
ನವದೆಹಲಿ, ಜುಲೈ 25: ಅಮೆರಿಕದ ಚಿಪ್ ತಯಾರಕ ಸಂಸ್ಥೆಯಾದ ಇಂಟೆಲ್ ಕಾರ್ಪೊರೇಶನ್ (Intel Corp) ತನ್ನ ಉದ್ಯೋಗಿಗಳ ಸಂಖ್ಯೆ ಮೊಟುಕುಗೊಳಿಸಿದೆ. ವರದಿಗಳ ಪ್ರಕಾರ 24,500 ಉದ್ಯೋಗಿಗಳನ್ನು ಲೇ ಆಫ್ (Layoff) ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿದೆ. ಒಂದು ಲಕ್ಷ ಸಮೀಪದಷ್ಟು ಇರುವ ಉದ್ಯೋಗಿಗಳ ಸಂಖ್ಯೆ 75,000ಕ್ಕೆ ಇಳಿದಿರಬಹುದು. ತನ್ನ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಹೊರತುಪಡಿಸಿ, ಕಂಪನಿಯಲ್ಲಿ ಈ ವರ್ಷಾಂತ್ಯದಲ್ಲಿ 75,000 ಮುಖ್ಯ ಉದ್ಯೋಗಿಗಳನ್ನು ಹೊಂದಿರುವುದು ಗುರಿ ಎಂದು ಅದರ ಸಿಇಒ ಲಿಪ್ ಬು ಟಾನ್ ಹೇಳಿದ್ದರು.
ಒಂದು ಕಾಲದಲ್ಲಿ ಚಿಪ್ ಸಾಮ್ರಾಜ್ಯದ ಅನಿಭಿಷಿಕ್ತ ದೊರೆ ಎನಿಸಿದ್ದ ಇಂಟೆಲ್ ಕಂಪನಿ ಈಗ ಚಿಪ್ ರೇಸ್ನಲ್ಲಿ ಮಂಕಾಗಿದೆ. ಎನ್ವಿಡಿಯಾ ಮುಂಚೂಣಿಯಲ್ಲಿದೆ. ಇಂಟೆಲ್ ಈಗ ಅಸ್ತಿತ್ವ ಉಳಿಸಿಕೊಳ್ಳುವ ಹತಾಶೆಯಲ್ಲಿದೆ.
ಇದನ್ನೂ ಓದಿ: ಬೇರೆ ಕಂಪನಿಗಳಿಗೆ ಹೋಲಿಸಿದರೆ ನನ್ನ ತಂಡದಲ್ಲೇ ಹೆಚ್ಚು ಬಿಲಿಯನೇರ್ಗಳಿದ್ದಾರೆ: ಎನ್ವಿಡಿಯಾ ಸಿಇಒ ಹೇಳಿಕೆ
1968ರಲ್ಲಿ ಸ್ಥಾಪನೆಯಾದ ಇಂಟೆಲ್ ಕಂಪನಿ ನಾಲ್ಕು ದಶಕಗಳ ಕಾಲ ಮುಂಚೂಣಿಯಲ್ಲಿತ್ತು. ಆ್ಯಪಲ್ ಫೋನ್ ಬಂದ ಬಳಿಕ ಚಿಪ್ ತಂತ್ರಜ್ಞಾನದ ಸ್ವರೂಪ ಬದಲಾಗುತ್ತಾ ಹೋಯಿತು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರವರ್ಧಮಾನಕ್ಕೆ ಬಂದಿತು. ಈ ತಂತ್ರಜ್ಞಾನ ಬದಲಾವಣೆಗೆ ಇಂಟೆಲ್ ತೆರೆದುಕೊಳ್ಳಲಿಲ್ಲ. ಇದುವೇ ಅದರ ಪತನಕ್ಕೆ ಕಾರಣವಾಯಿತು.
ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಇಂಟೆಲ್ ಆದಾಯ 12.9 ಬಿಲಿಯನ್ ಡಾಲರ್ಗೆ ಸೀಮಿತವಾಗಿದೆ. ಅದರಲ್ಲಿ ಬರೋಬ್ಬರಿ 2.9 ಬಿಲಿಯನ್ ಡಾಲರ್ನಷ್ಟು ನಷ್ಟವಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಅದು 1.6 ಬಿಲಿಯನ್ ಡಾಲರ್ನಷ್ಟು ನಷ್ಟ ಕಂಡಿತ್ತು.
ಈ ನಷ್ಟದ ಕುಣಿಕೆಯಿಂದ ಹೊರಬರಲು ಇಂಟೆಲ್ ಕಂಪನಿ ತನ್ನ ವಿವಿಧ ವೆಚ್ಚಗಳಿಗೆ ಕಡಿವಾಣ ಹಾಕುತ್ತಿದೆ. ಅದರಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದೂ ಇದೆ. ಪ್ರತಿಯೊಬ್ಬ ಉದ್ಯೋಗಿ ಬಗ್ಗೆ ನಿಗಾ ಇರಿಸುತ್ತಿದೆ. ಪ್ರತಿಯೊಂದು ವೆಚ್ಚವೂ ಆರ್ಥಿಕವಾಗಿ ಲಾಭ ತರುವಂತಿರಬೇಕು ಎಂಬುದು ಇಂಟೆಲ್ ಸಿಇಒ ಹೇಳಿದ್ದು.
ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್ಲೈನ್ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ
ಜರ್ಮನಿ ಮತ್ತು ಪೋಲ್ಯಾಂಡ್ನಲ್ಲಿ ಪ್ಲಾನ್ ಮಾಡಿದ್ದ ಯೋಜನೆಗಳನ್ನು ಇಂಟೆಲ್ ಕೈಬಿಟ್ಟಿದೆ. ಕೋಸ್ಟಾ ರಿಕಾದಲ್ಲಿದ್ದ ಅಸೆಂಬ್ಲಿ ಮತ್ತು ಟೆಸ್ಟ್ ಆಪರೇಶನ್ಗಳನ್ನು ವಿಯೆಟ್ನಾಂ ಮತ್ತು ಮಲೇಷ್ಯಾದಲ್ಲಿರುವಂತಹ ತನ್ನ ದೊಡ್ಡ ಘಟಕಗಳಿಗೆ ವರ್ಗಾಯಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Fri, 25 July 25