Inspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್
23 Year Old Indian Billionaire Sankarsh Chanda: ಹೈದರಾಬಾದ್ನ ಸಂಕರ್ಷ್ ಚಂದ್ ಬಹಳ ಸಣ್ಣ ವಯಸ್ಸಿಗೆ 100 ಕೋಟಿ ರೂ ಸಂಪಾದಿಸುವ ಮೂಲಕ ಜಾಗತಿಕ ಪಟ್ಟಿಗೆ ಸೇರಿದ್ದಾರೆ. 2,000 ರೂನಿಂದ ಆರಂಭವಾದ ಇವರ ಹೂಡಿಕೆ ಇವತ್ತು ಹೆಮ್ಮರವಾಗಿ ಬೆಳೆದು, ದಿಗ್ಗಜರ ಸಾಲಿಗೆ ಇವರನ್ನು ನಿಲ್ಲಿಸಿದೆ.
ಸಂತೃಪ್ತಿ ಜೀವನ, ಸಮೃದ್ಧಿ ಹಣ ಇದು ಪ್ರತಿಯೊಬ್ಬರ ಕನಸು. ಹಣ ಮಾಡುವುದು ಒಂದು ಕಲೆ. ಅದರಲ್ಲೂ ಹೂಡಿಕೆಯ ಕಲೆ ಇನ್ನೂ ವಿಶೇಷವಾದುದು. ನಮ್ಮಲ್ಲಿ ಶೇ. 90ಕ್ಕಿಂತಲೂ ಹೆಚ್ಚು ಮಂದಿ ಇಡೀ ಜೀವನ ದುಡಿದರೂ 1 ಕೋಟಿಗಿಂತ ಹೆಚ್ಚು ಹಣ ಉಳಿಸಲಾರರು. ಕೆಲವೇ ಮಂದಿಗೆ ಮಾತ್ರ ಕೋಟಿ ಕೋಟಿಯಷ್ಟು ಹಣ ಒಲಿದುಬರುತ್ತದೆ. ಷೇರುಪೇಟೆಯಲ್ಲಿ ಇಂತಹವರ ನಿದರ್ಶನದ ಕತೆ ಹಲವುಂಟು. ರಾಕೇಶ್ ಜುಂಜುನವಾಲ, ವಿಜಯ್ ಕೇದಿಯಾ, ಸಿಂಘಾನಿಯಾ ಹೀಗೆ ಹಲವು ಜನರು ಷೇರುಗಳ ಮೇಲಿನ ಹೂಡಿಕೆಗಳಿಂದಲೇ (Share Investments) ಸಾವಿರಾರು ಕೋಟಿ, ಲಕ್ಷಾಂತರ ಕೋಟಿ ರೂ ಒಡೆಯರಾಗಿದ್ದುಂಟು. ಈ ಸಾಲಿನಲ್ಲಿ ಹೈದರಾಬಾದ್ನ 24 ವರ್ಷ ಸಂಕರ್ಷ್ ಚಂದ ಅವರೂ ಇದ್ದಾರೆ. ಅತಿದೊಡ್ಡ ಹೂಡಿಕೆದಾರರ ಪೈಕಿ ಅವರೂ ಒಬ್ಬರೆನಿಸಿದ್ದು ಜಾಗತಿಕವಾಗಿ ಖ್ಯಾತರಾಗಿದ್ದಾರೆ. ಸಂಕರ್ಷ್ ಚಂದ (Sankarsh Chanda) ಅವರು 23ರ ವಯಸ್ಸಿಗೆ 100 ಕೋಟಿ ರೂಗೂ ಹೆಚ್ಚು ಮೊತ್ತದ ಷೇರುಸಂಪತ್ತು ಹೊಂದಿ ಗಮನ ಸೆಳೆದಿದ್ದಾರೆ.
17ನೇ ವಯಸ್ಸಿನಲ್ಲಿ 2,000 ರೂನಿಂದ ಹೂಡಿಕೆ ಪ್ರಯಾಣ ಆರಂಭಿಸಿದ ಸಂಕರ್ಷ್
ಯಾರಾರ ಜೀವನದಲ್ಲಿ ಯಾವ್ಯಾವ ಅಲೆ ಯಾವ ದಿಕ್ಕಿನತ್ತ ಕರೆದೊಯ್ಯುತ್ತದೋ ಯಾರಿಗೂ ಗೊತ್ತಾಗಲ್ಲ. ಅದೇ ವಿಧಿಯಾಟ. ಹೈದರಾಬಾದ್ ಮೂಲದ ಸಂಕರ್ಷ್ ಚಂದ್ ನವದೆಹಲಿ ಬಳಿಯ ನೋಯ್ಡಾದ ಬೆನೆಟ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಎಂಜಿನಿಯರಿಂಗ್ ಓದುತ್ತಿದ್ದ ಕಾಲ ಅದು. ಅತನ ವಯಸ್ಸು ಕೇವಲ 17 ವರ್ಷ. 2,000 ರೂ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಮೊದಲಿಗೆ ಹೂಡಿಕೆ ಮಾಡಿದರು. ಅದಾಗಲೇ ಅವರಿಗೆ ಷೇರುಹೂಡಿಕೆ ಒಂದು ಕನಸಿನ ಉದ್ಯೋಗವಾಗಿತ್ತು. ಬಳಿಕ ಎಂಜಿನಿಯರಿಂಗ್ ಓದಿಗೆ ವಿರಾಮ ಕೊಟ್ಟು ಷೇರು ಹೂಡಿಕೆಯತ್ತಲೇ ಗಮನ ಕೊಡಲು ಅರಂಭಿಸಿದರು.
2,000 ರೂ ಇದ್ದ ಹೂಡಿಕೆ ಮೊತ್ತವನ್ನು 1.5 ಲಕ್ಷಕ್ಕೆ ಏರಿಸಿದರು. ಎರಡು ವರ್ಷದಲ್ಲಿ ಇವರು ಹೂಡಿಕೆ ಮಾಡಿದ್ದ ಷೇರುಗಳು ಅದ್ಭುತವಾಗಿ ಬೆಳೆದು 13ಲಕ್ಷ ರೂ ಬೆಲೆ ಪಡೆದವು. ಹೀಗೆ ಸಂಕರ್ಷ್ ಚಂದ್ ಅವರ ಷೇರುಹೂಡಿಕೆ ಪ್ರಯಾಣ ಸುದೀರ್ಘ ಹಾದಿ ಸವೆಸುತ್ತಾ ಹೋಗುತ್ತಿದೆ. ಹೂಡಿಕೆಗಳ ವಿಸ್ತಾರ ಕೂಡ ಹೆಚ್ಚಾಗಿದೆ.
24 ವರ್ಷದ ಸಂಕರ್ಷ್ ಚಂದ್, ಹೂಡಿಕೆದಾರ ಮಾತ್ರವಲ್ಲ ವ್ಯವಹಾರಸ್ಥನೂ ಹೌದು
ಸಂಕರ್ಷ್ ಚಂದ್ ಕೇವಲ ಷೇರುಪೇಟೆಯಲ್ಲಿ ಮಾತ್ರವೇ ಹೂಡಿಕೆ ಮಾಡಿ ಹಣ ಗಳಿಸುತ್ತಿಲ್ಲ, ಅವರೊಬ್ಬ ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಕೂಡ ಹೌದು. ಸ್ವಬೋಧ ಇನ್ಫಿನಿಟಿ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಎಂಬ ಹೂಡಿಕೆ ಸಲಹಾ ಸಂಸ್ಥೆಯನ್ನು ಹುಟ್ಟುಹಾಕಿರುವ ಮೊದಲ ವರ್ಷದಲ್ಲೇ 12 ಲಕ್ಷ ಆದಾಯ ಪಡೆದಿದ್ದರು. ಎರಡನೇ ವರ್ಷದಲ್ಲಿ 14 ಲಕ್ಷ, ಮೂರನೇ ವರ್ಷದಲ್ಲಿ 32 ಲಕ್ಷ ಹಾಗೂ ನಾಲ್ಕನೇ ವರ್ಷದಲ್ಲಿ (2020-21) 40 ಲಕ್ಷ ರೂ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Wipro Half-Salary: ವಿಪ್ರೋದಲ್ಲಿ ಅರ್ಧಸಂಬಳ; ಕೆಲಸಕ್ಕೆ ಸೇರಿದವರೆಷ್ಟು? ಆಫರ್ ತಿರಸ್ಕರಿಸಿದವರೆಷ್ಟು?
ಸಂಕರ್ಷ್ಗೆ ಸ್ಫೂರ್ತಿ ಕೊಟ್ಟವರು ಯಾರು?
ಸಂಕರ್ಷ್ ಚಂದ್ ಅವರಿಗೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಮತ್ತು ಸ್ವಂತ ವ್ಯವಹಾರ ಆರಂಭಿಸಲು ಪ್ರೇರಣೆಯಾಗಿದ್ದ ಅಮೆರಿಕನ್ ಆರ್ಥಿಕ ತಜ್ಞ ಬೆಂಜಮಿನ್ ಗ್ರಹಾಂ. ಈ ಅಮೆರಿಕನ್ ವ್ಯಕ್ತಿ ಬರೆದ ಪ್ರಬಂಧವೊಂದನ್ನು ಓದಿದ ಬಳಿಕ ಸಂಕರ್ಷ್ಗೆ ಷೇರು ಮಾರುಕಟ್ಟೆ ಮೇಲೆ ಆಸಕ್ತಿ ಶುರುವಾಯಿತಂತೆ.
ಷೇರು ಹೂಡಿಕೆ ಮತ್ತು ಹಣದ ಬಗ್ಗೆ ಯಾರಿಗಾದರೂ ಆಸಕ್ತಿ ಇದ್ದರೆ ಅವರಿಗೆ ಸಂಕರ್ಷ್ ಚಂದ್ 3 ಪುಸ್ತಕಗಳನ್ನು ಓದುವಂತೆ ಶಿಫಾರಸು ಮಾಡುತ್ತಾರೆ. ‘ದಿ ಇಂಟೆಲಿಜೆಂಟ್ ಇನ್ವೆಸ್ಟರ್’, ‘ಸೆಕ್ಯೂರಿಟಿ ಅನಾಲಿಸಿಸ್’ ಮತ್ತು ‘ದಿ ಫಸ್ಟ್ ಥ್ರೀ ಮಿನುಟ್ಸ್ ಆಫ್ ದಿ ಯೂನಿವರ್ಸ್’– ಇವೇ ಆ 3 ಪುಸ್ತಕಗಳು.
ಸಂಕರ್ಷ್ ಚಂದ್ ಕೇವಲ ಹೂಡಿಕೆ ಮತ್ತು ವ್ಯವಹಾರಕ್ಕೆ ಸೀಮಿತರಾದವರಲ್ಲ. 2016ರಲ್ಲೇ ಪುಸ್ತಕವೊಂದನ್ನು ಬರೆದ ಅಸಾಮಾನ್ಯ ಪ್ರತಿಭೆ ಆತ. ‘ಫೈನಾನ್ಷಿಯಲ್ ನಿರ್ವಾಣ’ ಎಂಬುದು ಅವರು ಬರೆದ ಪುಸ್ತಕ. ಹೂಡಿಕೆ ಮತ್ತು ಬ್ಯುಸಿನೆಸ್ ಎರಡೂ ಬೇರೆ ಎಂದು ತೋರಿಸಿಕೊಡುವ ಹಲವು ಹಣಕಾಸು ವಿಚಾರಗಳನ್ನು ಒಳಗೊಂಡಿರುವ ಪುಸ್ತಕ ಅದು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Mon, 1 May 23