Wipro: ನವೀಮುಂಬೈನಲ್ಲಿ ತಿಂಗಳಿಗೆ 56 ರೂ. ಬಾಡಿಗೆಯಂತೆ 3.5 ಲಕ್ಷ ಚದರಡಿ ಕಚೇರಿ ಸ್ಥಳವನ್ನು ಭೋಗ್ಯಕ್ಕೆ ಪಡೆದ ವಿಪ್ರೋ!
ಮೂಲಗಳು ತಿಳಿಸಿರುವಂತೆ ನವೀ ಮುಂಬೈನಲ್ಲಿ 3.5 ಲಕ್ಷ ಚದರಡಿಯ ಕಚೇರಿ ಸ್ಥಳವನ್ನು ಬೆಂಗಳೂರು ಮೂಲದ ಐಟಿ ಕಂಪೆನಿ ವಿಪ್ರೋ ಭೋಗ್ಯಕ್ಕೆ ಪಡೆದಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.
ಬೆಂಗಳೂರು ಮೂಲದ ಸಾಫ್ಟ್ವೇರ್ ಪ್ರಮುಖ ಕಂಪೆನಿಯಾದ ವಿಪ್ರೋದಿಂದ ನವೀ ಮುಂಬೈನ ಐರೋಲಿಯಲ್ಲಿ ಇರುವ ಕೆ ರಹೇಜ ಕಾರ್ಪೊರೇಷನ್ ಮೈಂಡ್ಸ್ಪೇಸ್ ಬಿಜಿನೆಸ್ ಪಾರ್ಕ್ನಲ್ಲಿ 3.5 ಲಕ್ಷ (ಮೂರೂವರೆ ಲಕ್ಷ) ಚದರಡಿಯ ಕಚೇರಿಯ ಪೂರ್ತಿ ಸ್ಥಳವನ್ನು ಭೋಗ್ಯಕ್ಕೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ದೀರ್ಘಾವಧಿಯ ಭೋಗ್ಯದ ಒಪ್ಪಂದ ಆಗಿದೆ ಎಂದು ಈ ಬೆಳವಣಿಗೆ ಬಗ್ಗೆ ನೇರ ಮಾಹಿತಿ ಇರುವವರು ತಿಳಿಸಿರುವುದಾಗಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ (SEZ) ಮೈಂಡ್ಸ್ಪೇಸ್ ಐರೋಲಿ ಪೂರ್ವದ ಈ ಆಸ್ತಿಯ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಕೆ.ರಹೇಜ ಕಾರ್ಪೊರೇಷನ್ ಮತ್ತು ಬ್ಲ್ಯಾಕ್ಸ್ಟೋನ್ ಸಮೂಹದ ಬೆಂಬಲ ಇರುವ ಲಿಸ್ಟೆಡ್ ಮೈಂಡ್ಸ್ಪೇಸ್ ಬಿಜಿನೆಸ್ ಪಾರ್ಕ್ಸ್ ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ನಿಂದ (REIT) ಮಾಡಲಾಗುತ್ತಿದೆ.
ಈ ಸ್ಥಳವನ್ನು ವಿಪ್ರೋ ಒಟ್ಟು 10 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದಿದೆ. ಒಪ್ಪಂದದ ಅನ್ವಯ ಮೂರು ವರ್ಷಕ್ಕೆ ಒಮ್ಮೆ ಬಾಡಿಗೆಯನ್ನು ಶೇ 15ರಷ್ಟು ಹೆಚ್ಚಳ ಮಾಡುವುದಕ್ಕೆ ಒಪ್ಪಂದದಲ್ಲಿ ಅವಕಾಶ ಇದೆ. ಆರಂಭದಲ್ಲಿ ವಿಪ್ರೋದಿಂದ ಒಂದು ಚದರಡಿಗೆ ತಿಂಗಳಿಗೆ 59 ರೂಪಾಯಿಯಂತೆ ಪಾವತಿಸಲಾಗುತ್ತದೆ. ಈ ವ್ಯವಹಾರ ಅಂತಿಮವಾಗಿದ್ದು, ಸಹಿ ಕೂಡ ಮಾಡಲಾಗಿದೆ. ಮುಂದಿನ ಕೆಲ ವಾರಗಳಲ್ಲಿ ವಿಪ್ರೋ ಇದೇ ಸ್ಥಳದಿಂದ ಕೆಲಸ ಶುರು ಮಾಡಲಿದೆ ಮೂಲಗಳು ಖಚಿತಪಡಿಸಿವೆ. ಆದರೆ ಈ ಒಪ್ಪಂದದ ವಿಚಾರವಾಗಿ ವಿಪ್ರೋದಿಂದಾಗಲೀ ರಹೇಜ ಕಡೆಯಿಂದಾಗಲೀ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಈ ಬಿಜಿನೆಸ್ ಪಾರ್ಕ್ನಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ವಿಪ್ರೋ ಅಸ್ತಿತ್ವ ಇದೆ. ಈ ಒಪ್ಪಂದದ ಮೂಲಕವಾಗಿ ಇಲ್ಲಿನ ಕಿರು ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಇನ್ನಷ್ಟು ವಿಸ್ತರಿಸಿಕೊಂಡಂತೆ ಆಗುತ್ತದೆ. ಹೊಸ ಸ್ಥಳವನ್ನು ಸಾಫ್ಟ್ವೇರ್ ಅಭಿವೃದ್ಧಿ ಮತ್ತು ರಫ್ತಿಗಾಗಿ ಬಳಸಿಕೊಳ್ಳಲಿದೆ ಎನ್ನಲಾಗಿದೆ. ವೆಚ್ಚದ ಕ್ಷಮತೆ, ಗೇಟೆಡ್ ಸಮುಚ್ಚಯಗಳಲ್ಲಿ ಇರುವ ಗ್ರೇಡ್ ಎ ಕಚೇರಿ ಸ್ಥಳಗಳು ಈ ಕಾರಣಗಳಿಂದ ಟೆಕ್ನಾಲಜಿ ಕಂಪೆನಿಗಳು ವಾಣಿಜ್ಯ ಲೀಸಿಂಗ್ಗೆ ನವೀ ಮುಂಬೈ ಆಕರ್ಷಿಸುತ್ತಿದೆ. ಮುಂಬೈ ಭಾಗದಲ್ಲಿ ಮೈಂಡ್ಸ್ಪೇಸ್ ಬಿಜಿನೆಸ್ ಪಾರ್ಕ್ ಐರೋಲಿ ಪೂರ್ವದ ಕಚೇರಿ ಸಮುಚ್ಚಯ ಅತಿ ದೊಡ್ಡದು. 50 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದೇ ಪಾರ್ಕ್ನಲ್ಲಿ ಆಕ್ಸೆಂಚರ್, ಎಲ್ ಅಂಡ್ ಟಿ, ಕಾಗ್ನಿಜಂಟ್, ಗೆಬ್ಸ್ ಮತ್ತು ಡಿಎಸ್ಟಿ ವರ್ಲ್ಡ್ವೈಡ್ನಂಥ ಪ್ರಮುಖ ಬಾಡಿಗೆದಾರರಿದ್ದಾರೆ.
ಈ ಬಿಜಿನೆಸ್ ಪಾರ್ಕ್ನಲ್ಲಿ ಒಟ್ಟು 68 ಲಕ್ಷ ಚದರಡಿಯ ಅಭಿವೃದ್ಧಿ ಮಾಡಬಹುದಾದಷ್ಟು ಸ್ಥಳ ಇದೆ. ಅದರಲ್ಲಿ 47 ಲಕ್ಷ ಚದರಡಿಯಷ್ಟನ್ನು ಅಭಿವೃದ್ಧಿ ಮಾಡಿ, ಭೋಗ್ಯಕ್ಕೆ ನೀಡಲಾಗಿದೆ. ಈಗಿನ ವಿಪ್ರೋದ ಭೋಗ್ಯ ವಹಿವಾಟು ಇನ್ನಷ್ಟು ವಿಸ್ತರಣೆ ಮಾಡಿದಂತಾಗುತ್ತದೆ. ಸ್ಥಿರವಾದ ಆರ್ಥಿಕ ಚೇತರಿಕೆ, ದೇಶದಾದ್ಯಂತ ಪರಿಣಾಮಕಾರಿ ಲಸಿಕೆ ಅಭಿಯಾನ ಮತ್ತು ಉದ್ಯೋಗಿಗಳು ಕಚೇರಿಗೆ ಮರಳುತ್ತಿರುವುದರಿಂದ ಕಾರ್ಪೊರೇಟ್ ಪ್ಲ್ಯಾನಿಂಗ್ ಹೆಚ್ಚುತ್ತಿರುವುದು ಇವೆಲ್ಲ ಸೇರಿ ಪ್ರಮುಖ ಆಸ್ತಿ ಮಾರುಕಟ್ಟೆಯಲ್ಲಿ ದೊಡ್ಡ ಕಚೇರಿ ಸ್ಥಳಗಳ ಭೋಗ್ಯದ ವಹಿವಾಟುಗಳು ಜಾಸ್ತಿ ಆಗಲು ಕಾರಣ ಆಗಿವೆ.
ಜಾಗತಿಕ ಸಂಸ್ಥೆಗಳು ಮತ್ತು ದೇಶೀಯ ಕಾರ್ಪೊರೇಷನ್ಗಳಾದ ಗೂಗಲ್, ಇಂಟೆಲ್ ಟೆಕ್ನಾಲಜೀಸ್, ಎಬಿಬಿ, ವೀವರ್ಕ್ ಮತ್ತು ವೆರಿಟಾಸ್ ಸಾಫ್ಟ್ವೇರ್ ಟೆಕ್ನಾಲಜೀಸ್, ಸ್ಯಾಮ್ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಕಂಪೆನಿಗಳು ದೊಡ್ಡ ದೊಡ್ಡ ಕಚೇರಿ ಸ್ಥಳಗಳನ್ನು ಭೋಗ್ಯಕ್ಕೆ ಪಡೆಯುತ್ತಿವೆ.
ಇದನ್ನೂ ಓದಿ: Wipro FY22 Q2 Results: ವಿಪ್ರೋ ಕಂಪೆನಿ ಎರಡನೇ ತ್ರೈಮಾಸಿಕ ಲಾಭ 2931 ಕೋಟಿ ರೂಪಾಯಿ
Published On - 11:18 am, Mon, 25 October 21