ಬೆಂಗಳೂರು, ಡಿಸೆಂಬರ್ 27: ಅನೈತಿಕ ರೀತಿಯಲ್ಲಿ ಉದ್ಯೋಗಿಗಳನ್ನು ಸೆಳೆಯಲಾಗುತ್ತಿದೆ (Unethical employee poaching) ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಗ್ನೈಜೆಂಟ್ ಟೆಕ್ನಾಲಜೀಸ್ ಸಂಸ್ಥೆಗೆ ಇನ್ಫೋಸಿಸ್ ಪತ್ರ ಬರೆದಿದೆ ಎಂದು ಮನಿ ಕಂಟ್ರೋಲ್ನಲ್ಲಿ ವರದಿಯಾಗಿದೆ. ಇತ್ತೀಚೆಗೆ ಭಾರತದ ಐಟಿ ವಲಯದಲ್ಲಿ ಸೀನಿಯರ್ ಹುದ್ದೆಗಳ ಮಟ್ಟದಲ್ಲಿ ಸಾಕಷ್ಟು ವಲಸೆಗಳಾಗಿದ್ದು ಹೆಚ್ಚಿನ ಬಾರಿ ಕೇಳಿಬಂದಿರುವ ಹೆಸರು ಕಾಗ್ನೈಜೆಂಟ್ನದ್ದೇ. ಅದರಲ್ಲೂ ಇನ್ಫೋಸಿಸ್ ಮತ್ತು ವಿಪ್ರೋದಿಂದ ಹಲವು ಹಿರಿಯ ಅಧಿಕಾರಿಗಳು ಕಾಗ್ನೈಜೆಂಟ್ ಟೆಕ್ನಾಲಜೀಸ್ (Cognizant) ಅನ್ನು ಸೇರಿಕೊಂಡಿದ್ದಾರೆ. ವಿಪ್ರೋ ಸಂಸ್ಥೆ ಕಾಗ್ನೈಜೆಂಟ್ ಸೇರಿದ ತನ್ನ ಇಬ್ಬರು ಮಾಜಿ ಉದ್ಯೋಗಿಗಳ ಮೇಲೆ ಕಾನೂನು ಮೊಕದ್ದಮೆ ಹೂಡಿದೆ. ಇದರ ಬೆನ್ನಲ್ಲೇ ಇನ್ಫೋಸಿಸ್ ತನ್ನ ಪ್ರತಿಸ್ಪರ್ಧಿ ಸಂಸ್ಥೆ ವಿರುದ್ಧ ತಗಾದೆ ವ್ಯಕ್ತಪಡಿಸಿರುವ ಬೆಳವಣಿಗೆ ಆಗಿರುವುದು ಕುತೂಹಲ ಮೂಡಿಸಿದೆ.
ಮನಿ ಕಂಟ್ರೋಲ್ ವರದಿಯಲ್ಲಿ ಮೂರಕ್ಕೂ ಹೆಚ್ಚು ಮೂಲಗಳನ್ನು ಉಲ್ಲೇಖಿಸಿ ಈ ಪ್ರಕರಣದ ಮಾಹಿತಿ ಪಡೆದಿರುವುದಾಗಿ ತಿಳಿಸಿದೆ. ಉನ್ನತ ಸ್ತರದ ಉದ್ಯೋಗಿಗಳ ನೇಮಕಾತಿ ಗುತ್ತಿಗೆಯಲ್ಲಿ, ನಾನ್ ಕಾಂಪೀಟ್ ನಿಯಮ ಅಡಕ ಮಾಡಲಾಗಿರುತ್ತದೆ. ಕೆಲಸ ಬಿಡುವ ಉದ್ಯೋಗಿಯು ಸಂಸ್ಥೆಗೆ ಪ್ರತಿಸ್ಪರ್ಧಿಯಾಗಬಾರದು ಎನ್ನುತ್ತದೆ ಈ ನಿಯಮ. ಆದರೆ, ಈ ಕಾನೂನನ್ನು ಅನ್ವಯ ಮಾಡುವುದು ಅಸಾಧ್ಯ ಎನ್ನಲಾಗಿದೆ. ಆದರೆ, ಮುಂದೆ ಇಂಥ ಅಕ್ರಮ ನೇಮಕಾತಿ ಪ್ರಯತ್ನ ಆಗಬಾರದು ಎಂದು ಕಾಗ್ನೈಜೆಂಟ್ ಸಂಸ್ಥೆಗೆ ಎಚ್ಚರಿಕೆ ಕೊಡುವ ಉದ್ದೇಶದಿಂದ ಇನ್ಪೋಸಿಸ್ ಪತ್ರ ಬರೆದಿರಬಹುದು ಎಂದು ಅಂದಾಜಿಸಲಾಗಿದೆ. ಕೆಲ ವಾರಗಳ ಹಿಂದೆ ಇನ್ಫೋಸಿಸ್ನ ಪತ್ರ ಕಾಗ್ನೈಜೆಂಟ್ಗೆ ತಲುಪಿದೆ. ಆದರೆ, ಕಾಗ್ನೈಜೆಂಟ್ನಿಂದ ಏನು ಸ್ಪಂದನೆ ಸಿಕ್ಕಿದೆ ಎಂಬುದು ಗೊತ್ತಾಗಿಲ್ಲ.
ಇದನ್ನೂ ಓದಿ: Wipro: ಮಾಜಿ ಸಿಎಫ್ಒ ಜತಿನ್ ದಲಾಲ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ ವಿಪ್ರೋ; ಬೆಂಗಳೂರಿನ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆ
ಕುತೂಹಲ ಎಂದರೆ ಇನ್ಫೋಸಿಸ್ನ ಅಧ್ಯಕ್ಷ ಮತ್ತು ಸಿಒಒ ಆಗಿದ್ದ ರವಿಕುಮಾರ್ 2022ರ ಅಕ್ಟೋಬರ್ ತಿಂಗಳಲ್ಲಿ ರಾಜೀನಾಮೆ ನೀಡಿ, ಈ ವರ್ಷ ಜನವರಿಯಲ್ಲಿ ಕಾಗ್ನೈಜೆಂಟ್ಗೆ ಸಿಇಒ ಆಗಿ ಸೇರ್ಪಡೆಯಾಗಿದ್ದಾರೆ. ಆಗಿನಿಂದ ಅವರು 20 ಮಂದಿ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಮತ್ತು ನಾಲ್ವರು ಸೀನಿಯರ್ ವೈಸ್ ಪ್ರೆಸಿಡೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡಿದ್ಧಾರೆ. ಅವರಲ್ಲಿ ಹೆಚ್ಚಿನವರು ಇನ್ಫೋಸಿಸ್ ಮತ್ತು ವಿಪ್ರೋದ ಎಕ್ಸಿಕ್ಯೂಟಿವ್ಗಳೇ ಆಗಿದ್ದಾರೆ.
ವಿಪ್ರೋದ ಸಿಎಫ್ಒ ಆಗಿದ್ದ ಜತಿನ್ ದಲಾಲ್ ಕಾಗ್ನೈಜೆಂಟ್ಗೆ ಸಿಎಫ್ಒ ಆಗಿ ಹೋಗಿದ್ದಾರೆ. ವಿಪ್ರೋದಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿದ್ದ ಮೊಹಮ್ಮದ್ ಹಕ್ ಅವರು ಕಾಗ್ನೈಜೆಂಟ್ಗೆ ಅದೇ ಹುದ್ದೆಗೆ ಹೋಗಿದ್ದಾರೆ. ಈ ಇಬ್ಬರ ಮೇಲೂ ವಿಪ್ರೋ ಕಾನೂನು ಮೊಕದ್ದಮೆ ಹೂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ