ಐಟಿಆರ್ ಸಲ್ಲಿಸಲು ಸೆ. 15 ಡೆಡ್​ಲೈನ್; ತಡವಾದರೆ ದಂಡ; ಫೈಲಿಂಗ್ ಮಾಡದಿದ್ದರೆ ಇನ್ನೂ ದೊಡ್ಡ ಅಪಾಯ

Know what happens for delayed ITR: ಸೆಪ್ಟೆಂಬರ್ 15ರೊಳಗೆ ಐಟಿಆರ್ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಗಡುವು ಕೊಟ್ಟಿದೆ. ಈ ದಿನದ ಬಳಿಕ ಡಿಸೆಂಬರ್ 31ರವರೆಗೆ ಕಟ್ಟುವ ಅವಕಾಶ ಇದೆಯಾದರೂ ವಿಳಂಬ ಐಟಿಆರ್ ಎಂದು ಪರಿಗಣಿಸಲಾಗುತ್ತದೆ. ತಡಪಾವತಿ ಶುಲ್ಕ, ಬಡ್ಡಿ ಇತ್ಯಾದಿ ವಿವಿಧ ದಂಡಗಳನ್ನು ಪಾವತಿಸಬೇಕು. ಈ ಬಗ್ಗೆ ಮಾಹಿತಿ...

ಐಟಿಆರ್ ಸಲ್ಲಿಸಲು ಸೆ. 15 ಡೆಡ್​ಲೈನ್; ತಡವಾದರೆ ದಂಡ; ಫೈಲಿಂಗ್ ಮಾಡದಿದ್ದರೆ ಇನ್ನೂ ದೊಡ್ಡ ಅಪಾಯ
ಐಟಿಆರ್

Updated on: Sep 14, 2025 | 8:42 PM

ನವದೆಹಲಿ, ಸೆಪ್ಟೆಂಬರ್ 14: ಐಟಿ ರಿಟರ್ನ್ (IT returns) ಸಲ್ಲಿಸಲು ಸೆಪ್ಟೆಂಬರ್ 15, ಸೋಮವಾರ ಕೊನೆಯ ದಿನವಾಗಿದೆ. ಇನ್ಕಮ್ ಟ್ಯಾಕ್ಸ್ ಆಡಿಟ್ ಮಾಡುವವರಿಗೆ ಬೇರೆ ಕಾಲಾವಕಾಶ ಇದೆ. ಬಹುತೇಕ ಸಂಬಳದಾರರಿಗೆ ನಾಳೆಯೇ ಡೆಡ್​ಲೈನ್. ಆದರೆ, ಸೆಪ್ಟೆಂಬರ್ 15ರ ನಂತರ ಐಟಿಆರ್ ಸಲ್ಲಿಸಲು ಆಗುವುದಿಲ್ಲ ಎಂದಲ್ಲ. ತಡವಾಗಿ ಐಟಿಆರ್ ಸಲ್ಲಿಸುವ ಅವಕಾಶ ಇರುತ್ತದೆ. ಆದರೆ, ತಡಪಾವತಿ ಶುಲ್ಕ ಮತ್ತಿತರ ದಂಡಗಳನ್ನು ತೆರಬೇಕಾಗುತ್ತದೆ. ಸೆ. 15ರ ಡೆಡ್​ಲೈನ್​ನಲ್ಲಿ ಫೈಲ್ ಮಾಡಲಾಗದವರು ಡಿಸೆಂಬರ್ 31ರವರೆಗೆ ದಂಡ ಸಮೇತವಾಗಿ ಐಟಿಆರ್ ಸಲ್ಲಿಸಬಹುದು.

ತಡವಾಗಿ ಐಟಿಆರ್ ಸಲ್ಲಿಸಿದರೆ ಆಗುವ ಸಮಸ್ಯೆಗಳಿವು…

ತಡ ಪಾವತಿ ಶುಲ್ಕ: ಸೆಕ್ಷನ್ 234ಎಫ್ ಅಡಿಯಲ್ಲಿ, ಐಟಿಆರ್ ಸಲ್ಲಿಕೆ ವಿಳಂಬವಾದಲ್ಲಿ 5,000 ರೂವರೆಗೆ ದಂಡ ಕಟ್ಟಬೇಕಾಗಬಹುದು. ವಾರ್ಷಿಕ ಆದಾಯ 5 ಲಕ್ಷ ರೂ ಒಳಗೆ ಇದ್ದು ಐಟಿಆರ್ ಸಲ್ಲಿಕೆ ವಿಳಂಬವಾದರೆ 1,000 ರೂ ಶುಲ್ಕ ಪಾವತಿಸಬೇಕು. ಐದು ಲಕ್ಷ ರೂಗಿಂತ ಹೆಚ್ಚಿದ್ದರೆ 5,000 ರೂ ಲೇಟ್ ಫೀ ಇದೆ.

ತೆರಿಗೆ ಬಾಕಿಯ ಮೇಲೆ ಬಡ್ಡಿ: ತೆರಿಗೆ ಬಾಧ್ಯತೆ ಇರುವ ಮೊತ್ತದ ಜೊತೆಗೆ ಅದಕ್ಕೆ ಬಡ್ಡಿಯನ್ನೂ ಸೇರಿಸಿ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: ಐಟಿ ರಿಟರ್ನ್ ಸಲ್ಲಿಕೆಗೆ ಸೆ. 15 ಡೆಡ್​ಲೈನ್; ಈ ವಿಷಯಗಳು ತಿಳಿದಿರಲಿ

ನಷ್ಟ ಸರಿದೂಗಿಸುವ ಅವಕಾಶ ಇಲ್ಲ: ಆ ವರ್ಷ ನೀವು ಆಸ್ತಿ ಮಾರಾಟದಿಂದ ನಷ್ಟ ಕಂಡಿದ್ದರೆ ಅದನ್ನು ಮುಂದಿನ ಹಣಕಾಸು ವರ್ಷದ ಆದಾಯ ಲೆಕ್ಕಾಚಾರಕ್ಕೆ ಪರಿಗಣಿಸಬಹುದು. ನಷ್ಟವನ್ನು ಸರಿದೂಗಿಸಬಹುದು. ತಡವಾಗಿ ಐಟಿಆರ್ ಸಲ್ಲಿಸಿದಾಗ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಲಾಗುವುದಿಲ್ಲ.

ರೀಫಂಡ್ ವಿಳಂಬವಾಗಬಹುದು: ತಡವಾಗಿ ಐಟಿ ರಿಟರ್ಸ್ ಫೈಲ್ ಮಾಡಿದರೆ ಸಹಜವಾಗಿ ರೀಫಂಡ್ ಕೂಡ ವಿಳಂಬವಾಗಿ ಸಿಗಬಹುದು.

ಐಟಿ ಇಲಾಖೆ ನಿಗಾ: ತಡವಾಗಿ ಐಟಿ ರಿಟರ್ನ್ಸ್ ಸಲ್ಲಿಸುವವರ ಮೇಲೆ ಆದಾಯ ತೆರಿಗೆ ಇಲಾಖೆ ಹೆಚ್ಚು ನಿಗಾ ಇಡುತ್ತದೆ. ಇದು ಗಮನದಲ್ಲಿರಲಿ.

ಕೆಲ ಡಿಡಕ್ಷನ್ ಅವಕಾಶ ಇರಲ್ಲ: ತಡವಾಗಿ ಐಟಿಆರ್ ಸಲ್ಲಿಸುತ್ತಿದ್ದರೆ ಹಲವು ಸೌಲಭ್ಯಗಳು ಸಿಕ್ಕೋದಿಲ್ಲ. ಹೆಚ್​ಆರ್​ಎ ಟ್ಯಾಕ್ಸ್ ಡಿಡಕ್ಷನ್, ಇಪಿಎಫ್ 8ಸಿ ಡಿಡಕ್ಷನ್, ಎಲ್​ಟಿಎ ಕ್ಲೇಮ್ಸ್ ಇತ್ಯಾದಿ ಸೌಲಭ್ಯಗಳನ್ನು ಬಳಸಲು ಆಗುವುದಿಲ್ಲ.

ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ

ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಐಟಿಆರ್ ಸಲ್ಲಿಕೆ ಮಾಡದೇ ಇರುವುದು ಇನ್ನೂ ದೊಡ್ಡ ತಪ್ಪು…

ಐಟಿ ರಿಟರ್ನ್ಸ್ ಅನ್ನು ತಡವಾಗಿ ಸಲ್ಲಿಸಿದರೆ ದಂಡ ಕಟ್ಟಬೇಕಾದೀತೆಂದು ಐಟಿಆರ್ ಸಲ್ಲಿಕೆಯನ್ನೇ ಮಾಡದಿರುವುದು ಇನ್ನೂ ದೊಡ್ಡ ತಪ್ಪಾಗುತ್ತದೆ. 3 ತಿಂಗಳಿಂದ ಹಿಡಿದು 2 ವರ್ಷದವರೆಗೆ ಜೈಲುಶಿಕ್ಷೆಯಾಗಬಹುದು. ಟ್ಯಾಕ್ಸ್ ಬಾಧ್ಯತೆ 25 ಲಕ್ಷ ರೂ ಮೀರಿದರೆ ಜೈಲು ಶಿಕ್ಷೆ 6 ತಿಂಗಳಿಂದ 7 ವರ್ಷದವರೆಗೆ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ