ಯಾವುದೇ ಸ್ಟಾಕ್ ಮೌಲ್ಯವನ್ನು ತಿಳಿಯಬೇಕು ಅಂದರೆ ಷೇರು ಮಾರುಕಟ್ಟೆ ಹೂಡಿಕೆದಾರರು ಉದ್ಯಮದ ಮೌಲ್ಯವನ್ನು ತಿಳಿಯಬೇಕು. ಷೇರಿನಲ್ಲಿ ಹೂಡಿಕೆ ಮಾಡುವುದೆಂದರೆ ವ್ಯವಹಾರ ಅಥವಾ ಉದ್ಯಮದಲ್ಲಿ ಹೂಡಿಕೆ ಮಾಡಿದಂತೆಯೇ. ಆದ್ದರಿಂದ ಆ ವ್ಯವಹಾರದ ಮಾಡೆಲ್ ಹಾಗೂ ಲಾಭದ ಸುಸ್ಥಿರತೆ ಬಗ್ಗೆ ಮನಸ್ಸಿಗೆ ಒಪ್ಪುವಂತೆ ಸನ್ನಿವೇಶ ಇರುವ ತನಕ ಅದರಲ್ಲಿ ಮುಂದುವರಿಯಬೇಕು. ದೊಡ್ಡ ಮಟ್ಟದ ರಿಟರ್ನ್ ಬೇಕು ಎಂದಾದಲ್ಲಿ ತಾಳ್ಮೆ ಇರಬೇಕಾದದ್ದು ಸಹ ಅಷ್ಟೇ ಮುಖ್ಯ. ದೀರ್ಘಾವಧಿ ಹೂಡಿಕೆ ಹೇಗೆ ಲಾಭ ಮಾಡಿಕೊಡಬಹುದು ಎಂಬುದಕ್ಕೆ ರಾಜ್‌ರತನ್ ಗ್ಲೋಬಲ್ ವೈರ್ ಷೇರಿನ ಬೆಲೆಯ ಇತಿಹಾಸವನ್ನು ಬಿಎಸ್‌ಇಯಲ್ಲಿ ಗಮನಿಸಬೇಕು. ಇದು 2021ನೇ ಇಸವಿಯ ಮಲ್ಟಿಬ್ಯಾಗರ್ ಸ್ಟಾಕ್ಗಳಲ್ಲಿ (Multibagger Stock) ಒಂದು. 39.11 ರೂಪಾಯಿಯಿಂದ (2015ರ ಜನವರಿ 30ರಲ್ಲಿ ಬಿಎಸ್ಇ ಮುಕ್ತಾಯದ ಬೆಲೆ) 2620.45 ರೂಪಾಯಿಗೆ (2022ರ ಜನವರಿ 28ರ ಬಿಎಸ್ಇ ಮುಕ್ತಾಯದ ಬೆಲೆ) ಏರಿಕೆ ಆಗಿದ್ದು, ಈ ಏಳು ವರ್ಷಗಳಲ್ಲಿ ಶೇ 6600ರಷ್ಟು ಏರಿಕೆ ಕಂಡಿದೆ.
ರಾಜ್‌ರತನ್ ಗ್ಲೋಬಲ್ ವೈರ್
ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ 2027 ರೂಪಾಯಿಯಿಂದ 2620.45 ರೂಪಾಯಿಗೆ ಮುಟ್ಟಿದೆ. ಹತ್ತಿರ ಹತ್ತಿರ ಈ ಅವಧಿಯಲ್ಲಿ ಶೇ 30ರಷ್ಟು ಮೇಲೇರಿದೆ. ಕಳೆದ 6 ತಿಂಗಳಲ್ಲಿ ಈಷೇರು 2252ರಿಂದ 2620ಕ್ಕೆ ತಲುಪಿದ್ದು, ಈ ಅವಧಿಯಲ್ಲಿ ಶೇ 16ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ವರ್ಷದಲ್ಲಿ ಇದರ ಷೇರುದಾರರು ಶೇ 375 ರಿಟರ್ನ್ ಪಡೆದಿದ್ದಾರೆ. ಅದೇ ರೀತಿ ಕಳೆದ 5 ವರ್ಷದಲ್ಲಿ ಈ ಸ್ಟಾಕ್ 263.79 ರೂಪಾಯಿಯಿಂದ 2620.45 ರೂಪಾಯಿಗೆ ಮೇಲೇರಿ, ಶೇ 900ರಷ್ಟು ರಿಟರ್ನ್ ನೀಡಿದೆ. ಇನ್ನು 7 ವರ್ಷದ ಹಿಂದೆ ಪ್ರತಿ ಷೇರಿಗೆ ರೂ. 39.11ರಷ್ಟಿದ್ದ ಷೇರು 2620.45ಕ್ಕೆ ತಲುಪಿ, ಶೇ 6600ರಷ್ಟು ಹೆಚ್ಚಳ ಆಗಿದೆ.
ಹೂಡಿಕೆದಾರರ ಮೇಲೆ ಪ್ರಭಾವ
ರಾಜ್‌ರತನ್ ಗ್ಲೋಬಲ್ ವೈರ್ ಷೇರಿನ ಬೆಲೆ ಇತಿಹಾಸವನ್ನು ಗಮನಿಸಿದರೆ, ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಅದೀಗ 1.30 ಲಕ್ಷ ರೂಪಾಯಿ ಆಗಿರುತ್ತಿತ್ತು. ಇನ್ನು 6 ತಿಂಗಳ ಹಿಂದೆ ಅದೇ ಮೊತ್ತ ಹೂಡಿದ್ದಲ್ಲಿ 1.16 ಲಕ್ಷ ರೂಪಾಯಿ ತಲುಪಿರುತ್ತಿತ್ತು. ಒಂದು ವರ್ಷದ ಹಿಂದೆ ಏನಾದರೂ 1 ಲಕ್ಷದ ಮೊತ್ತ ಹೂಡಿದ್ದಲ್ಲಿ ಇದೀಗ 4.75 ಲಕ್ಷ ರೂಪಾಯಿ ಮುಟ್ಟಿರುತ್ತಿತ್ತು. ಇದೇ ರೀತಿ, 1 ಲಕ್ಷ ರೂಪಾಯಿಯನ್ನು ರಾಜ್‌ರತನ್ ಗ್ಲೋಬಲ್ ವೈರ್ನಲ್ಲಿ ಐದು ವರ್ಷದ ಹಿಂದೆ ಹೂಡಿಕೆ ಮಾಡಿದ್ದಲ್ಲಿ ಆ ಮೊತ್ತವು ಈಗ 10 ಲಕ್ಷ ಆಗಿರುತ್ತಿತ್ತು. ಏಳು ವರ್ಷದ ಹಿಂದೆ ಇಷ್ಟೇ ಮೊತ್ತದ ಹೂಡಿಕೆ ಮಾಡಿದ್ದರೆ ಇವತ್ತಿಗೆ 67 ಲಕ್ಷ ರೂಪಾಯಿ ತಲುಪಿರುತ್ತಿತ್ತು.
ರಾಜ್‌ರತನ್ ಗ್ಲೋಬಲ್ ವೈರ್ ಬಗ್ಗೆ ಇನ್ನಷ್ಟು
ಈ ಮಲ್ಟಿಬ್ಯಾಗರ್ ಮಿಡ್ ಕ್ಯಾಪ್ ಸ್ಟಾಕ್ ರೂ. 2,660 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ರಾಜ್‌ರತನ್ ಗ್ಲೋಬಲ್ ವೈರ್ ಷೇರುಗಳ 52 ವಾರದ ಗರಿಷ್ಠ ಮೊತ್ತವು ರೂ. 3,055.55 ಆಗಿದ್ದರೆ, ಅದರ 52 ವಾರಗಳ ಕನಿಷ್ಠ ಮೌಲ್ಯವು ಬಿಎಸ್‌ಇಯಲ್ಲಿ ರೂ. 503.55 ಆಗಿದೆ. ಸ್ಟಾಕ್‌ನ ಪ್ರಸ್ತುತ PE ಅನುಪಾತವು 24ಕ್ಕಿಂತ ಕಡಿಮೆಯಾಗಿದೆ. ಇದು ಸುಮಾರು 21.43ರ ವಲಯದ PEಗಿಂತ ಹೆಚ್ಚಾಗಿದೆ. ಕಂಪೆನಿಯ ಪ್ರತಿ ಷೇರಿನ ಬುಕ್ ವ್ಯಾಲ್ಯೂ ರೂ. 170.84 ಮತ್ತು ಅದರ ಲಾಭಾಂಶ ಇಳುವರಿ (Dividend Yield) 0.31 ಆಗಿದೆ. ರಾಜರತನ್ ಗ್ಲೋಬಲ್ ವೈರ್ ಷೇರುಗಳ ವ್ಯಾಪಾರದ ಪ್ರಮಾಣವು 5,670 ಆಗಿದ್ದು, ಇದು ಅದರ 20 ದಿನಗಳ ಸರಾಸರಿ ವ್ಯಾಪಾರದ ಪ್ರಮಾಣ 3,247ಕ್ಕಿಂತ ಹೆಚ್ಚು.
ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ