ವಿನಿಮಯ ಫೈಲಿಂಗ್ ಪ್ರಕಾರ, ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದ ಪ್ರಮುಖ ಕಂಪೆನಿಯಾದ ವಿಪ್ರೋ ಲಿಮಿಟೆಡ್ (Wipro Limited) ಪ್ರಸಕ್ತ ಹಣಕಾಸು ವರ್ಷ 2021-22ಕ್ಕೆ ಪ್ರತಿ ಷೇರಿಗೆ ರೂ. 5ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಕಂಪೆನಿಯು ತನ್ನ ಷೇರುದಾರರಿಗೆ ಪಾವತಿಸುತ್ತಿರುವ ಎರಡನೇ ಮಧ್ಯಂತರ ಲಾಭಾಂಶ ಇದಾಗಿದೆ. ವಿಪ್ರೋ ಈ ವರ್ಷದ ಜನವರಿಯಲ್ಲಿ ತನ್ನ ಮೊದಲ ಮಧ್ಯಂತರ ಲಾಭಾಂಶವನ್ನು ಘೋಷಿಸಿತು. “ಮಾರ್ಚ್ 25, 2022ರಂದು ನಡೆದ ವಿಪ್ರೋ ಲಿಮಿಟೆಡ್‌ನ ನಿರ್ದೇಶಕರ ಮಂಡಳಿ ಸಭೆಯು 2021-22ರ ಹಣಕಾಸು ವರ್ಷಕ್ಕೆ ತಲಾ 2 ರೂಪಾಯಿ ಬೆಲೆಯ ಈಕ್ವಿಟಿ ಷೇರಿಗೆ ರೂ. 5ರ ಮಧ್ಯಂತರ ಲಾಭಾಂಶವನ್ನು ಪರಿಗಣಿಸಿದೆ ಮತ್ತು ಅನುಮೋದಿಸಿದೆ,” ಎಂದು ವಿಪ್ರೋ ತನ್ನ ಫೈಲಿಂಗ್ನಲ್ಲಿ ಹೇಳಿದೆ. ಶುಕ್ರವಾರ (ಮಾರ್ಚ್ 25, 2022) ವಿಪ್ರೋ ಷೇರುಗಳು ಎನ್‌ಎಸ್‌ಇಯಲ್ಲಿ ಶೇ 1ರಷ್ಟು ಅಂದರೆ, ರೂ. 604.45ಕ್ಕೆ ಕುಸಿದವು. ಇಲ್ಲಿಯವರೆಗೆ 2022ನೇ ಇಸವಿಯಲ್ಲಿ ಈ ಸ್ಟಾಕ್ ಸುಮಾರು ಶೇ 16ರಷ್ಟು ಕುಸಿದಿದ್ದರೆ, ಕಳೆದ ಒಂದು ವರ್ಷದಲ್ಲಿ ಸುಮಾರು ಶೇ 50ರಷ್ಟು ಹೆಚ್ಚಾಗಿದೆ.
ಮಧ್ಯಂತರ ಲಾಭಾಂಶವನ್ನು ಪಾವತಿಸಲು ಷೇರುದಾರರ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ವಿಪ್ರೋ ಏಪ್ರಿಲ್ 6ರ ದಿನವನ್ನು ದಾಖಲೆ ದಿನಾಂಕವಾಗಿ ನಿಗದಿಪಡಿಸಿದೆ. ಈ ಮೇಲೆ ಹೇಳಲಾದ ಲಾಭಾಂಶವನ್ನು ಏಪ್ರಿಲ್ 24ರಂದು ಅಥವಾ ಅದಕ್ಕೂ ಮೊದಲು ಪಾವತಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಸೇವೆಗಳಿಂದ ತನ್ನ ಆದಾಯದ ಬಹುಪಾಲು ಪಡೆಯುವ ವಿಪ್ರೋ, ಮಾರ್ಚ್ 2022 ತ್ರೈಮಾಸಿಕದಲ್ಲಿ ಆ ವ್ಯವಹಾರದಿಂದ ಯುಎಸ್ಡಿ 2,692ರಿಂದ 2,745 ಮಿಲಿಯನ್‌ನಷ್ಟು ಆದಾಯವನ್ನು ನಿರೀಕ್ಷಿಸುತ್ತದೆ. ಇದು ಮಾರ್ಚ್ ತ್ರೈಮಾಸಿಕಕ್ಕೆ ಶೇ 2ರಿಂದ 4ರಷ್ಟು ಅನುಕ್ರಮ ಬೆಳವಣಿಗೆಗೆ ಅನುವಾದಿಸುತ್ತದೆ.
ವಿಪ್ರೋ ಡಿಸೆಂಬರ್ 2021ರ ತ್ರೈಮಾಸಿಕದಲ್ಲಿ ರೂ. 2,969 ಕೋಟಿಗಳ ಏಕೀಕೃತ ನಿವ್ವಳ ಲಾಭವನ್ನು ಪ್ರಕಟಿಸಿದೆ ಮತ್ತು ಆದಾಯ ಹಾಗೂ ಆರ್ಡರ್ ಬುಕಿಂಗ್‌ನಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ದಾಖಲಿಸಿದೆ ಎಂದು ಹೇಳಿದೆ. ಲಾಭವು ಹಿಂದಿನ ವರ್ಷದ ಅವಧಿಯ ರೂ. 2,968 ಕೋಟಿಗಿಂತ ಬಹುತೇಕ ಸಮನಾಗಿದೆ. 2020ರ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕ ಬಂದ ಆದಾಯವು ರೂ. 15,670 ಕೋಟಿಯಿಂದ ರೂ. 20,313.6 ಕೋಟಿ ರೂಪಾಯಿಗೆ ಹೆಚ್ಚಳವಾಗಿ, ಶೇ 29.6ರಷ್ಟು ಜಾಸ್ತಿಯಾಗಿದೆ.
ಇದನ್ನೂ ಓದಿ: Wipro: ನವೀಮುಂಬೈನಲ್ಲಿ ತಿಂಗಳಿಗೆ 56 ರೂ. ಬಾಡಿಗೆಯಂತೆ 3.5 ಲಕ್ಷ ಚದರಡಿ ಕಚೇರಿ ಸ್ಥಳವನ್ನು ಭೋಗ್ಯಕ್ಕೆ ಪಡೆದ ವಿಪ್ರೋ!