ನ್ಯೂಯಾರ್ಕ್, ಅಕ್ಟೋಬರ್ 16: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ (Israel Hamas Conflict) ಯಾವಾಗ ಬೇಕಾದರೂ ಪೂರ್ಣಪ್ರಮಾಣದ ಯುದ್ದಕ್ಕೆ ಪರಿವರ್ತನೆಯಾಗಬಹುದು ಎಂಬ ಭಯದ ಮಧ್ಯೆ ತೈಲ ಬೆಲೆಯಲ್ಲಿ ವ್ಯತ್ಯಯಗಳಾಗುತ್ತಿವೆ. ಕಳೆದ ವಾರಾಂತ್ಯದಲ್ಲಿ ಶೇ. 6ಕ್ಕೂ ಹೆಚ್ಚು ಏರಿಕೆ ಕಂಡಿದ್ದ ತೈಲ ಬೆಲೆ (oil prices) ಇಂದು (ಅ. 16) ತುಸು ಇಳಿಕೆ ಕಂಡು ಅಚ್ಚರಿ ಮೂಡಿಸಿದೆ. ಆದರೆ, ಈ ಇಳಿಕೆ ಕೇವಲ ತಾತ್ಕಾಲಿಕ ಮಾತ್ರ. ಇಸ್ರೇಲ್ ಹಮಾಸ್ ಸಂಘರ್ಷವು ಪೂರ್ಣಪ್ರಮಾಣದ ಯುದ್ಧವಾಗಿ ತಿರುಗುವವರೆಗೂ ಮತ್ತು ಬೇರೆ ದೇಶಗಳೂ ಕೂಡ ಈ ಸಂಘರ್ಷದಲ್ಲಿ ಪಾಲ್ಗೊಳ್ಳುವವರೆಗೂ ತೈಲದ ಮೇಲಿನ ಹೂಡಿಕೆದಾರರು ಕಾದುನೋಡಲು ನಿರ್ಧರಿಸಿರುವುದು ಬೆಲೆ ಇಳಿಕೆಗೆ ಕಾರಣವಾಗಿರಬಹುದು. ಒಂದು ವೇಳೆ, ಯುದ್ಧ ಸಂಭವಿಸಿದಲ್ಲಿ ತೈಲ ಬೆಲೆ ಭರ್ಜರಿಯಾಗಿ ಏರಿಕೆಯಾಗುವ ಎಲ್ಲಾ ಸಾಧ್ಯತೆ ಇದೆ.
ಇಂದು ಸೋಮವಾರ ಬ್ರೆಂಟ್ ಫ್ಯೂಚರ್ಸ್ ಒಂದು ಬ್ಯಾರಲ್ಗೆ ಶೇ. 0.4ರಷ್ಟು ಇಳಿದು 90.55 ಡಾಲರ್ ಬೆಲೆ ತಲುಪಿದೆ. ಇನ್ನು, ಡಬ್ಲ್ಯುಟಿಐ ಕ್ರೂಡ್ ಇಂಡೆಕ್ಸ್ ಶೇ. 0.5ರಷ್ಟು ಇಳಿದು ಒಂದು ಬ್ಯಾರಲ್ಗೆ 87.28 ಡಾಲರ್ ಬೆಲೆ ಮುಟ್ಟಿದೆ.
ಕಳೆದ ವಾರ ಈ ಎರಡೂ ಬೆಂಚ್ಮಾರ್ಕ್ಗಳು ಸರಾಸರಿಯಾಗಿ ಶೇ. 6ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದವು. ಬ್ರೆಂಟ್ ಫ್ಯೂಚರ್ಸ್ ಬೆಂಚ್ಮಾರ್ಕ್ ಬರೋಬ್ಬರಿ ಶೇ. 7.5ರಷ್ಟು ಹೆಚ್ಚಳ ಕಂಡಿತ್ತು. ಇನ್ನು ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ಕ್ರೂಡ್ ಶೇ. 5.9ರಷ್ಟು ಹೆಚ್ಚಾಗಿತ್ತು.
ಇದನ್ನೂ ಓದಿ: ಹಮಾಸ್ ಉಗ್ರರು ಇಸ್ರೇಲ್ನಲ್ಲಿ ಮನೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ವಿಡಿಯೋ ವೈರಲ್
ಈಗ ಸೋಮಾರ ತೈಲ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆಯಾದರೂ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಉಗ್ರ ಸ್ವರೂಪದಲ್ಲಿ ದಾಳಿ ಮಾಡಿದ್ದೇ ಆದಲ್ಲಿ ತೈಲ ಬೆಲೆ ಬ್ಯಾರಲ್ಗೆ 100 ಡಾಲರ್ಗಿಂತ ಹೆಚ್ಚು ಬೆಲೆಗೆ ಏರಬಹುದು ಎಂದು ಅದಾಜು ಮಾಡಲಾಗಿದೆ.
ಕಳೆದ ವರ್ಷ ಆರಂಭಗೊಂಡ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ಬಿಕ್ಕಟ್ಟು ಇನ್ನೂ ಮುಂದುವರಿಯುತ್ತಿದೆ. ಕೋವಿಡ್ ಬಳಿಕ ಆ ಯುದ್ಧವು ಜಾಗತಿಕವಾಗಿ ಆರ್ಥಿಕ ಹಿನ್ನಡೆ ಸೃಷ್ಟಿ ಮಾಡುತ್ತಿದೆ. ಇದರ ಮಧ್ಯೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಜಾಗತಿಕ ಚೇತರಿಕೆಗೆ ಹಿನ್ನಡೆ ತರುವ ಅಪಾಯ ಇದೆ.
ಇಸ್ರೇಲ್ನಿಂದ ಪ್ಯಾಲಸ್ಟೀನ್ ಅನ್ನು ಮುಕ್ತಗೊಳಿಸಬೇಕೆಂದು ಹೋರಾಡುತ್ತಿರುವ ಹಮಾಸ್ ಸಂಘಟನೆ ಎರಡು ವಾರಕ್ಕೂ ಹಿಂದೆ ಇಸ್ರೇಲ್ನ ವಿವಿಧ ಪ್ರದೇಶಗಳ ಮೇಲೆ ಸಾವಿರಾರು ಕ್ಷಿಪಣಿಗಳನ್ನು ಹಾರಿಸಿ ದಾಳಿ ಮಾಡಿತ್ತು. ಉಗ್ರರು ಇಸ್ರೇಲ್ ಗಡಿಭಾಗದ ಪ್ರದೇಶಗಳಲ್ಲಿ ನುಗ್ಗಿ ನಾಗರಿಕರನ್ನು ಸಂಹರಿಸುವ ಕೆಲಸವನ್ನೂ ಮಾಡಿದ್ದರು. ಇಸ್ರೇಲ್ ಕೂಡ ಪ್ರತಿದಾಳಿ ಮಾಡುತ್ತಿದೆ.
ಇದನ್ನೂ ಓದಿ: ಗಾಜಾ ಪ್ರದೇಶವನ್ನು ಖಾಲಿ ಮಾಡಲು ಇಸ್ರೇಲ್ ಕೊಟ್ಟಿದ್ದ ಗಡುವು ಮುಗಿಯುತ್ತಿದ್ದಂತೆ 10 ಲಕ್ಷ ಮಂದಿ ವಲಸೆ
ಹಮಾಸ್ ಉಗ್ರರು ನೆಲಸಿರುವ ಗಾಜಾ ಪ್ರದೇಶದ ಮೇಲೆ ಆಕ್ರಮಣ ಮಾಡಲು ಇಸ್ರೇಲ್ ಸಜ್ಜಾಗಿದೆ. ಸ್ಥಳ ತೆರವುಗೊಳಿಸುವಂತೆ ಅಲ್ಲಿನ ನಿವಾಸಿಗಳಿಗೆ ಇಸ್ರೇಲ್ ಮಿಲಿಟರಿ ಕೊಟ್ಟಿದ್ದ ಗಡುವು ಮುಗಿದಿದೆ. ಸುಮಾರು 23 ಲಕ್ಷ ಜನಸಂಖ್ಯೆ ಇರುವ ಗಾಜಾದಿಂದ 10 ಲಕ್ಷ ಜನರು ಹೊರಬಿದ್ದಿದ್ದಾರೆ. ಇನ್ನೂ 10 ಲಕ್ಷಕ್ಕೂ ಹೆಚ್ಚು ಜನರು ಅಲ್ಲಿದ್ದಾರೆ. ಕೊಟ್ಟ ಗಡುವು ಮುಗಿದಿದ್ದರಿಂದ ಇಸ್ರೇಲ್ ಪೂರ್ಣಪ್ರಮಾಣದಲ್ಲಿ ಗಾಜಾ ಪಟ್ಟಿ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇಲ್ಲದಿಲ್ಲ. ಹಾಗೇನಾದರೂ ಸಂಭವಿಸಿ ನಾಗರಿಕರಿಗೆ ಸಾಕಷ್ಟು ಸಾವುನೋವುಗಳಾದರೆ ಅಕ್ಕಪ್ಪದ ಅರಬ್ ದೇಶಗಳು ಹಮಾಸ್ ಪರ ನಿಲ್ಲುವ ಸಾಧ್ಯತೆಯೂ ಇಲ್ಲದಿಲ್ಲ.
ಇರಾನ್, ಕತಾರ್, ಸೌದಿ ಅರೇಬಿಯಾ ಮೊದಲಾದ ದೇಶಗಳು ಹಮಾಸ್ಗೆ ಬೆಂಬಲ ನೀಡಿವೆ. ರಷ್ಯಾ ಕೂಡ ಹಮಾಸ್ ಪರವಾಗಿದೆ. ಇತ್ತ ಅಮೆರಿಕ ಮತ್ತತರ ಮಿತ್ರಪಡೆಗಳು ಇಸ್ರೇಲ್ಗೆ ಬೆಂಬಲ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಹಮಾಸ್ ಸಂಘರ್ಷ ವ್ಯಾಪಕ ಯುದ್ಧಕ್ಕೆ ನಾಂದಿಯಾದರೂ ಅಚ್ಚರಿ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ