CEOs’ Salary: ಐಟಿ ಕಂಪನಿ ಸಿಇಒಗಳ ವೇತನದಲ್ಲಿ ಬರೋಬ್ಬರಿ ಹೆಚ್ಚಳ; ಹೊಸಬರಿಗಿಲ್ಲ ಹೆಚ್ಚು ಸಂಬಳದ ಸೌಭಾಗ್ಯ
ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡು ಸಿಇಒಗಳ ಮತ್ತು ಹೊಸದಾಗಿ ಕೆಲಸಕ್ಕೆ ಸೇರುವ ಐಟಿ ಉದ್ಯೋಗಿಗಳ ವೇತನ ಹೆಚ್ಚಳದ ನಡುವಣ ವ್ಯತ್ಯಾಸವನ್ನು ವಿಶ್ಲೇಷಿಸಲಾಗಿದೆ.
ಬೆಂಗಳೂರು: ಜಾಗತಿಕ ಮಟ್ಟದ ಐಟಿ ಕ್ಷೇತ್ರದ ಕಂಪನಿಗಳಲ್ಲಿ ಕಳೆದ 10 ವರ್ಷಗಳಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (CEOs) ವೇತನದಲ್ಲಿ ಬರೋಬ್ಬರಿ ಶೇಕಡಾ 1,492.27ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವ ಐಟಿ ಉದ್ಯೋಗಿಗಳ (IT Employees) ವೇತನದ (Salary) ಪ್ರಮಾಣದಲ್ಲಿ ಶೇಕಡಾ 46.94ರಷ್ಟು ಮಾತ್ರವೇ ಹೆಚ್ಚಳವಾಗಿದೆ. ಹೊಸದಾಗಿ ಕೆಲಸಕ್ಕೆ ಸೇರುವ ಐಟಿ ಉದ್ಯೋಗಿಗಳ ವೇತನ ಹೆಚ್ಚಳದ ಪ್ರಮಾಣ ಕುಂಠಿತವಾಗಿದೆ ಎಂದು ‘ಬ್ಯುಸಿನೆಸ್ ಟುಡೇ’ ವಿಶ್ಲೇಷಣಾತ್ಮಕ ವರದಿ ಮಾಡಿದೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡು ಸಿಇಒಗಳ ಮತ್ತು ಹೊಸದಾಗಿ ಕೆಲಸಕ್ಕೆ ಸೇರುವ ಐಟಿ ಉದ್ಯೋಗಿಗಳ ವೇತನ ಹೆಚ್ಚಳದ ನಡುವಣ ವ್ಯತ್ಯಾಸವನ್ನು ವಿಶ್ಲೇಷಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಭಾರತದಲ್ಲೂ ಸಿಇಒಗಳ ವೇತನ ಭಾರೀ ಹೆಚ್ಚಳ
ಭಾರತದಲ್ಲಿ ಸಿಇಒಗಳ ವೇತನ ಪ್ರಮಾಣದಲ್ಲಿ 10 ವರ್ಷಗಳಲ್ಲಿ ಶೇಕಡಾ 1,449.02ರಷ್ಟು ಹೆಚ್ಚಳವಾದರೆ, ಹೊಸದಾಗಿ ಕೆಲಸಕ್ಕೆ ಸೇರುವವರ ವೇತನ ಪ್ರಮಾಣದಲ್ಲಿ ಶೇಕಡಾ 40ರಷ್ಟು ಮಾತ್ರವೇ ಹೆಚ್ಚಳವಾಗಿದೆ ಎಂದು ವಿಶ್ಲೇಷಣೆ ತಿಳಿಸಿದೆ. ಹೊಸದಾಗಿ ಉದ್ಯೋಗಕ್ಕೆ ಸೇರುವವರ ಪರಿಹಾರದಲ್ಲಿ ಹೆಚ್ಚಳವಾಗಿಲ್ಲ. 10 – 12 ವರ್ಷಗಳ ಹಿಂದಿನ ಮಟ್ಟದಲ್ಲೇ 3.5ರಿಂದ 4 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ. ಇದೇ ಅವಧಿಯಲ್ಲಿ ಮ್ಯಾನೇಜರ್ಗಳ, ಸೀನಿಯರ್ ಮ್ಯಾನೇಜರ್ಗಳ ವೇತನದಲ್ಲಿ 4, 5, 7 ಪಟ್ಟು ಹೆಚ್ಚಳವಾಗಿದೆ ಎಂದು ಇನ್ಫೋಸಿಸ್ ಮಂಡಳಿಯ ಮಾಜಿ ಸದಸ್ಯ, ಮಾಜಿ ಸಿಎಫ್ಒ ಟಿ.ವಿ. ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.
‘ವೇತನ ಹೆಚ್ಚಳದಲ್ಲಿನ ತಾರತಮ್ಯವು ದುರದೃಷ್ಟಕರ. ಸಂಸ್ಥೆಯ ಬೆಳವಣಿಗೆಯಲ್ಲಿ ಉದ್ಯೋಗಿಗಳ ಪಾತ್ರವನ್ನು ತಿಳಿದುಕೊಳ್ಳಬೇಕಿದೆ. ನಿರ್ವಹಣೆಯ ಮೂಲಭೂತ ವಿಚಾರಗಳನ್ನು ನಾವು ಅರ್ಥ ಮಾಡಿಕೊಂಡಿಲ್ಲ. ಕಂಪನಿಗಳು ತಮ್ಮ ಮಾರ್ಕೆಟಿಂಗ್ ಬಜೆಟ್‌ನ ಒಂದು ಭಾಗವನ್ನು ಉದ್ಯೋಗಿಗಳನ್ನು ಉತ್ತೇಜಿಸಲು, ಪ್ರೋತ್ಸಾಹಿಸಲು ಮತ್ತು ಸಕ್ರಿಯರಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಖರ್ಚು ಮಾಡಿದರೆ, 10 ಪಟ್ಟು ಹೆಚ್ಚು ಆದಾಯವನ್ನು ಗಳಿಸಬಹುದು’ ಎಂದು ಎಚ್ಸಿಎಲ್ ಟೆಕ್ನ ಮಾಜಿ ಸಿಇಒ ವಿನೀತ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಐಐಟಿ ಬಾಂಬೆಯ 25 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವೇತನದ ಉದ್ಯೋಗದ ಆಫರ್
ನಿರ್ದಿಷ್ಟ ಕಂಪನಿಯೊಂದರಲ್ಲಿ ಕೆಲಸ ಮಾಡುವ ಸಿಇಒ ಮತ್ತು ಅದೇ ಕಂಪನಿಯ ಹೊಸ ಉದ್ಯೋಗಿಗಳ ನಡುವಣ ವೇತನ ಹೆಚ್ಚಳದ ಅನುಪಾತ ಎಷ್ಟಿದೆ ಎಂಬುದನ್ನು ‘ಟೀಮ್ಲೀಸ್ ಡಿಜಿಟಲ್ ರಿಪೋರ್ಟ್’ ಬಹಿರಂಗಪಡಿಸಿದೆ. ಈ ಅನುಪಾತ ಇನ್ಫೋಸಿಸ್ನಲ್ಲಿ 1,973, ವಿಪ್ರೋದಲ್ಲಿ 2,111, ಎಚ್ಸಿಎಲ್ ಟೆಕ್ನಾಲಜೀಸ್ನಲ್ಲಿ 1,020, ಟೆಕ್ ಮಹೀಂದ್ರಾದಲ್ಲಿ 644 ಹಾಗೂ ಟಿಸಿಎಸ್ನಲ್ಲಿ 619 ಇದೆ.
ಕೌಶಲ ಕೊರತೆ ಕಾರಣವೇ?
ವೇತನ ಹೆಚ್ಚಳ ಪ್ರಮಾಣದಲ್ಲಿ ಈ ಮಟ್ಟಕ್ಕೆ ತಾರತಮ್ಯ ಕಾಣಿಸಲು ಈಗಿನ ಪದವೀಧರರಲ್ಲಿರುವ ಕೌಶಲದ ಕೊರತೆಯೇ ಕಾರಣ ಎಂದು ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಘಟನೆಯ (NASSCOM) ಮಾಜಿ ಅಧ್ಯಕ್ಷ ಕಿರಣ್ ಕಾರ್ಣಿಕ್ ಹೇಳಿದ್ದಾರೆ. ಕಂಪನಿಗಳಿಗೆ ಅಗತ್ಯ ಇರುವಷ್ಟು ಕೌಶಲವನ್ನು ಅವರು (ಹೊಸಬರು) ಹೊಂದಿರುವುದಿಲ್ಲ. ಅವರು ಡೊಮೇನ್ ಕೌಶಲ್ಯಗಳನ್ನು ಹೊಂದಿರುವುದಿಲ್ಲ ಮತ್ತು ಅದರಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ತಂಡಗಳಲ್ಲಿ ಕೆಲಸ ಮಾಡುವುದು, ಯಾವುದೇ ಭಾಷೆಯಲ್ಲಿ ಸಂವಹನ ಮಾಡುವ ಕೌಶಲಗಳಿರುವುದಿಲ್ಲ ಎಂದು ಕಿರಣ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Tue, 27 December 22