂರ್ತಿ ಮತ್ತು ಅಕ್ಷತಾ ಮೂರ್ತಿ ಅವರಿಗೆ ಹೆಚ್ಚಿನ ಷೇರುಪಾಲುಗಳಿವೆ.
ಇದನ್ನೂ ಓದಿ: ಅಮೆರಿಕಕ್ಕೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ಗಳ ರಫ್ತು ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಳ; ಭಾರತಕ್ಕೆ 3ನೇ ಸ್ಥಾನ
ಮೂರ್ತಿ ದಂಪತಿಗೆ ಮೂವರು ಮೊಮ್ಮಕ್ಕಳಿದ್ದಾರೆ. ಮಗಳು ಅಕ್ಷತಾ ಮೂರ್ತಿ ಅವರ ಪತಿ ರಿಷಿ ಸುನಕ್ ಬ್ರಿಟನ್ ಪ್ರಧಾನಿ. ಇವರಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಈಗ ರೋಹನ್ ಮೂರ್ತಿ ಮತ್ತು ಪತ್ನಿ ಅಪರ್ಣಾ ಕೃಷ್ಣನ್ ಅವರಿಗೆ ಗಂಡು ಮಗು ಹುಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ